ಬೆಂಗಳೂರು: ಯುವತಿಯರ ಶೌಚಾಲಯಕ್ಕೆ ಇಣುಕಿ ನೋಡುವುದು ಮತ್ತು ಅವರ ಆಕ್ಷೇಪಾರ್ಹ ವಿಡಿಯೋಗಳನ್ನು ರೆಕಾರ್ಡ್ ಮಾಡಿದ ಆರೋಪದಡಿ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ.
ದ್ವಾರಕಾನಗರದ ನಿವಾಸಿ ಉತ್ತರ ಭಾರತ ಮೂಲದ ಶುಭಂ ಎಂ.ಆಜಾದ್(21) ಬಂಧಿತ ಆರೋಪಿ. ಹೊಸಕೆರೆಹಳ್ಳಿಯ ಖಾಸಗಿ ಕಾಲೇಜೊಂದರಲ್ಲಿ 5ನೇ ಸೆಮಿಸ್ಟರ್ ಬಿಬಿಎ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದ.
ಶೌಚಾಲಯದಲ್ಲಿ ಅವಿತುಕೊಂಡು ವಿದ್ಯಾರ್ಥಿನೀಯರ ಅರೆನಗ್ನ ವಿಡಿಯೋ ಚಿತ್ರೀಕರಿಸಿರುವ ಪ್ರಕರಣ ಗಿರಿನಗರ ಪೊಲೀಸ್ ಠಾಣೆ ದೂರು ದಾಖಲಾಗಿದೆ. ಅರೋಪಿ ಶುಭಂ ಈ ಹಿಂದೆಯೇ ಅರೆನಗ್ನ ವಿಡಿಯೋ ಮಾಡಿ ಸಿಕ್ಕಿ ಬಿದ್ದಿದ್ದ. ಅಧ್ಯಾಪಕರು ಎಚ್ಚರಿಕೆ ಕೊಟ್ಟು ವಿಷಯವನ್ನು ಅಲ್ಲಿಗೇ ಬಿಟ್ಟಿದ್ದರು. ಹೀಗಿದ್ದರೂ ಪುನಃ ಕೃತ್ಯ ಮುಂದುವರೆಸಿದ ಹಿನ್ನೆಲೆಯಲ್ಲಿ ದೂರು ಕೊಡಲಾಗಿದೆ.
ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎ. ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿರುವ ಶುಭಂ ಕಾಲೇಜು ವಿಡಿಯೋ ಚಿತ್ರೀಕರಣ ಮಾಡುತ್ತಿರುವ ಬಗ್ಗೆ ವಿದ್ಯಾರ್ಥಿನೀಯರು ಅಧ್ಯಾಪಕರಿಗೆ ದೂರು ನೀಡಿದ್ದರು. ಹೀಗಾಗಿ ಶುಭಂನನ್ನು ಕರೆಸಿ ವಿಚಾರಣೆ ನಡೆಸಲಾಗಿದೆ. ತನ್ನ ಆರೋಪವನ್ನು ಆರೋಪಿಯು ಒಪ್ಪಿಕೊಂಡಿದ್ದಾನೆ.
ನವೆಂಬರ್ 13ರಂದು ಸಂಜೆ ಇಬ್ಬರು ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಹೋದ ವೇಳೆ 2 ಶೌಚಾಲಯಗಳೂ ಒಳಗಿನಿಂದ ಲಾಕ್ ಆಗಿದ್ದವು. ಹೀಗಾಗಿ ಇವರು ಕಾಯುತ್ತಿದ್ದಾಗ, ಆರೋಪಿಯು ಶೌಚಗೃಹದ ಮೇಲಿಂದ ಮೊಬೈಲ್‌ನಲ್ಲಿ ರಹಸ್ಯವಾಗಿ ವಿಡಿಯೋ ಸೆರೆಹಿಡಿಯುವುದನ್ನು ಗಮನಿಸಿ ವಿದ್ಯಾರ್ಥಿನೀಯರು ಕೂಗಿಕೊಂಡಿದ್ದಾರೆ.
ಶುಭಂನನ್ನು ಕರೆದು ವಿಚಾರಣೆ ಮಾಡಿದಾಗ ಆತ ಸತ್ಯ ಬಾಯ್ಬಿಟ್ಟಿ ದ್ದಾನೆ. ವಿದ್ಯಾರ್ಥಿನಿಯರು ಶೌಚಾಲಯ ದೊಳಗೆ ಬಂದು ಬಟ್ಟೆ ತೆಗೆಯುವ ಸಂದರ್ಭದಲ್ಲಿ ವಿಡಿಯೋ ಮಾಡಿಕೊಂಡಿರುತ್ತೇನೆ. ಇದೇ ರೀತಿ 1,200 ವಿಡಿಯೋಗಳು ನನ್ನ ಮೊಬೈಲ್ ನಲ್ಲಿವೆ ಎಂದು ಹೇಳಿದ್ದ. ಆದರೆ, ಮತ್ತೆ ತನ್ನ ಚಾಳಿಯನ್ನು ಮುಂದುವರೆಸಿದ್ದಾನೆ. ಆರೋಪಿ ಶುಭಂ ಮತ್ತೆ ನವೆಂಬರ್ 18ರಂದು ಸಿಕ್ಕಿಬಿದ್ದಿದ್ದಾನೆ.
ವಿದ್ಯಾರ್ಥಿ ಶುಭಂ ವಿಡಿಯೋಗಳನ್ನು ಯಾರಿಗಾದರೂ ಕಳುಹಿಸುತ್ತಿದ್ದನೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಆತನ ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳ ಮಾಹಿತಿಗಳನ್ನು ಕಲೆಹಾಕುಲಾಗುತ್ತಿದೆ. ಅಷ್ಟೇ ಅಲ್ಲದೆ, ಆತನ ಮೊಬೈಲ್‌ನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‌ಎಸ್‌ಎಲ್) ಕಳುಹಿಸಲಾಗಿದೆ. ಅಲ್ಲಿನ ವರದಿಯಲ್ಲಿ ವಿಡಿಯೋಗಳನ್ನು ಯಾರಿಗೆ ರವಾನಿಸಲಾಗುತ್ತಿತ್ತು ಎಂಬುದರ ಬಗ್ಗೆ ಮಾಹಿತಿ ಸಿಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಯು ವಿಚಾರಣೆ ವೇಳೆ ತಾನು ರೆಕಾರ್ಡ್ ಮಾಡಿಕೊಂಡ ವಿಡಿಯೋಗಳನ್ನು ಯಾರಿಗೂ ಕಳುಹಿಸಿಲ್ಲ ಎಂದು ತಿಳಿಸಿದ್ದಾನೆ.
ವರದಿ: ಸಾಗರ್ ಕೂಡಗಿ