ರಾಯಚೂರು: ನಗರದ ಎಲ್‍ಬಿಎಸ್ ಬಾಲ ವೀರಾಂಜನೇಯ ಸ್ವಾಮಿ ದೇವಾಲಯದ ಪೂಜೆ ವಿಷಯಕ್ಕೆ ಎರಡು ಗುಂಪುಗಳ ನಡುವೆ ಆರಂಭವಾದ ಜಗಳ ತಾರಕ್ಕೇರಿದ ಪರಿಣಾಮ ಮಾರಾಮಾರಿ ನಡೆದಿದೆ. ಇದರಿಂದ ನಾಲ್ಕೈದು ಜನರಿಗೆ ಗಾಯವಾಗಿದೆ. ಮಧ್ಯಪ್ರವೇಶಿಸಿದ ಸ್ಥಳೀಯ ಪೊಲೀಸರು ಗಲಾಟೆ ನಿಯಂತ್ರಿಸಲು ದೇವಸ್ಥಾನದ ಬೀಗ ಮುರಿದು ಪೂಜೆ ಸಲ್ಲಿಸಿದ ಘಟನೆ ನಡೆದಿದೆ.
ದೇವಾಲಯ ನಿರ್ವಹಣೆ ಮಾಡುತ್ತಿದ್ದ ಓಂಕಾರ ಗೌಡ ಗರ್ಭಗುಡಿ ಹಾಗೂ ದೇವಸ್ಥಾನದ ಬಾಗಿಲಿಗೆ ಬೀಗಹಾಕಿದ್ದ. ಇಂದು(ನವೆಂಬರ್ 12) ಪೂಜೆ, ಪ್ರಾರ್ಥನೆಗೆ ಬಂದ ಭಕ್ತರಿಗೆ ದೇವರ ದರ್ಶನ ಸಿಗದೆ ಹೊರಗಡೆ ಕಾಯುತ್ತಿದ್ದರು. ಬೀಗ ತೆರೆಯುವ ವಿಚಾರಕ್ಕೆ ಶುರುವಾದ ಜಗಳ ತಾರಕಕ್ಕೇರಿ ಹೊಡದಾಡುವ ಹಂತಕ್ಕೇರಿದೆ.
ಪೂಜೆಯ ವಿಚಾರವಾಗಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದು ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿದರು. ಆದರೂ ಗಲಭೆ ನಿಯಂತ್ರಣಕ್ಕೆ ಬಾರಲಿಲ್ಲ. ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.
ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಸ್ವತಃ ತಾವೇ ಬೀಗ ಹೊಡೆದು, ಆಂಜನೇಯ ಸ್ವಾಮಿಗೆ ಪೂಜೆ ಮಾಡಿದ್ದಾರೆ. ಪೊಲೀಸರು ಪೂಜೆ ಮಾಡಿದ ಬಳಿಕ ಭಕ್ತರು ದೇವಾಲಯ ಒಳಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಘಟನೆಯಲ್ಲಿ ನಗರಸಭೆ ಸದಸ್ಯ ತಿಮ್ಮಾರೆಡ್ಡಿ, ಜನಾರ್ದನ ರೆಡ್ಡಿ, ಸಂಜೀವ ರೆಡ್ಡಿ ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಗಾಯಾಳು ಓಂಕಾರ ಗೌಡ ಆರೋಪಿಸಿದ್ದಾನೆ. ಹೊಡೆದಾಟದಲ್ಲಿ ಗಾಯಗೊಂಡವರು ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.