ಶಿಮ್ಲಾ: ಪರ್ವತ ರಾಜ್ಯ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಮತದಾನ ಇಂದು ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. 68 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್, ಎಎಪಿ ಮತ್ತು ಇತರ ಪಕ್ಷಗಳ ಭವಿಷ್ಯ ಇಂದು ಮತಯಂತ್ರಗಳಲ್ಲಿ ಮತದಾರರು ಹಾಕುವ ಮತಗಳ ಮೇಲೆ ನಿರ್ಧಾರವಾಗಲಿದೆ. ಹಿಮಾಚಲ ಪ್ರದೇಶದಲ್ಲಿ ಹಲವು ಪ್ರದೇಶಗಳಲ್ಲಿ ಬಿಜೆಪಿ, ಕಾಂಗ್ರೆಸ್, ಸಿಪಿಐಎಂ, ಎಎಪಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇಂದು ಸಾಯಂಕಾಲ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ ಮುಂದುವರಿಯಲಿದೆ.
ಚುನಾವಣಾ ಆಯೋಗದ ಪ್ರಕಾರ, ಒಟ್ಟು 55,92,828 ಮತದಾರರಲ್ಲಿ 27,37,845 ಮಹಿಳೆಯರು, 28,54,945 ಪುರುಷರು ಮತ್ತು 38 ತೃತೀಯಲಿಂಗಿಗಳು, 412 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಈ ಬಾರಿ 24 ಮಹಿಳಾ ಅಭ್ಯರ್ಥಿಗಳಿದ್ದಾರೆ. ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಎಲ್ಲಾ 68 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಸಿಪಿಐಎಂ 11, ಸಿಪಿಐ 1, ಬಿಎಸ್‌ಪಿ 53 ಮತ್ತು ಆರ್‌ಡಿಪಿ 29 ರಲ್ಲಿ ಸ್ಪರ್ಧಿಸುತ್ತಿವೆ.
ಮತದಾನ ವೇಳೆ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತ ಮತದಾನ ನಡೆಸಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) 67 ಕಂಪನಿಗಳು ಮತ್ತು 11,500 ಕ್ಕೂ ಹೆಚ್ಚು ರಾಜ್ಯ ಪೊಲೀಸ್ ಸಿಬ್ಬಂದಿ ಸೇರಿದಂತೆ ಸುಮಾರು 30,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸುಮಾರು 50 ಸಾವಿರ ಸರ್ಕಾರಿ ನೌಕರರು ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ