ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಆಗಿದ್ದು, ಭೂಮಿ ಮತ್ತೆ ಮತ್ತೆ ಕಂಪಿಸಿರುವ ಅನುಭವವಾಗಿದೆ. ಎರಡು ಕಡೆ ಈ ರೀತಿಯಾಗಿದ್ದು, ಇಲ್ಲಿನ ಜನರು ಆತಂಕಗೊಂಡಿದ್ದಾರೆ. ನಿನ್ನೆ(ಅಕ್ಟೋಬರ್ 28) ರಾತ್ರಿ 9.47, ಮುಂಜಾನೆ 4.40ರ ಸುಮಾರಿಗೆ ವಿಜಯಪುರ ನಗರ, ಬಸವನಬಾಗೇವಾಡಿ ತಾಲೂಕಿನ ಮನಗೂಳಿ, ತಿಕೋಟಾ ತಾಲೂಕಿನ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ರಾತ್ರಿ 9.47ಕ್ಕೆ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 2.8ರಷ್ಟು ತೀವ್ರತೆ ದಾಖಲುಗೊಂಡಿದೆ. ಮುಂಜಾನೆ 4.40ರಲ್ಲಿ 2.8ರಷ್ಟು ತೀವ್ರತೆಯ ಭೂಕಂಪನವಾಗಿದೆ. ರಾತ್ರಿ ಸಂಭವಿಸಿದ ಭೂಕಂಪನ ಕೇಂದ್ರ ಬಿಂದು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಬಳಿ ಕೇಂದ್ರೀಕೃತವಾಗಿತ್ತು. 2ನೇ ಭೂಕಂಪನದ ಕೇಂದ್ರ ಬಿಂದು ವಿಜಯಪುರ ತಾಲೂಕಿನ ಹಂಚಿನಾಳದಲ್ಲಿತ್ತು. ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವು ಮತ್ತೆ ಮತ್ತೆ ಭೂಕಂಪನವಾಗಿರುವುದನ್ನು ದೃಢಪಡಿಸಿದೆ.
ಮೇಲಿಂದ ಮೇಲೆ ಸಂಭವಿಸುತ್ತಿರುವ ಕಂಪನಗಳಿಂದ ಜನರು ಭಯಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಜಯಪುರದಲ್ಲಿ ಪದೇಪದೆ ಭೂಕಂಪನದ ಅನುಭವ ಜನರಿಗೆ ಆಗುತ್ತಿದೆ.
ವಿಜಯಪುರ ನಗರದಲ್ಲಿ ನೆನ್ನೆ ಬೆಳಗಿನ ನಸುಕಿನಲ್ಲಿಯೂ ಮೂರು ಬಾರಿ ಲಘು ಭೂಕಂಪನವಾಗಿದೆ ಎಂದು ವರದಿಯಾಗಿದೆ. ಮುಂಜಾನೆ 3.45, 3.46 ಹಾಗೂ 5.56ಕ್ಕೆ ಭೂಕಂಪನ ದಾಖಲಾಗಿತ್ತು. ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 2.0, 1.9 ಮತ್ತು 3.2 ಎಂದು ದಾಖಲಾಗಿತ್ತು. ವಿಜಯಪುರ ನಗರ, ಮನಗೂಳಿ, ಗೋಳಗುಮ್ಮಟ ಪ್ರದೇಶ ಸೇರಿ ನಗರದ ಸುತ್ತ ಭೂಕಂಪನದ ಅನುಭವವಾಗಿದೆ.