ಇಡಬ್ಲ್ಯೂಎಸ್‌ ಮೀಸಲಿನ ರಾಜಕೀಯ

ಬಿ.ಎಂ.ಹನೀಫ್‌

ಆರ್ಥಿಕವಾಗಿ ಹಿಂದುಳಿದ ವರ್ಗ (Economically weaker section- EWS) ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ  ಶೇ. 10 ಮೀಸಲು ನೀಡುವ ಸುಪ್ರೀಂ ತೀರ್ಪನ್ನು ಜಾರಿಗೊಳಿಸುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಬ್ರಾಹ್ಮಣ, ವೈಶ್ಯ, ನಗರ್ತ ಮತ್ತು ಮೊದಲಿಯಾರ್ ಸಮುದಾಯಕ್ಕೆ ಈ 10% ಮೀಸಲಾತಿಯ ಲಾಭ ಸಿಗಲಿದೆ.‌

ಕರ್ನಾಟಕದಲ್ಲಿ ಈ ಸಮುದಾಯಗಳ ಜನಸಂಖ್ಯೆ ಶೇಕಡಾ 4ರಷ್ಟು ಇರಬಹುದು. ಇಷ್ಟು ಜನಸಂಖ್ಯೆಗೆ ಶೇ. 10 ಮೀಸಲಾತಿ ನೀಡುವುದು ತೀರಾ ಅವೈಜ್ಞಾನಿಕ ನಿರ್ಧಾರ.

ಎಲ್ಲ ಜಾತಿ, ಧರ್ಮಗಳಲ್ಲೂ ಬಡವರಿದ್ದಾರೆ ಎನ್ನುವುದು ನಿಜ. ಮೀಸಲಾತಿ ಜನರ ಬಡತನ ನಿವಾರಣೆಯ ಕಾರ್ಯಕ್ರಮ ಅಲ್ಲ ಎನ್ನುವುದೂ ನಿಜ. ಬಡತನ ನಿವಾರಣೆಗೆ ಸರಕಾರ ಬೇರೆ ಹಲವು ಯೋಜನೆಗಳನ್ನು ರೂಪಿಸಿದೆ. (ಉದಾಹರಣೆಗೆ- ಬ್ರಾಹ್ಮಣರ ಅಭಿವೃದ್ಧಿ ಮಂಡಳಿ, ಇತ್ಯಾದಿ) ಅದಕ್ಕೆ ಕೋಟಿಗಟ್ಟಳೆ ರೂಪಾಯಿಗಳ ಅನುದಾನವನ್ನೂ ನೀಡುತ್ತಿದೆ.

ಸರಕಾರದ ಈ 10% ಇಡಬ್ಲ್ಯೂಎಸ್‌ ಮೀಸಲಾತಿಯಲ್ಲಿ ದಲಿತರ, ಲಿಂಗಾಯತರ, ಒಕ್ಕಲಿಗರ, ಜೈನರ, ಮುಸ್ಲಿಮರ, ಇತರ ಹಿಂದುಳಿದ ವರ್ಗಗಳ ಬಡವರು ಯಾರೂ ಸೇರುವುದಿಲ್ಲ. ಅವರಿಗೆ ಕರ್ನಾಟಕದಲ್ಲಿ ಪ್ರತ್ಯೇಕ ಮೀಸಲಾತಿ ಇದೆ.

ಈ ಹಿನ್ನೆಲೆಯಲ್ಲಿ ಈ 10% ಮೇಲ್ಜಾತಿ ಬಡವರ ಮೀಸಲಾತಿ ಬಗ್ಗೆ ವಿಸ್ತೃತ ಚರ್ಚೆ ನಡೆಯುವ ಅಗತ್ಯವಿದೆ. ಬೊಮ್ಮಾಯಿಯವರು ಏಕಪಕ್ಷೀಯ ನಿಲುವು ತಳೆಯುವ ಮೊದಲು ಈ ಕುರಿತು ಸಾರ್ವಜನಿಕ ಹಾಗೂ ಮೀಸಲಾತಿ ತಜ್ಞರ ಚರ್ಚೆಗೆ ಅವಕಾಶ ನೀಡಬೇಕು.

ಸುಪ್ರೀಂ ಕೋರ್ಟಿನ ತೀರ್ಪನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಕ್ಷಣವೇ ಸ್ವಾಗತಿಸಿದ್ದಾರೆ. ಮೇಲ್ಜಾತಿ ಜನರನ್ನು ಓಲೈಸಲು ಖರ್ಗೆ ಮತ್ತು ಕಾಂಗ್ರೆಸ್ ಗೆ ಇದು ರಾಜಕೀಯ ಅಗತ್ಯ ಅನ್ನಿಸಿರಬಹುದು. ಆದರೆ ಕರ್ನಾಟಕದಲ್ಲಿ ದಲಿತ, ಹಿಂದುಳಿದ ವರ್ಗಗಳ ಹಿತಾಸಕ್ತಿ ರಕ್ಷಣೆಗೆ ಈ ತೀರ್ಪು ಮಾರಕ ಹೊಡೆತ ನೀಡಲಿದೆ ಎನ್ನುವುದು ನಿಸ್ಸಂಶಯ.

ಮಾತ್ರವಲ್ಲ, ಮೀಸಲಾತಿ ನೀತಿಯ ಸಾಂವಿಧಾನಿಕ ಆಶಯವನ್ನೇ ಈ ತೀರ್ಪು ಬುಡಮೇಲುಗೊಳಿಸಲಿದೆ. ಡಾ.‌ಅಂಬೇಡ್ಕರ್ ಅವರ ಆಶಯಗಳಿಗೆ ಈ ತೀರ್ಪು ತೀರಾ ವಿರುದ್ಧವಿದೆ.

Donate Janashakthi Media

Leave a Reply

Your email address will not be published. Required fields are marked *