ಬೆಂಗಳೂರು: ಈಗಾಗಲೇ ಹಲವು ಬಾರಿ ಪ್ರತಿಭಟನೆ-ಧರಣಿಯನ್ನು ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಸತತ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಪರಿಹರಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ನಾಳೆ(ಅಕ್ಟೋಬರ್ 27) ಬೃಹತ್ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ತೀರ್ಮಾನಿಸಿದೆ.
ಬೇಡಿಕೆಗಳಲ್ಲಿ ಪ್ರಮುಖವಾದವು ಪ್ರತಿ ಟನ್ ಕಬ್ಬಿಗೆ 5,500 ದರ ನಿಗದಿ ಮಾಡುವಂತೆ ಆಗ್ರಹಿಸಲಾಗುತ್ತಿದೆ. ರಾಜ್ಯದ ಎಲ್ಲೆಡೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ನಾಳೆ ಬೆಳಗ್ಗೆ 11ರಿಂದ 1 ಗಂಟೆಯವರೆಗೆ ಹೆದ್ದಾರಿಗಳ ತಡೆಯುವ ಮೂಲಕ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ 30 ಲಕ್ಷ ಕಬ್ಬು ಬೆಳೆಗಾರರ 40 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುವ ಈ ಉದ್ಯಮ ಸರ್ಕಾರಕ್ಕೆ ಲಾಭ ತರುತ್ತಿಲ್ಲವೇ? 5 ಸಾವಿರ ಕೋಟಿ ವ್ಯವಹಾರ ನಡೆಸುವ ಅಡಿಕೆ ಬೆಳೆಗಾರರ ಬಗ್ಗೆ ಕೇಂದ್ರಕ್ಕೆ ನಿಯೋಗ ಹೋಗಿ ಮನವಿ ಮಾಡುವ ರಾಜ್ಯದ ಗೃಹ ಸಚಿವರಿಗೆ ಹಾಗೂ ಸಂಸದರಿಗೆ ಕಬ್ಬು ಬೆಳೆಗಾರರ ಗೋಳಾಟ ಕಾಣುತ್ತಿಲ್ಲವೇ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಮೂವತ್ತು ಲಕ್ಷ ಮಂದಿ ಕಬ್ಬು ಬೆಳೆಗಾರರು ಇದ್ದಾರೆ. ಬೇಡಿಕೆಗಳನ್ನು ಈಡೇರಿಸುವ ಕುರಿತು ಸರ್ಕಾರ ಇಲ್ಲಿಯವರೆಗೆ ಯಾವುದೇ ತೀರ್ಮಾನ ಕೈಗೊಳ್ಳದೆ ವಿಳಂಬ ನೀತಿ ಅನುಸರಿಸುತ್ತಿದೆ. ಹೀಗಾಗಿ ಕಬ್ಬಿನ ಬೆಲೆ ಏರಿಕೆ ಮಾಡಬೇಕೆಂದು ಒತ್ತಾಯಿಸಿ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಕರೆ ನೀಡಿದ್ದಾರೆ.
ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ಕಾರ್ಖಾನೆಗಳು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಕಬ್ಬು ಕಟಾವು ಆಗಿ 16 ತಿಂಗಳಾಗುತ್ತಿದೆ. ರಾಜ್ಯ ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ರೈತನ ಜಮೀನಿನಿಂದ ಕಾರ್ಖಾನೆ ನಡುವೆ ಇರುವ ಕಿಲೋಮೀಟರ್ ಆಧಾರದ ದರ ಕಡಿತ ಮಾಡಬೇಕು. ಕಾನೂನು ಬಾಹಿರವಾಗಿ ಹೆಚ್ಚುವರಿ ಮಾಡಿದರೆ ಆಯಾ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ವಂಚನೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಸಕ್ಕರೆ ಉದ್ದಿಮೆ ಸಕ್ಕರೆ ಹಾಗೂ ಕಬ್ಬು ಬೇಸಾಯ ಸಂಪೂರ್ಣವಾಗಿ ಗಣಕೀಕರಣವಾಗಬೇಕು. ರೈತನ ಕಬ್ಬಿನ ನಾಟಿ ಒಪ್ಪಂದ, ಜೇಷ್ಠತೆ ಆಧಾರದ ಕಟಾವು ಅನುಮತಿ, ಕಬ್ಬಿನ ತೂಕ, ಕಬ್ಬಿನ ಹಣ ಪಾವತಿ, ಸಕ್ಕರೆ ಇಳುವರಿ, ಎಲ್ಲವೂ ಗಣಕೀಕರಣವಾಗಿ ರೈತರ ಮೊಬೈಲ್ ಆಪ್ ಮೂಲಕ ನೋಂದಾಯಿಸುವ ಅವಕಾಶ ನೀಡಬೇಕೆಂದು ಒತ್ತಾಯಿಸಲಾಗಿತ್ತು. ಈಗ ಅದನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಹಾಗೆಯೇ ಪ್ರತಿ ಟನ್ ಕಬ್ಬಿಗೆ 5,500 ದರ ನಿಗದಿ ಮಾಡುವ ಕುರಿತು ಸರ್ಕಾರ ಕ್ರಮವಹಿಸಬೇಕೆಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಸರ್ಕಾರ ಈ ಪ್ರತಿಭಟನೆ ಜಗ್ಗದೇ ಹೋದಲ್ಲಿ ವಿವಿಧ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಮುತ್ತಿಗೆ ಹಾಕಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೆಳಿಗ್ಗೆ 11 ರಿಂದ 1 ಗಂಟೆ ವರೆಗೆ ಹೆದ್ದಾರಿಗಳು ಬಂದ್ ಮಾಡುವುದಕ್ಕೆ ಸಂಬಂಧಿಸಿದಂತೆ, ಈಗಾಗಲೇ ಧಾರವಾಡ, ಬಿಜಾಪುರ, ಬಾಗಲಕೋಟೆ, ದಾವಣಗೆರೆ, ಮೈಸೂರು ಚಾಮರಾಜನಗರ ಜಿಲ್ಲೆಗಳಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ವಿವಿಧ ಜಿಲ್ಲೆಗಳಲ್ಲಿಯೂ ಸಿದ್ದತೆಗಳು ನಡೆದಿದೆ. ಪ್ರಯಾಣಿಕರು, ಜನಸಾಮಾನ್ಯರು ರೈತರ ಹಿತದೃಷ್ಟಿಯಿಂದ ಸಹಕಾರ ಕೊಡಬೇಕು ಎಂದು ಕುರುಬೂರು ಶಾಂತಕುಮಾರ್ ಮನವಿ ಮಾಡಿಕೊಂಡರು.
ಹಲವಾರು ಬಾರಿ ಪ್ರತಿಭಟನೆ ಮಾಡಿ ಮನವಿ ನೀಡಿದ್ದರೂ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಈ ತಿಂಗಳ 31 ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗಳ ಮುತ್ತಿಗೆ ಹಾಕಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.