ಮೈಸೂರು: ಕೇಂದ್ರದಲ್ಲಿ ಅಳ್ವಿಕೆ ನಡೆಸುತ್ತಿರುವ ಬಿಜೆಪಿ ಕೇಂದ್ರ ಸರ್ಕಾರ ರಾಷ್ಟ್ರೀಯ ಆಸ್ತಿ ನಗದೀಕರಣ (ಎನ್ಎಂಪಿ) ಯೋಜನೆಯಡಿ ದೇಶವನ್ನು ಬಂಡವಾಳಶಾಹಿಗಳಿಗೆ ಒಪ್ಪಿಸುತ್ತಿರುವ ನೀತಿಯ ವಿರುದ್ಧ ಎಲ್ಲಾ ಕಾರ್ಮಿಕ ಸಂಘಟನೆಗಳು ಒಟ್ಟಾಗಿವೆ. ದೇಶದಲ್ಲಿ ಪ್ರಬಲವಾದ ಚಳುವಳಿ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಬಜೆಟ್ ಅಧಿವೇಶನದ ವೇಳೆ 5 ಲಕ್ಷ ರೈತರು, ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರ ಸಂಸತ್ ಚಲೋ ನಡೆಯಲಿದೆ ಎಂದು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಹೇಳಿದರು.
‘ನ್ಯಾಷನಲ್ ಫೆಡರೇಷನ್ ಆಫ್ ಪೋಸ್ಟಲ್ ಎಂಪ್ಲಾಯೀಸ್ (ಎನ್ಎಫ್ಪಿಇ)’ ವತಿಯಿಂದ ಇಂದು(ನವೆಂಬರ್ 06) ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ 12ನೇ ಕೌನ್ಸಿಲ್ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಕೆ.ಎನ್. ಉಮೇಶ್ ಅವರು, ‘ರಾಷ್ಟ್ರೀಯ ಹೆದ್ದಾರಿ, ರೈಲು, ವಿಮಾನ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಣಗೊಳಿಸಿ ದೇಶದ ಆರ್ಥಿಕತೆಯನ್ನು ಕುಸಿತಗೊಳಿಸಲು ಬಿಜೆಪಿಯು ದೊಡ್ಡ ಸಾಧನೆಯನ್ನೇ ಮಾಡಿದೆ. ಆರ್ಥಿಕತೆಯನ್ನು ಪಾತಾಳಕ್ಕಿಳಿಸಿದ ಬಿಜೆಪಿ ಸರ್ಕಾರವು ನಿರುದ್ಯೋಗ, ಬಡತನ ಹೆಚ್ಚಿಸಿದೆ. ಕಳೆದ ವರ್ಷ ಜರುಗಿದ ರೈತ ಹೋರಾಟದ ಮಾದರಿಯಲ್ಲಿಯೇ ಕಾರ್ಮಿಕರು ಹೋರಾಟ ನಡೆಸಲಿದ್ದಾರೆ’ ಎಂದರು.
ಆಳುವ ಸರ್ಕಾರದ ಕುಟಿಲ ತಂತ್ರಗಳಿಗೆ ದೆಹಲಿಯ ರೈತ ಹೋರಾಟವು ಬಗ್ಗಲಿಲ್ಲ. ನರೇಂದ್ರ ಮೋದಿ ಸರ್ಕಾರ ಕೃಷಿ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಬೇಕಾಯಿತು. ಅದೇ ಮಾದರಿಯಲ್ಲಿ ಕಾರ್ಮಿಕ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಲಿವೆ. ಸಂಸತ್ ಚಲೋ ಹೋರಾಟದ ಭಾಗವಾಗಿ ಕೇಂದ್ರ ಸರ್ಕಾರದ ವಿರುದ್ಧ ಎಲ್ಲ ಕಾರ್ಮಿಕ ಸಂಘಟನೆಗಳ ರಾಷ್ಟ್ರ ಮಟ್ಟದ ಜಂಟಿ ಸಮಾವೇಶವನ್ನು 2023ರ ಜನವರಿ 30ರಂದು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಸಿದ್ಧತೆಗಳು ನಡೆದಿವೆ ಎಂದರು.
‘ಭಾರೀ ನಷ್ಟದಲ್ಲಿದ್ದ ಬ್ಯಾಂಕುಗಳೊಂದಿಗೆ ಲಾಭದಲ್ಲಿದ್ದ ಕರ್ನಾಟಕದ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಜಯಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ವಿಲೀನಗೊಳಿಸಲಾಗಿದೆ. ಮತ್ತೊಂದೆಡೆ ಅಂಚೆ ಇಲಾಖೆಯನ್ನು ಟಿಎಸ್ಆರ್ ಸುಬ್ರಹ್ಮಣಿಯನ್ ಸಮಿತಿ ವರದಿ ಆಧರಿಸಿ 6 ಭಾಗಗಳಾಗಿ ವಿಭಜಿಸಲಾಗುತ್ತಿದೆ. ಅವುಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸುವ ಹುನ್ನಾರವಾಗಿದೆʼ ಎಂದು ವಿವರಿಸಿದರು.
‘ಒಂದೆಡೆ ಸಾರ್ವಜನಿಕ ಉದ್ದಿಮೆಗಳ ಮಾರಾಟ ನಡೆದಿದ್ದರೆ, ಮತ್ತೊಂದೆಡೆ ಹಿಜಾಬ್, ಹಲಾಲ್– ಜಟ್ಕಾ ಕಟ್ ಸೇರಿದಂತೆ ಕೋಮುದ್ವೇಷದ ವಿಷಯ ಮುನ್ನಲೆಗೆ ತರಲಾಗುತ್ತಿದೆ. ಕೋಮುವಾದಿ ಶಕ್ತಿಗಳು ಹಾಗೂ ಬಂಡವಾಳಶಾಹಿಗಳ ಮೈತ್ರಿಗೆ ರೈತರು, ಕಾರ್ಮಿಕರು ಪೆಟ್ಟು ನೀಡಲಿದ್ದಾರೆ. ದೇಶದ ಜನರನ್ನು ಬೀದಿಗೆ ನಿಲ್ಲಿಸಲು ಬಿಡುವುದಿಲ್ಲ’ ಎಂದರು.
ಕರ್ನಾಟಕ ಸರ್ಕಲ್ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರಕುಮಾರ್ ಮಾತನಾಡಿ, ‘ಕೊರಿಯರ್ ಕಂಪನಿಗಳಿಂದ ಅಂಚೆ ಇಲಾಖೆಯು ಸವಾಲುಗಳನ್ನು ಎದುರಿಸುತ್ತಿದೆ. ಗ್ರಾಹಕರ ಅಪೇಕ್ಷೆಗಳಿಗೆ ತಕ್ಕಂತೆ ಕರ್ತವ್ಯದ ಅವಧಿ ಬದಲಿಸಿಕೊಳ್ಳಬೇಕಿದೆ. ಹೊಸ ಆಲೋಚನೆಗಳಿಂದ ಸೇವೆಯನ್ನು ವಿಸ್ತರಿಸಿ, ಲಾಭ ಗಳಿಕೆಯನ್ನು ಹೆಚ್ಚಿಸುವುದು ಗುರಿಯಾಗಬೇಕಿದೆ’ ಎಂದರು.
ಎನ್ಎಫ್ಪಿಇ ಕಾರ್ಯಕಾರಿ ಅಧ್ಯಕ್ಷ ಯು.ಕೆ.ತಿವಾರಿ, ಕಾರ್ಯದರ್ಶಿ ಜನಾರ್ಧನ್ ಮಜುಂದಾರ್, ಸಿ.ಸಿ.ಪಿಳ್ಳೈ, ಕೆ.ರಾಘವೇಂದ್ರನ್, ಆರ್.ಎನ್.ಪರಾಶರ್, ಕೇಂದ್ರ ಸರ್ಕಾರ ನೌಕರರ ಒಕ್ಕೂಟದ ಉಪಾಧ್ಯಕ್ಷ ಕೆ.ಕೆ.ಎನ್.ಕುಟ್ಟಿ ಉಪಸ್ಥಿತರಿದ್ದರು.