ತುಮಕೂರು: ರಾಜ್ಯದಲ್ಲಿ ಭ್ರಷ್ಟಾಚಾರದಿಂದಾಗಿ ರಾಜ್ಯದ ಜನತೆ ನಲುಗು ಹೋಗಿದ್ದು, ಇದರಿಂದ ಜನರ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಿವೆ. ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಎಂಬುದು ದೊಡ್ಡು ಪಿಡುಗಾಗಿ ಪರಿಣಮಿಸಿದ್ದು, ಭ್ರಷ್ಟಾಚಾರದಲ್ಲಿ ಮಂತ್ರಿಗಳು, ಉನ್ನತ ಮಟ್ಟದ ಅಧಿಕಾರಿಗಳು ಶಾಮೀಲಾಗಿರುವುದು ಕಂಡು ಬರುತ್ತಿದೆ ಸೈಯದ್ ಮುಜೀಬ್ ಹೇಳಿದರು.
ರಾಜ್ಯದಲ್ಲಿ ಒಂದಲ್ಲ ಒಂದು ಸಂದರ್ಭಗಳಲ್ಲಿ ಭ್ರಷ್ಟಾಚಾರ ಪ್ರಕರಣಗಳು ವರದಿಯಾಗುತ್ತಿದ್ದು ನಿಷ್ಪಕ್ಷಪಾತ ತನಿಖೆ ಕೈಗೊಳ್ಳಬೇಕು, ಭ್ರಷ್ಟಾಚಾರದ ಪ್ರಕರಣಗಳನ್ನು ಸ್ವತಂತ್ರ ನ್ಯಾಯಾಂಗ ತನಿಖೆ ಅಥವಾ ಸಿಬಿಐಗೆ ವಹಿಸಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ), ತುಮಕೂರು ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಸರ್ಕಾರ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳಿದೆ. ಜನರ ಮಧ್ಯೆ ಅಸಮಾನತೆಯು ಮತ್ತಷ್ಟು ಹೆಚ್ಚಾಗಿದೆ. ಮಹಿಳೆ, ಮಕ್ಕಳು ಮತ್ತು ಪರಿಶಿಷ್ಟರ ಮೇಲಿನ ದೌರ್ಜನ್ಯಗಳು ಜಾಸ್ತಿಯಾಗುತ್ತಿವೆ ಎಂದು ಹೇಳಿದರು.
ರೈತ ಮುಖಂಡ ಸಿ.ಅಜ್ಜಪ್ಪ, ‘ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ ಪಕ್ಕಾ ಮನೆ ನಿರ್ಮಿಸಿಕೊಡಬೇಕು. ರೈತರಿಗೆ ಪರಿಹಾರದ ಹಣ ನೀಡಬೇಕು. ರೈತರು, ಕೂಲಿಕಾರರು, ಕಸುಬುದಾರರು ಮತ್ತು ಮಹಿಳೆಯರ ಖಾಸಗಿ ಹಾಗೂ ಸಾರ್ವಜನಿಕ ಸಾಲವೂ ಸೇರಿದಂತೆ ಎಲ್ಲಾ ರೀತಿಯ ಸಾಲ ಮನ್ನಾ ಮಾಡಬೇಕು’ ಎಂದರು.
ಪ್ರತಿಭಟನೆಯ ನಂತರ ಉಪವಿಭಾಗದಿಕಾರಿ ವಿ.ಅಜಯ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ನಗರ ಸಮಿತಿ ಸದಸ್ಯ ಖಲೀಲ್, ಪದಾಧಿಕಾರಿಗಳಾದ ಇಂತಿಯಾಜ್, ರವಿಕುಮಾರ್ ನಾಯಕ್, ಚನ್ನಬಸವಣ್ಣ, ಟಿ.ಎಚ್.ರಾಮು, ನಾಗರಾಜು, ಲಕ್ಷ್ಮಿಕಾಂತ್, ಗೋವಿಂದರಾಜು, ಜಬಿ, ಅಕ್ರಂ, ಮಹಾಲಕ್ಷ್ಮಿ, ಗಂಗಾಧರ್, ವಸೀಂ, ಮುತ್ತುರಾಜು, ಜಗದೀಶ್ ಭಾಗವಹಿಸಿದ್ದರು.