ಹಿಂದಿನ ಸರ್ಕಾರದ ಸೋಲಾರ್ ಪರವಾನಗಿ ಅವ್ಯವಹಾರ ಬಗ್ಗೆ ಸಮಗ್ರ ತನಿಖೆ: ಮುಖ್ಯಮಂತ್ರಿ

ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ಖಾಸಗಿಯವರಿಗೆ ಸೋಲಾರ್ ಪಾರ್ಕ್ ನಿರ್ಮಾಣದ ಗುತ್ತಿಗೆ ನೀಡಿಕೆಯಲ್ಲಿ ಅವ್ಯವಹಾರ ನಡೆದಿದ್ದು, ಸಮಗ್ರ ತನಿಖೆಯನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಆರ್​ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿಯವರಿಂದ ಸೋಲಾರ್ ನಿಂದ ವಿದ್ಯುತ್ ಉತ್ಪಾದನೆಗೆ ನೀಡಿರುವ ಪರವಾನಿಗೆ ವಿತರಣೆಯಲ್ಲಿ ಅವ್ಯವಹಾರವನ್ನು ಮುಚ್ಚಿಹಾಕಲು ಪ್ರಯತ್ನ ಮಾಡಲಾಗುತ್ತಿದೆ. ಕೇವಲ 7 ಸೆಕೆಂಡಿನಲ್ಲಿ ಆನ್ ಲೈನ್ ಮೂಲಕ ನೀಡಿರುವ ಪಟ್ಟಿಯನ್ನು ಗಮನಿಸಿದರೆ ಯಾವ ರೀತಿ ಆಗಿದೆ ಎಂದು ತಿಳಿಯುತ್ತದೆ. ಇದರ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.

ಚಂದ್ರಶೇಖರ್ ಸಾವಿನ ತನಿಖೆ

ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್​ ನಿಗೂಢ ಸಾವಿನ ಬಗ್ಗೆ ಶಾಸಕರೊಂದಿಗೆ ಚರ್ಚಿಸಲಾಗಿದೆ. ಅವರ ಪ್ರಕಾರ ಬರುವ ಮಾಹಿತಿ ಎಲ್ಲವನ್ನೂ ನೀಡಿ, ಸೂಕ್ತ ನಿರ್ದೇಶನವನ್ನು ಐ.ಜಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ನೀಡುವುದಾಗಿ ತಿಳಿಸಿದ್ದೇನೆ. ಮರಣೋತ್ತರ ಪರೀಕ್ಷೆಯಲ್ಲಿ ಬಹುತೇಕ ಸತ್ಯಾಂಶ ಹೊರಬರುತ್ತದೆ. ನಂತರ ತನಿಖೆಯನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕೆಂದು ನಿರ್ಧರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನವೆಂಬರ್ 11ರಂದು ರಾಜ್ಯಕ್ಕೆ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ನವೆಂಬರ್‌ 11ರಂದು ರಾಜ್ಯಕ್ಕೆ ಆಗಮಿಸಲಿದ್ದು ಮೂರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಂದೇ ಭಾರತ್ –  ಚೆನ್ನೈ – ಮೈಸೂರು- ಬೆಂಗಳೂರು  ರೈಲನ್ನು ಉದ್ಘಾಟಿಸಲಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಟರ್ಮಿನಲ್ ಉದ್ಘಾಟಿಸಲಿದ್ದಾರೆ. ಬೆಂಗಳೂರಿಗೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದ್ದು, 25 ಲಕ್ಷ ಜನರನ್ನು ನಿಭಾಯಿಸುವ ಸಾಮರ್ಥ್ಯವುಳ್ಳ, ನೂರು ಕೌಂಟರ್ ಗಳುಳ್ಳ  ಅಂತರರಾಷ್ಟ್ರೀಯ ಟರ್ಮಿನಲ್ ಉದ್ಘಾಟನೆಯಾಗುತ್ತಿದೆ. ಎರಡೂ ಟರ್ಮಿನಲ್ ಕೂಡಿದರೆ, ದಿಲ್ಲಿಯ ನಂತರ ದೇಶದ ಅತಿ ದೊಡ್ಡ ವಿಮಾನ ನಿಲ್ದಾಣವಾಗಲಿದೆ.  ನಂತರ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣವಾಗುತ್ತಿದೆ.

ನಾಳೆಯಿಂದ ಜನಸಂಕಲ್ಪ ಯಾತ್ರೆ ಪುನಃ ಪ್ರಾರಂಭವಾಗಲಿದೆ. ಡಿಸೆಂಬರ್ ವರೆಗೆ ಜನಸಂಕಲ್ಪ ಯಾತ್ರೆ ಮುಂದುವರಿಯಲಿದೆ. ಬಳ್ಳಾರಿಯಲ್ಲಿ ನವೆಂಬರ್‌ 20ರಂದು ಎಸ್.ಟಿ ಮೋರ್ಚಾ ಸಮಾವೇಶ ಹಾಗೂ ನವೆಂಬರ್‌ 30ರಂದು ಮೈಸೂರಿನಲ್ಲಿ ಎಸ್.ಸಿ ಮೋರ್ಚಾ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *