- ಆರು ಹಾಡುಗಳ ಕಾರ್ಯಕ್ರಮದಲ್ಲಿ ಮೊದಲಿಗೆ ಮೊಳಗಿದ ಜಯ ಭಾರತ ಜನನಿಯ ತನುಜಾತೆ ಹಾಡು.
- ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ದನಿಗೂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
- ವಿಶ್ವದಾಖಲೆ ಮಾಡಿರುವ ಕೋಟಿ ಕಂಠ ಗಾಯನದ ಪ್ರಮಾಣ ಪತ್ರ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಹಸ್ತಾಂತರ.
ಬೆಂಗಳೂರು: 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಜ್ಯ ಸರ್ಕಾರ ಇಂದು ‘ಕೋಟಿ ಕಂಠ ಗಾಯನ’ ಕಾರ್ಯಕ್ರಮ ಹಮ್ಮಿಕೊಂಡಿದ್ದು ರಾಜ್ಯಾದ್ಯಂತ ಗಾಯನ ಮೊಳಗಿದೆ. ಕನ್ನಡ, ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮವು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಮೈಸೂರು, ಮಂಡ್ಯ, ಧಾರವಾಡ, ಕೋಲಾರ, ಯಾದಗಿರಿ, ಕೊಪ್ಪಳ, ಬೆಳಗಾವಿ, ಮಂಗಳೂರು, ಚಿತ್ರದುರ್ಗ, ಕಲಬುರಗಿ ಸೇರಿ ಹಲವೆಡೆ ಸಾವಿರಾರು ಜನರು ಕನ್ನಡದ ಗಾಯನ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ರಾಜ್ಯದೆಲ್ಲೆಡೆ ಒಂದೇ ಸ್ವರದಲ್ಲಿ ಕೋಟಿ ಕಂಠಗಳ ಗಾಯನ ಮೊಳಗಿದೆ.
ಕಂಠೀರವ ಸ್ಟೇಡಿಯಂನಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.ಆರು ಕನ್ನಡ ಗೀತೆಗಳ ಗಾಯನದ ಆರಂಭ ಮೊದಲಿಗೆ ನಾಡಗೀತೆಯೊಂದಿಗೆ ಆರಂಭವಾಯಿತು. ‘ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಗಾಯನಕ್ಕೆ ಕಂದಾಯ ಸಚಿವ ಆರ್. ಅಶೋಕ್, ಕನ್ನಡ ಹಾಗೂ ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಜಗ್ಗೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಮುಂತಾದವರು ವೇದಿಕೆ ಮೇಲಿದ್ದು ಸಾಕ್ಷಿಯಾದರು.
ನಾಡಿನ ಜನಪ್ರಿಯ ಗಾಯಕರು, ಮಕ್ಕಳು ಕನ್ನಡ ಬಾವುಟ ಹಿಡಿದು, ಕೇಸರಿ ಕೆಂಪು ಉಡುಗೆ, ಭಾವುಟ ಹಿಡಿದು ಹಾಡಿ ರಂಜಿಸಿದರು. ಕಾರ್ಯಕ್ರಮ ನಡೆದ ವೇದಿಕೆ ಬಳಿಯಲ್ಲಿಯೂ ಗಾಯನಕ್ಕೆ ನೋಂದಣಿ ಕಾರ್ಯ ನಡೆದಿತ್ತು. ನೂರಾರು ಮಂದಿ ಆರು ಗೀತೆಗೆ ದನಿಯಾದರು. ಸಾವಿರಾರು ವಿಧ್ಯಾರ್ಥಿಗಳು, ನಾಗರಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಹಾಡು ಮೊಳಗಿದ ಸಂದರ್ಭ ಮೈಕ್ ಹಿಡಿದ ಸಿಎಂ ಬಸವರಾಜ್ ಬೊಮ್ಮಾಯಿ ಸಹ ದನಿಗೂಡಿಸಿದರು.
ಇಂದಿನ ಕಾರ್ಯಕ್ರಮಗಳು ರಾಜ್ಯ, ಗಡಿನಾಡು, ಸಾಗರೋತ್ತರ ಹೊರತುಪಡಿಸಿ ರಾಜ್ಯದ ಹದಿನೈದು ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಧಾನಸೌಧದ ಮೆಟ್ಟಿಲು, ಗಾಂಧಿ ಪ್ರತಿಮೆ, ಹೈಕೋರ್ಟ್, ಕಂಠೀರವ ಕ್ರೀಡಾಂಗಣ, ವಿಮಾನ, ರೈಲು, ಚಿತ್ರದುರ್ಗದ ಕೋಟೆ, ಕಡಲ ತೀರಗಳಲ್ಲಿ ಕನ್ನಡದ ಗೀತೆ ಮೊಳಗಿತು. ಇದಲ್ಲದೇ ಸಚಿವ ಡಾ. ಅಶ್ವತ್ಥನಾರಾಯಣ್ ತಮ್ಮ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರವ್ಯಾಪ್ತಿಯಲ್ಲಿ ವಿಶೇಷವಾಗಿ ಕಾರ್ಯಕ್ರಮ ಆಯೋಜಿಸಿದ್ದರು
ಸಂಕಲ್ಪ ವಿಧಿ ಬೋಧನೆಯನ್ನು ಸಚಿವ ವಿ. ಸುನೀಲ್ ಕುಮಾರ್ ಬೋಧಿಸಿದರು. ವೇದಿಕೆ ಮೇಲಿದ್ದ ಗಣ್ಯರು ಹಾಗೂ ಮುಂದಿದ್ದವರು ಕೈ ಮುಂದೆ ಮಾಡಿ ನಾಡಿನ ಪ್ರೇಮದ ಸಂಕಲ್ಪ ಕೈಗೊಂಡರು. ಅರ್ಧಗಂಟೆ ಕಾರ್ಯಕ್ರಮ ನಡೆಯಿತು.
ಆರು ಗೀತೆಗಳ ಗಾಯನ : ಈ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ” , ಹುಯಿಲಗೊಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚಲುವ ಕನ್ನಡನಾಡು, ಡಾ.ಚನ್ನವೀರ ಕಣವಿ ಅವರ “ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ’, ಕುವೆಂಪು ಅವರ “ಬಾರಿಸು ಕನ್ನಡ ಡಿಂಡಿಮವಾ’, ಡಾ.ಡಿ.ಎಸ್.ಕರ್ಕಿಯವರ “ಹಚ್ಚೇವು ಕನ್ನಡದ ದೀಪ’ ಹಾಗೂ ಡಾ. ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಆರು ಗೀತೆಗಳನ್ನು ಕೋಟಿ ಕಂಠಗಳಲ್ಲಿ ಹಾಡಲಾಯಿತು.