ಗೋಕರ್ಣ: ದೇವಸ್ಥಾನ ಆವರಣದ ಹೊರಕ್ಕೂ ವಸ್ತ್ರ ಸಂಹಿತೆ; ಜನರ ಆಕ್ರೋಶ-ಫಲಕ ತೆರವು

ಕಾರವಾರ: ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ದೇವರ ದರ್ಶನ ಪಡೆಯಲು ಕೆಲವು ಕಡೆಗಳಲ್ಲಿ ವಸ್ತ್ರಸಂಹಿತೆ ಜಾರಿಯಲ್ಲಿವೆ, ಇದಕ್ಕೆ ವಿರೋಧವೂ ಇದೆ. ಪುರುಷರು ಹಾಗೂ ಮಹಿಳೆಯರಿಗೆ ಅವರಿಗೆ ಆದ ವಸ್ತ್ರ ಸಂಹಿತೆ ನೀತಿಗಳನ್ನು ಅಳವಡಿಸಿ ದೇವರ ದರ್ಶನ ಪಡೆಯುವ ಅವಕಾಶವಿದೆ. ಹೀಗೆ, ಕೆಲವು ದೇವಸ್ಥಾನಗಳು ತಮ್ಮ ನಿಯಮಗಳನ್ನು ಜಾರಿಗೊಳಿಸಿ, ಅದನ್ನು ಇಂದಿಗೂ ಜಾಲ್ತಿಗೊಳಿಸಿಕೊಂಡು ಬಂದಿದ್ದಾರೆ.

ಆದರೆ, ಇದೀಗ ವಸ್ತ್ರ ಸಂಹಿತೆ ವಿವಾದಕ್ಕೆ ಕಾರಣವಾಗಿರುವುದು ಪುರಾಣ ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ. ಇಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಆಗಮಿಸಲಿದ್ದಾರೆ. ಆತ್ಮಲಿಂಗದ ದರ್ಶನ ಪಡೆದು ಪುನೀತರಾಗುತ್ತಾರೆ. ಇಲ್ಲಿಯೂ ದೇವರ ದರ್ಶನ ಪಡೆಯಲು ವಸ್ತ್ರಸಂಹಿತೆ ನಿಯಮಗಳು ಜಾರಿಯಲ್ಲಿವೆ. ಆದರೆ, ಇದೀಗ ವಿವಾದಕ್ಕೆ ಕಾರಣವಾಗಿರುವುದು. ದೇವಸ್ಥಾನದ ಒಳಗೆ ಮಾತ್ರ ಸೀಮಿತವಾಗಿದ್ದ ವಸ್ತ್ರ ಸಂಹಿತೆ ದೇವಸ್ಥಾನದ ರಸ್ತೆಯ ವರೆಗೂ ಜಾರಿಗೊಳಿಸಲಾತ್ತು.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಆಗಮಿಸುತ್ತಾರೆ. ಜೊತೆಗೆ ದೇಶ ವಿದೇಶದಿಂದ ಬರುವ ಪ್ರವಾಸಿಗರ ನೆಚ್ಚಿನ ಧಾರ್ಮಿಕ ತಾಣವೂ ಆಗಿದೆ. ಇಲ್ಲಿನ ಮಹಾಬಲೇಶ್ವರನ ಆತ್ಮಲಿಂಗ ಸ್ಪರ್ಶ ಮಾಡಲಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ದೇವಸ್ಥಾನದ ಆಡಳಿತ ಮಂಡಳಿಯಿಂದ ನಿಯಮಗಳು ಆಗಾಗ ಬದಲಾಗುತ್ತಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ದೇವಸ್ಥಾನ ಪ್ರವೇಶಿಸುವ ಪುರುಷ ಭಕ್ತರಿಗೆ ಪಂಚೆ, ಶಲ್ಯ ಕಡ್ಡಾಯ ಮಾಡಿದ ಆಡಳಿತ ಮಂಡಳಿ ಮಹಿಳೆಯರಿಗೆ ಸೀರೆ, ಚೂಡಿದಾರವನ್ನು ಕಡ್ಡಾಯ ಮಾಡಿತ್ತು.

ಆದರೆ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ದೇವಸ್ಥಾನದ ರಥ ಬೀದಿಯಿಂದ ಪಶ್ಚಿಮ ದ್ವಾರದವರೆಗೆ ಅರೆಬರೆ ಉಡುಪು ಧರಿಸಿ ಸಾರ್ವಜನಿಕರು ಸಂಚರಿಸಲು ನಿಷೇಧಿಸಿ ಆದೇಶ ಹೊರಡಿಸಿ ನಾಮಫಲಕ ಹಾಕಿದೆ. ಗೋಕರ್ಣದ ಮುಖ್ಯ ಕಡಲತೀರ ಸೇರಿದಂತೆ ಇತರೆ ಭಾಗಕ್ಕೂ ತೆರಳಬೇಕಿದ್ದರೇ ಇದೇ ರಸ್ತೆಯಲ್ಲಿಯೇ ತೆರಳಬೇಕು. ಹೀಗಿರುವಾಗ ಸಾರ್ವಜನಿಕ ಪ್ರದೇಶಗಳಿಗೂ ವಸ್ತ್ರಸಂಹಿತೆ ನಿಯಮ ತಂದಿರುವುದಕ್ಕೆ ಜನರು ಆಕ್ರೋಶ ವ್ಯಕ್ತವಾಗಿದೆ.

ಈ ರೀತಿ ಸಾರ್ವಜನಿಕ ರಸ್ತೆಗೂ ವಸ್ತ್ರ ನಿಯಮ ಜಾರಿ ಮಾಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇರುವ ಒಂದು ರಸ್ತೆಗೂ ವಸ್ತ್ರ ಸಂಹಿತೆ ಜಾರಿ ಮಾಡಿದರೆ ಜನರು ಎಲ್ಲಿ ಓಡಾಡಬೇಕು? ಎಂದು ಪ್ರಶ್ನಿಸಿದ್ದರು. ದೇವಸ್ಥಾನದ ಒಳಭಾಗದಲ್ಲಿಯೂ ಕಳೆದ ಕೆಲವು ವರ್ಷದಿಂದ ಇತ್ತೀಚೆಗೆ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ದೇವಾಲಯಕ್ಕೆ ಬರುವವರು ಎಲ್ಲರೂ ಪಂಚೆಯನ್ನು ತರುವುದಿಲ್ಲ. ಬಡ ಭಕ್ತರಿಗೆ ಹೊರೆ ಆಗಲಿರುವ ಕಾರಣ ಕೂಡಲೇ ವಸ್ತ್ರ ಸಂಹಿತೆ ತೆರವುಗೊಳಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದರು.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ಬಾರದೇ ಸಮಿತಿ ಸದಸ್ಯರು ಮಾಡಿದ ತೀರ್ಮಾನದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು. ಇದೀಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಕುಮಟಾ ಉಪ ವಿಭಾಗಾಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ವಸ್ತ್ರ ಸಂಹಿತೆ ಬಗ್ಗೆ ಅಳವಡಿಸಿದ ಫಲಕವನ್ನು ತೆರವುಗೊಳಿಸುವ ಮೂಲಕ ವಸ್ತ್ರಸಂಹಿತೆ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಸಾರ್ವಜನಿಕರು ಸಂಚರಿಸುವ ರಸ್ತೆಯಲ್ಲಿ ಓಡಾಟಕ್ಕೆ ವಿಧಿಸಿದ ವಸ್ತ್ರಸಂಹಿತೆ ನೀತಿ ತೆರವಾಗಿದೆ. ಆದರೆ, ದೇವಸ್ಥಾನದ ಒಳ ಆವರಣದಲ್ಲಿ ತನ್ನ ವಸ್ತ್ರ ನಿಯಮ ಮುಂದುವರೆಸಿದ್ದು, ಜಿಲ್ಲಾಡಳಿತ ಹಾಗೂ ಸುಪ್ರೀಂ ಕೋರ್ಟ್‌ನಿಂದ ನಿಯೋಜನೆಗೊಂಡ ಸಮಿತಿ ಅಧ್ಯಕ್ಷರು ಈ ಬಗ್ಗೆ ಗಮನಹರಿಸಿ ವಸ್ತ್ರ ನಿಯಮ ತೆಗೆದುಹಾಕಬೇಕು ಎಂಬುದು ಜನತೆಯ ಆಗ್ರಹವಾಗಿದೆ.‌

Donate Janashakthi Media

Leave a Reply

Your email address will not be published. Required fields are marked *