ಕುಂದಾಪುರ: ಉಡುಪಿ ಜಿಲ್ಲೆಯ ಹಿರಿಯ ಕಾರ್ಮಿಕ ನಾಯಕ ಯು. ದಾಸ ಭಂಡಾರಿ (80) ಮಂಗಳವಾರ ತಡರಾತ್ರಿ ಕೋಣಿಯ ತಮ್ಮ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.
ಜಿಲ್ಲೆಯಲ್ಲಿ ಕಾರ್ಮಿಕ ಸಂಘಟನೆಗಳನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಭೂಸುಧಾರಣೆಯ ಹೋರಾಟದ ಸಮಯದಲ್ಲಿ ದೈಹಿಕ ಹಲ್ಲೆಗೆ ಒಳಗಾಗಿದ್ದರೂ ಹೋರಾಟದಿಂದ ಹಿಂದೆ ಸರಿದಿರಲಿಲ್ಲ. ವಿವಿಧ ಕಾರ್ಮಿಕ ಸಂಘಟನೆಯನ್ನು ಕಟ್ಟುವಲ್ಲಿ ಶ್ರಮಿಸಿದ್ದ ಅವರು, ಸರ್ಕಾರದ ಸೌಲಭ್ಯಗಳನ್ನು ಕಾರ್ಮಿಕರಿಗೆ ಕೊಡಿಸುವಲ್ಲಿ ಅವಿರತ ಹೋರಾಟವನ್ನು ನಡೆಸಿದ್ದರು.
1964ರಲ್ಲಿ ಕುಂದಾಪುರದ ಕೋಣಿಯ ಗುಲಾಬಿಯವರನ್ನು ವಿವಾಹವಾದ ಬಳಿಕ ಕೋಟೇಶ್ವರದಲ್ಲಿ ಕ್ಷೌರಿಕ ವೃತ್ತಿಯಲ್ಲಿದ್ದುಕೊಂಡು ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು. ಕೋಟೇಶ್ವರ ಪಂಚಾಯತ್ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ “ಉಳುವವನೇ ಹೊಲದೊಡೆಯ” ಘೋಷಣೆಯಲ್ಲಿ ಭೂ ಸುಧಾರಣೆಗಾಗಿ ಹೋರಾಟದ ನೇತೃತ್ವ ವಹಿಸಿದ ಅವರು ಕುಂದಾಪುರದ ಸುಮಾರು ಮೂವತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ರೈತ ಸಂಘದ ಘಟಕಗಳನ್ನು ರಚಿಸಿ ಗೇಣಿದಾರರ ಪರವಾಗಿ ಹೋರಾಟ ನಡೆಸಿದ್ದರು.
ಕೋಣಿಯಲ್ಲಿ ಗೇಣಿದಾರರ ಭೂಮಿ ಉಳಿಸಿಕೊಳ್ಳಲು ನಡೆಸಿದ ಹೋರಾಟದಲ್ಲಿ ಭೂ ಮಾಲೀಕರ ದಾಳಿಗೆ ಒಳಗಾಗಿ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು. 2000ನೇ ಇಸವಿಯ ಸುಮಾರಿಗೆ ಪಕ್ಷದ ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿಯಲು ಕರೆ ಬಂದಾಗ ತನ್ನ ವೃತ್ತಿಯನ್ನು ತ್ಯಜಿಸಿ ಪಕ್ಷದ ಚಳುವಳಿಯಲ್ಲಿ ತೊಡಗಿಸಿಕೊಂಡರು. ಹಾಗೆಯೇ ಅಂಗನವಾಡಿ, ಬಿಸಿಯೂಟ,ಆಶಾ ಮತ್ತು ಕಟ್ಟಡ ಮೊದಲಾದ ಸಂಘಟನೆಗಳನ್ನು ಜಿಲ್ಲೆಯಾದ್ಯಂತ ಕಟ್ಟಲು ಶ್ರಮಿಸಿದ್ದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘಟನೆಯ ಸ್ಥಾಪಕಾಧ್ಯಕ್ಷರಾಗಿ, ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾಗಿ, ಕೃಷಿಕೂಲಿಕಾರರ ಸಂಘಟನೆಯಲ್ಲಿಯೂ ಸಕ್ರಿಯರಾಗಿದ್ದರು. ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿಯೂ ಸಿಪಿಐಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಅನಾರೋಗ್ಯದ ಕಾರಣದಿಂದ ಕಳೆದ ಕೆಲ ದಿನಗಳಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಮೃತರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ.
ಯು ದಾಸ ಭಂಡಾರಿ ಅವರ ನಿಧನಕ್ಕೆ ಸಿಪಿಐಎಂ ಜಿಲ್ಲಾ ಸಮಿತಿ, ತಾಲೂಕು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಸಂಘ, ಕೃಷಿಕೂಲಿಕಾಋ ಸಂಘ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿವೆ.
ಈ ದಿನ ಬೆಳಿಗ್ಗೆ 11 ಗಂಟೆಯ ವರೆಗೆ ಕುಂದಾಪುರ ತಾಲೂಕಿನ ಕೋಣಿ(ಬಸ್ರೂರು ಹೋಗುವ ದಾರಿಯಲ್ಲಿ) ಪಂಚಾಯತ್ ಬಳಿಯ ಮನೆಯಲ್ಲಿ ಇರಿಸಲಾಗುವುದು.
ನಂತರ ಅವರ ದೇಹವನ್ನು ಕುಂದಾಪುರ ಚಿಕ್ಕನ್ ಸಾಲ್ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಅಂತಿಮ ನಮನ ಸಲ್ಲಿಸಲಾಗುವುದು ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.