ಮೈಸೂರು: ಕಾಲೇಜುಗಳಲ್ಲಿ ಏಕಾಏಕಿ, ಎಲ್ಲಾ ವಿದ್ಯಾರ್ಥಿಗಳು ಮೊದಲನೇ ವರ್ಷದ, ಎರಡನೇ ವರ್ಷದ ಹಾಗೂ ಮೂರನೇ ವರ್ಷದ ಪ್ರವೇಶ ಶುಲ್ಕವನ್ನು ಒಟ್ಟಿಗೆ ಕಟ್ಟಬೇಕೆಂದು ಆದೇಶ ಖಂಡಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಅರ್ಗನೈಜೇಶನ್(ಎಐಡಿಎಎಸ್ಒ) ಪ್ರತಿಭಟನೆ ನಡೆಸಿದರು.
ಮೈಸೂರು ವಿಶ್ವವಿದ್ಯಾಲಯದ ಎದುರು ಮಹಾರಾಣಿ ಕಾಲೇಜು ವಿದ್ಯಾರ್ಥಿಗಳು ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಪ್ರವೇಶ ಶುಲ್ಕ, ವಿದ್ಯಾರ್ಥಿ ವೇತನ ಹಾಗೂ ಮಹಾರಾಣಿ ಕಾಲೇಜಿನ ಕಟ್ಟಡದ ಕೆಲ ಭಾಗಗಳು ಸಾಕಷ್ಟು ಶಿಥಿಲಾವಸ್ಥೆಯಲ್ಲಿದ್ದು ಅದನ್ನು ಸರಿಪಡಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಎಐಡಿಎಸ್ಒ ಸಂಘಟನೆಯ ಮೈಸೂರು ಜಿಲ್ಲಾಧ್ಯಕ್ಷರಾದ ಸುಭಾಷ್ ಮಾತನಾಡಿ, ಕಾಲೇಜುಗಳ ಪ್ರವೇಶಾತಿ ಪ್ರಾರಂಭವಾಗಿದೆ. ಮಹಾರಾಣಿ ಕಾಲೇಜಿನಲ್ಲಿ ಒಬ್ಬ ವಿದ್ಯಾರ್ಥಿಗೆ ರೂ.16,000 ಮಹಾರಾಜ ಕಾಲೇಜಿನಲ್ಲಿ ಒಬ್ಬ ವಿದ್ಯಾರ್ಥಿಗೆ ರೂ.30,000 ಹಾಗೂ ಯುವರಾಜ ಕಾಲೇಜಿನಲ್ಲಿ 30 ರಿಂದ 60 ಸಾವಿರ ಶುಲ್ಕವನ್ನು ಕಟ್ಟಬೇಕೆಂದು ಆದೇಶ ಹೊರಡಿಸಿದ್ದಾರೆ. ಮೊದಲನೇ ವರ್ಷದ ವಿದ್ಯಾರ್ಥಿಗಳು ಈಗಾಗಲೇ ಪ್ರವೇಶ ಶುಲ್ಕವನ್ನು ಕಟ್ಟಿ ಪ್ರವೇಶಾತಿ ಪಡೆದು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಈಗ ಒಟ್ಟಿಗೆ ಮೂರು ವರ್ಷದ ಪ್ರವೇಶಾತಿ ಶುಲ್ಕವನ್ನು ಕಟ್ಟಬೇಕೆಂಬುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು.
ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳಿಗೆ ಸರಿಯಾದ ವಿದ್ಯಾರ್ಥಿ ವೇತನ ಬಂದಿಲ್ಲ. ಮೂರನೇ ವರ್ಷದ ಪ್ರವೇಶ ಶುಲ್ಕವನ್ನು ವಿದ್ಯಾರ್ಥಿ ವೇತನ ಬಂದ ನಂತರ ಕಟ್ಟಲಾಗುವುದು ಅದಕ್ಕಾಗಿ ಸಮಯಾವಕಾಶ ಕೊಡಿ ಕೇಳುತ್ತಿದ್ದೇವೆ. ಹೀಗಿದ್ದರೂ ಏಕಾಏಕಿ ಸಾವಿರಾರು ರೂಪಾಯಿ ಪ್ರವೇಶ ಶುಲ್ಕವನ್ನು ಕಟ್ಟಿ ಎಂದು ಒತ್ತಡ ಹೇರುತ್ತಿರುವುದು ವಿದ್ಯಾರ್ಥಿ ವಿರೋಧಿ ನಿಲುವಾಗಿದೆ ಎಂದು ಆರೋಪಿಸಿದರು.
ಸರ್ಕಾರಿ ಶಾಲಾ ಕಾಲೇಜಿನಲ್ಲಿ ಓದುತ್ತಿರುವುದು ಬಹುತೇಕ ವಿದ್ಯಾರ್ಥಿಗಳು ಬಡವರ ರೈತರ ಕೂಲಿ ಕಾರ್ಮಿಕರ ಮಕ್ಕಳು, ಇವರಿಗೆ ಏಕಾಏಕಿ ಸಾವಿರಾರು ರೂಪಾಯಿ ಶುಲ್ಕ ಕಟ್ಟಿ ಎಂದು ಹೇಳಿದರೆ ಹೇಗೆ ಕಟ್ಟುವುದು ಎಂದು ಪ್ರಶ್ನಿಸಿದರು. ಸರ್ಕಾರ ಹಾಗೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಈ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.
ಕೂಡಲೇ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಮಹಾರಾಣಿ ವಿಜ್ಞಾನ ಕಾಲೇಜಿನ ಕಟ್ಟಡ ಕುಸಿದಿರುವುದರ ಬಗ್ಗೆ ಮಾತನಾಡಿದ ಸುಭಾಷ್ ಅವರು, ಬೇಜವಾಬ್ದಾರಿತನದಿಂದ ಹಳೆಯ ಕಟ್ಟಡಗಳನ್ನು ದುರಸ್ತಿ ಮಾಡದೆ, ಯಾವುದೇ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದೆ ಇರುವುದು ಸರ್ಕಾರ ಹಾಗೂ ಆಡಳಿತ ಮಂಡಳಿಯ ವೈಫಲ್ಯ ಎಂದು ಟೀಕಿಸಿದರು. ಈ ಕೂಡಲೇ ಹಳೆಯ ಕಟ್ಟಡಗಳಲ್ಲಿ ಯಾವುದೇ ತರಗತಿಗಳು ನಡೆಯಬಾರದು ಹಾಗೂ ಕಟ್ಟಡಗಳನ್ನು ದುರಸ್ತಿ ಮಾಡಬೇಕು, ಹೊಸ ಕಟ್ಟಡಗಳನ್ನು ಕಟ್ಟಿ ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಮೈಸೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಎಐಡಿಎಸ್ಒ ಸಂಘಟನೆಯು ಮನವಿ ಪತ್ರವನ್ನು ಸಲ್ಲಿಸಿತು. ಪ್ರತಿಭಟನೆಯಲ್ಲಿ ಎಐಡಿಎಸ್ಒ ಸಂಘಟನೆಯ ಪದಾಧಿಕಾರಿಗಳಾದ ನಿತಿನ್, ಸ್ವಾತಿ, ಚಂದ್ರಿಕಾ, ಚಂದನ, ಹೇಮಾ, ವಿದ್ಯಾರ್ಥಿಗಳಾದ ಹರ್ಷಿತಾ, ಅಂಕಿತ, ಸುಚಿತ್ರ, ರಮ್ಯಾ ಸಂಧ್ಯಾ ದೀಪಿಕಾ, ಸಂಗೀತ, ಕಾವ್ಯ, ಅಂಜಲಿ ಐಶ್ವರ್ಯ, ನಿರ್ಮಲ, ವೀರೇಶ್, ಅಭಿಷೇಕ್ ಮುಂತಾದವರು ಪಾಲ್ಗೊಂಡಿದ್ದರು.