ಹಣ ಸಂದಾಯ ʻದನಿ ಖಾತರಿʼ ಕನ್ನಡದಲ್ಲೇಕ್ಕಿಲ್ಲ

ವಾಸುದೇವ ಶರ್ಮಾ

ಮೊಬೈಲಿನಿಂದ QR ಕೋಡ್ ನೋಡಿ ಹಣ ಕೊಡುವ ಪದ್ಧತಿ ಸುಲಭ, ಚಂದ. ಕೊಟ್ಟ ಹಣ ನಿಜವಾಗಿಯೂ ಮಾರಾಟಗಾರರ ಖಾತೆಗೆ ಸೇರಿದೆ ಎಂದು‌ ಖಾತರಿ ಮಡುವ ‘ದನಿ’ ಕೇಳಿಸುವಂತಾದದ್ದು ಮಹದಾನಂದ. ಕೊಟ್ಟವರಿಗೂ ತೆಗೆದುಕೊಂಡವರಿಗೂ ಸಮಾಧಾನ.‌

ಸರಿ, ಮುಖ್ಯ ವಿಚಾರಕ್ಕೆ ಬಾರಯ್ಯ. ಸುತ್ತಿಸುತ್ತಿ ಹೇಳುವುದೇನು?

ಈ ‘ದನಿ ಖಾತರಿ’ ಬಂದಾಗಿನಿಂದ, ಅದು ಇಂಗ್ಲಿಷ್ ಭಾಷೆಯಲ್ಲಿತ್ತಲ್ಲ, ಆವಾಗಿನಿಂದ ಅನಿಸುತ್ತಿತ್ತು, ಇದನ್ನ ‘ಕನ್ನಡ’ದಲ್ಲಿಯೂ ಹೇಳಿಸಬಹುದು, ಕೇಳಿಸಬಹುದಲ್ಲವೆ ಅಂತ.

ಇತ್ತೀಚೆಗೆ ಕಾಶಿಗೆ ಹೋಗಿದ್ದಾಗ ಎಲ್ಲೆಡೆ ‘ಹಿಂದಿ’ಯಲ್ಲೇ ಈ ಮೊತ್ತ ಕೊಟ್ಟ ‘ಅನುಮೋದನೆ ದನಿ’. ಅದೇ, ‘ತೀನ್ ಸೌ ಬೀಸ್ ರೂಪೈ ಪ್ರಾಪ್ತಹುಯೇ’ ಅಂತಾನೋ ಏನೋ ಎಷ್ಟೋ ಬಾರಿ ಅಂಕಿಗಳು ನಮಗರ್ಥವಾಗದ ರೀತಿ. ಕಲಿಯಬೇಕು!

ಅರೆ ಹಿಂದಿಯಲ್ಲಿ ಆಗಿಸುತ್ತಿದ್ದಾರೆ ಎನ್ನುವುದಾದರೆ ನಮ್ಮೂರಿನಲ್ಲಿ ‘ಕನ್ನಡ’ದಲ್ಲೂ ಸಾಧ್ಯವಿರಲೇಬೇಕಲ್ಲವೆ ಎಂದು ಎಂದುಕೊಂಡೆ. ಆದರೆ ನಮ್ಮ ಚಿಕ್ಕಪುಟ್ಟ ಊರುಗಳಲ್ಲೂ ಇದು ‘ಇಂಗ್ಲಿಷ್’ನಲ್ಲೇ ಉಸುರುವುದು! ಅದಕ್ಕೆ ಕನ್ನಡ ಹೇಳಿಕೊಡಬೇಕು.

ಇಂದು ‘ಬೆಂಗಳೂರಿನ ಕನ್ನಡ’ ನಾಡಲ್ಲಿ (ಅಂದ್ರೆ ಜಯನಗರ, ಜಯಪ್ರಕಾಶ ನಗರ ಅಂತ), ಒಂದು ಅಂಗಡಿಯಲ್ಲಿ ಮೊಬೈಲಿನಿಂದ ಹಣ ಕೊಟ್ಟಾಗ ಅದು ಹಿಂದಿಯಲ್ಲಿ ‘ಹಣ ಬಂದಿದೆ’ ಅಂತ ಅಂಕಿಗಳನ್ನ ಸ್ಪಷ್ಟವಾಗಿ, ಅದೇ ಹಿಂದಿಯಲ್ಲಿ ಹೇಳೋದೆ.  ನನಗೆ ಹಿಂದಿ ಪಾಠ!

ಕನ್ನಡದಲ್ಲಿ ಹೇಳಿಸಿದರೆ, ನಮಗೆ ಖಾತರಿ, ಕನ್ನಡ ಬಾರದವರಿಗೆ ಕನ್ನಡ ಅಂಕಿ ಪಾಠ ಹೇಳಿಕೊಟ್ಟಂತಾಗುತ್ತದೆ.

ಹಾಗಂತ ನಾನು ಭಾಷಾ ವಿರೋಧಿ ಎಂದುಕೊಳ್ಳಬೇಡಿ. ಕನ್ನಡ ಪ್ರೇಮಿಯೂ ಹೌದು.

‘ಮುನ್ನೂರ ಇಪ್ಪತ್ತು ರೂಪಾಯಿ ಸಂದಾಯವಾಗಿದೆ’ ಎಂದು ಕೇಳಲು ನಮಗೆ ಹಿತವಾಗಬಹುದಲ್ಲವೆ. ಹೇಗಿದ್ದರೂ ನವೆಂಬರ್ ಅಲ್ಲವೆ… ಈಗಲೇ ಆರಂಭವಾದರೆ, ಆರಂಭವಾಗಿಸಿದರೆ ಒಳ್ಳೆಯದು.

Donate Janashakthi Media

Leave a Reply

Your email address will not be published. Required fields are marked *