ಜಾಗತಿಕ ಆರ್ಥಿಕ ಹಿನ್ನಡೆ: ಏಕಾಏಕಿ 1 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್ ಸಂಸ್ಥೆ

ಜಾಗತಿಕ ಆರ್ಥಿಕ ಹಿನ್ನಡೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಕಂಪನಿಗಳು ಇದೀಗ ಉದ್ಯೋಗಿಗಳನ್ನು ಕಡಿತಗೊಳಿಸುವ ಕ್ರಮಕ್ಕೆ ಮುಂದಾಗುತ್ತಿದೆ. ಇದೀಗ, ಖ್ಯಾತ ತಂತ್ರಜ್ಞಾನ ಸಂಸ್ಥೆ ಮೈಕ್ರೋಸಾಫ್ಟ್‌ ಏಕಾಏಕಿ 1000 ಮಂದಿ ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ವರದಿಯಾಗಿದ್ದು, ಸಂಸ್ಥೆಯಲ್ಲಿನ ಎಕ್ಸ್​ಬಾಕ್ಸ್, ಎಡ್ಜ್​ ಸೇರಿದಂತೆ ಅನೇಕ ತಂಡಗಳಿಂದ, ಜಗತ್ತಿನ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎನ್ನಲಾಗಿದೆ. ಇದರೊಂದಿಗೆ ಕಂಪನಿಯ ಒಟ್ಟು ಉದ್ಯೋಗಿಗಳ ಪೈಕಿ ಶೇಕಡಾ 1ರಷ್ಟು ಮಂದಿಯನ್ನು ವಜಾ ಮಾಡಿದಂತಾಗಿದೆ ಎಂದು ವರದಿಗಳು ದೃಢಪಡಿಸುತ್ತಿಒವೆ.

ಈ ಹಿಂದಿನ ವರದಿಗಳ ಪ್ರಕಾರ, ಮೈಕ್ರೋಸಾಫ್ಟ್​ನಲ್ಲಿ 2,21,000 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿತ್ತು. ಅಮೆರಿಕದ ಹಲವು ತಂತ್ರಜ್ಞಾನ ಆಧಾರಿತ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಮತ್ತು ನೇಮಕಾತಿ ವಿಳಂಬದ ಮೊರೆ ಹೋಗಿವೆ ಎಂದು ವರದಿಯಾಗಿದೆ.

ಇದೀಗ ಉದ್ಯೋಗಿಗಳನ್ನು ಕಡಿತಗೊಳಿಸುವ ಸಾಲಿಗೆ ಮೈಕ್ರೋಸಾಫ್ಟ್ ಸಹ ಉಳಿದ ಕಂಪನಿಗಳೊಂದಿಗೆ ಸೇರಿದೆ. ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಮೆಟಾ ಪ್ಲಾಟ್​ಫಾರ್ಮ್ಸ್ ಇಂಕ್, ಟ್ವಿಟರ್ ಇಂಕ್, ಸ್ನ್ಯಾಪ್ ಇಂಕ್​ಗಳು ಉದ್ಯೋಗ ಕಡಿತ ಮಾಡಿವೆಯಲ್ಲದೆ, ನೇಮಕಾತಿ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿವೆ.

ಉದ್ಯೋಗಿಗಳನ್ನು ಕೆಲಸದಿಂದ ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಮೈಕ್ರೋಸಾಫ್ಟ್ ಜುಲೈ ತಿಂಗಳಲ್ಲಿ ಹೇಳಿತ್ತು. ನಾವು ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನಷ್ಟೇ ವಜಾಗೊಳಿಸಿದ್ದೇವೆ. ಇತರ ಕಂಪನಿಗಳಂತೆ ನಾವೂ ಸಹ ನಮ್ಮ ವ್ಯಾಪಾರದ ಆದ್ಯತೆಗಳನ್ನು ಸದಾ ಮೌಲ್ಯಮಾನ ಮಾಡುತ್ತಿರುತ್ತೇವೆ. ಅದರಂತೆ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಕಂಪನಿ ಹೇಳಿತ್ತು.

ಮೆಟಾ ಇತ್ತೀಚೆಗೆ 60 ಗುತ್ತಿಗೆದಾರರನ್ನು ವಜಾಗೊಳಿಸಿತ್ತು. ಜಾಗತಿಕವಾಗಿ ಕಾಯಂ ಉದ್ಯೋಗಿಗಳ ಸಂಖ್ಯೆಯಲ್ಲಿ ಅಂದಾಜು ಶೇಕಡಾ 20ರಷ್ಟು ಕಡಿತ ಮಾಡುವುದಾಗಿ ಇದೇ ವರ್ಷ ಆಗಸ್ಟ್ 31ರಂದು ‘ಸ್ನ್ಯಾಪ್’ ಹೇಳಿತ್ತು.

ಭಾರತದಲ್ಲಿಯೂ ಉದ್ಯೋಗ ಕಡಿತ

ಭಾರತದಲ್ಲಿಯೂ ವಿಪ್ರೊ, ಇನ್ಫೊಸಿಸ್​ ನಂಥ ತಂತ್ರಜ್ಞಾನ ಆಧಾರಿತ ಕಂಪನಿಗಳು ಈ ವರ್ಷ ಉದ್ಯೋಗ ಕಡಿತ ಮಾಡುವುದಾಗಿ ಈಗಾಗಲೇ ಘೋಷಿಸಿವೆ. ಮುಂದಿನ ತಿಂಗಳುಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯುವುದಾಗಿ ಆ್ಯಪಲ್, ಒರೇಕಲ್, ಗೂಗಲ್ ಹಾಗೂ ಇತರ ಕಂಪನಿಗಳು ಇತ್ತೀಚೆಗೆ ಘೋಷಿಸಿದ್ದವು.

ಕಂಪನಿಗಳ ಆರ್ಥಿಕ ಬೆಳವಣಿಗೆಯಲ್ಲಿ ಮುಂದಿನ ದಿನಗಳಲ್ಲಿ ಕುಸಿತವಾಗುವ ಸಾಧ್ಯತೆ ಇದ್ದು, 2023ರಲ್ಲಿ ಭಾರತದಲ್ಲಿ ಆರ್ಥಿಕ ಹಿಂಜರಿತ ಕಂಡುಬರಬಹುದು ಎಂದು ಹಲವು ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈಚೆಗೆ ಅಭಿಪ್ರಾಯಪಟ್ಟಿದ್ದಾರೆ. ಪರಿಣಾಮವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಕಡಿತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಮೆರಿಕದಲ್ಲಿ 32,000 ಉದ್ಯೋಗ ಕಡಿತ

ಉದ್ಯಮಕ್ಕೆ ಸಂಬಂಧಿಸಿದ ಮಾಹಿತಿ ತಾಣ ‘ಕ್ರಂಚ್​ ಬೇಸ್’ನಲ್ಲಿ ಪ್ರಕಟವಾದ ವಿಶ್ಲೇಷಣೆಯೊಂದರ ಪ್ರಕಾರ ಅಮೆರಿಕದ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು ಜುಲೈನಲ್ಲಿ 32,000 ಉದ್ಯೋಗಿಗಳನ್ನು ವಜಾಗೊಳಿಸಿವೆ ಎನ್ನಲಾಗಿದೆ.

Donate Janashakthi Media

One thought on “ಜಾಗತಿಕ ಆರ್ಥಿಕ ಹಿನ್ನಡೆ: ಏಕಾಏಕಿ 1 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್ ಸಂಸ್ಥೆ

Leave a Reply

Your email address will not be published. Required fields are marked *