ರಾಯಚೂರು: ಚಾಮರಾಜನಗರ ಜಿಲ್ಲೆಯಲ್ಲಿ ಶನಿವಾರ ಸಂಜೆ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಸಮಸ್ಯೆ ಹೇಳಿಕೊಳ್ಳಲು ವಸತಿ ಸಚಿವ ವಿ.ಸೋಮಣ್ಣ ಮಹಿಳೆ ಕಪಾಳಕ್ಕೆ ಹೊಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪುಷ್ಪ ಅಮರನಾಥ್ ಅವರು, ಇದು ಬಿಜೆಪಿ ಮಹಿಳಾ ವಿರೋಧಿ ಮನಸ್ಥಿತಿ ತೋರಿಸುತ್ತೆ. ವಿ.ಸೋಮಣ್ಣ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಸಚಿವ ವಿ.ಸೋಮಣ್ಣ ಕೂಡಲೇ ಕ್ಷಮೆ ಕೇಳಬೇಕು. ಗೃಹ ಸಚಿವರು ಜೀವಂತವಾಗಿದ್ದರೆ, ವಿಡಿಯೋ ನೋಡಿ ಕ್ರಮಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಕೆಂಪಮ್ಮ ಎಂಬ ಮಹಿಳೆಯು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದವರು. ವಿಡಿಯೋ ನೋಡಿದ್ದಿನಿ, ಶಾಕ್ ಆಯ್ತು. ನಾಚಿಕೆಗೇಡಿನ ಘಟನೆಯಿದು ಎಂದು ತಿಳಿಸಿರುವ ಪುಷ್ಪ ಅಮರನಾಥ್ ಅವರು, ಮಹಿಳೆಯು ತನ್ನ ಸಮಸ್ಯೆಯನ್ನು ಹೇಳಿಕೊಂಡು, ಹಕ್ಕು ಪತ್ರ ಕೇಳಿರಬಹುದು. ಆಗ ಆಕೆಗೆ ಕೆನ್ನೆಗೆ ಹೊಡೆದಿರೋದು ಕಾಣಿಸುತ್ತಿದೆ. ನಾನು ಮಹಿಳೆಯಾಗಿ ಒಂದೇ ಕೇಳುತ್ತೇನೆ. ನಿಮ್ಮ ಮನೆಯಲ್ಲಿ ಮಹಿಳೆಯರಿದ್ದಾರೆ, ಮಕ್ಕಳಿದ್ದಾರೆ. ಮಹಿಳೆಯರನ್ನ ನೋಡೊವಾಗ ಪ್ರಾಣಿಗಳನ್ನ ನೋಡೊ ರೀತಿ ನೋಡುತ್ತೀರಾ ಎಂದು ಪ್ರಶ್ನಿಸಿದರು.
ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮದ ಸಂದರ್ಭದಲ್ಲಿ ತನ್ನ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆಗೆ ವಸತಿ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿರುವ ಘಟನೆ ಜಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಅಕ್ಟೋಬರ್ 22ರ ಸಂಜೆ ನಡೆದಿದೆ.
ಸದ್ಯ ಹರಿದಾಡಿದ್ದ ವಿಡಿಯೊದಲ್ಲಿ ಸಚಿವ ವಿ.ಸೋಮಣ್ಣ ಮಹಿಳೆಯ ಕೆನ್ನೆಗೆ ಹೊಡೆಯುವುದು ಸ್ಪಷ್ಟವಾಗಿ ದಾಖಲಾಗಿದೆ.