ಯು.ಎಸ್ ರೈಲು ಕಾರ್ಮಿಕರು ರೈಲು ಕಂಪನಿಗಳು ಕೊಟ್ಟಿರುವ ಒಪ್ಪಂದವನ್ನು ತಿರಸ್ಕರಿಸಿದ್ದು, ದೇಶವ್ಯಾಪಿ ರೈಲು ಮುಷ್ಕರದ ಅಪಾಯವನ್ನು ಹೆಚ್ಚಿಸಿದೆ. ಅನಾರೋಗ್ಯ ರಜಾದ ಅಭಾವ, ಹಿಂಡಿ ಹಿಪ್ಪೆ ಮಾಡುವ ಕೆಲಸದ ಅವಧಿ ಮುಂತಾದ ಕೆಟ್ಟ ಕೆಲಸದ ಪರಿಸ್ಥಿತಿಗಳನ್ನು ಬದಲಾಯಿಸಲು ಒಪ್ಪಂದ ನಿರಾಕರಿಸಿದೆ ಎಂಬುದು ಈ ತಿರಸ್ಕಾರಕ್ಕೆ ಕಾರಣವೆನ್ನಲಾಗಿದೆ. ರೈಲು ಕಾರ್ಮಿಕರು ಯು.ಎಸ್ ಆರ್ಥಿಕದ ಮೇಲೆ ಭಾರೀ ಪ್ರಭಾವ ಹೊಂದಿದ್ದಾರೆ. ಸುಮಾರು 1.15 ಲಕ್ಷದಷ್ಟು ಕಾರ್ಮಿಕರ ಸಂಖ್ಯಾಬಲವನ್ನು ಹೊಂದಿರುವ ರೈಲು ಉದ್ಯಮದ ಸರಕು ಸಾಗಾಣಿಕೆ ವಹಿವಾಟು 8 ಸಾವಿರ ಕೋಟಿ ಡಾಲರಿನಷ್ಟು ಮೌಲ್ಯವಿರುವಂಥದ್ದು.
ಅಕ್ಟೋಬರ್ 10ರಂದು ರೈಲು ಕಾರ್ಮಿಕರ ಮೂರನೇಯ ಅತಿ ದೊಡ್ಡ ಯೂನಿಯನ್ ಆದ BMWED (Brotherhood of Maintenance of Way Employees) ರೈಲು ಕಂಪನಿಗಳ ಒಪ್ಪಂದದ ಪ್ರಸ್ತಾವವನ್ನು ತಿರಸ್ಕರಿಸಿದೆ. ಆ ಮೂಲಕ ಯು.ಎಸ್ ಆರ್ಥಿಕತೆಯನ್ನು ಸ್ಥಗಿತಗೊಳಿಸಬಲ್ಲ ರಾಷ್ಟ್ರವ್ಯಾಪಿ ರೈಲು ಮುಷ್ಕರದ ಅಪಾಯವನ್ನು ಮತ್ತೆ ಮುನ್ನೆಲೆಗೆ ತಂದಿದೆ. ರೈಲು ಕಂಪನಿಗಳು ಮತ್ತು ಯೂನಿಯನುಗಳ ನಡುವೆ ಮಾತುಕತೆಗಳು ಮುರಿದು ಬಿದ್ದಾಗ, ಸೆಪ್ಟೆಂಬರ್ 15ರಂದು ಬಿಡೆನ್ ಆಡಳಿತ ಮಧ್ಯಪ್ರವೇಶ ಮಾಡಿತ್ತು. ಆಗ ಅಧ್ಯಕ್ಷೀಯ ತುರ್ತು ಬೋರ್ಡು ಕೊಟ್ಟ ಶಿಫಾರಸುಗಳ ಮೇಲೆ ರೈಲು ಕಂಪನಿಗಳ ಪ್ರಸ್ತಾವ ಆಧಾರಿತವಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಜುಲೈ ನಲ್ಲಿ ಮೊದಲ ಬಾರಿಗೆ ರಾಷ್ಟ್ರವ್ಯಾಪಿ ರೈಲು ಮುಷ್ಕರದ ಅಪಾಯ ತಲೆದೋರಿದಾಗ ಈ ಅಧ್ಯಕ್ಷೀಯ ತುರ್ತು ಬೋರ್ಡನ್ನು ರಚಿಸಲಾಗಿತ್ತು. ಬೋರ್ಡು ಕೊಟ್ಟ ಶಿಫಾರಸುಗಳು ವೇತನ ಏರಿಕೆಯ ಕಾರ್ಮಿಕರ ಹಕ್ಕೊತ್ತಾಯಗಳನ್ನು ಒಳಗೊಂಡಿದ್ದವು. ಆದರೆ ಕೆಲಸದ ಪರಿಸ್ಥಿತಿಯ ಕುರಿತು ಕಾರ್ಮಿಕ ಸಂಘಗಳು ತಮ್ಮ ರೈಲು ಕಂಪನಿಗಳೊಂದಿಗೆ ಮಾತುಕತೆ ಮೂಲಕ ಬಗೆಹರಿಸಬೇಕೆಂದು ಬೋರ್ಡು ಶಿಫಾರಸು ಮಾಡಿತ್ತು. ಇದು ಬಹಳ ಸಮಯ ತೆಗೆದುಕೊಳ್ಳುವಂಥದ್ದು ಮತ್ತು ಹೆಚ್ಚು ಕಡಿಮೆ ಅಸಾಧ್ಯವಾದದ್ದು ಎಂಬುದು ಕಾರ್ಮಿಕರಿಗೆ ಗೊತ್ತಿರುವುದರಿಂದ ಅವರು ಈ ಕುರಿತು ಪಟ್ಟು ಹಿಡಿದಿದ್ದಾರೆ.
ಯು.ಎಸ್ ರೈಲು ಕಾರ್ಮಿಕರು ಮೂರು ಯೂನಿಯನುಗಳಲ್ಲಿ ಸಂಘಟಿತರಾಗಿದ್ದು BMWED ಒಪ್ಪಂದವನ್ನು ತಿರಸ್ಕರಿಸಿದ ಮೊದಲ ಯೂನಿಯನ್ ಆಗಿದೆ. ಈ ಯೂನಿಯನ್ ಒಪ್ಪಂದ ಒಪ್ಪಿಕೊಳ್ಳಬೇಕೆ ಬೇಡವೇ ಎಂಬುದರ ಕುರಿತು ಮತದಾನ ನಡೆಸಿದ್ದು ಶೇ.56 ರಷ್ಟು ಕಾರ್ಮಿಕರು ಒಪ್ಪಂದವನ್ನು ತಿರಸ್ಕರಿಸಿದ್ದಾರೆ. ಈ ತಿರಸ್ಕಾರದಿಂದಾಗಿ ಕಂಪನಿಗಳು ಹೊಸ ಒಪ್ಪಂದವನ್ನು ಕೊಡಬೇಕಾಗಿದೆ. ಇಲ್ಲದಿದ್ದರೆ ಯೂನಿಯನ್ ನವೆಂಬರ್ 19ರಂದು ಮುಷ್ಕರ ಆರಂಭಿಸುವುದಾಗಿ ಯೂನಿಯನ್ ಹೇಳಿದೆ. ಈ ಒಪ್ಪಂದವನ್ನು 7 ಪ್ರಥಮ ದರ್ಜೆಯ ರೈಲು ಸರಕು ಸಾಗಾಣಿಕೆ ಕಂಪನಿಗಳು ಕೊಟ್ಟಿದ್ದವು. ಉಳಿದೆರಡು ದೊಡ್ಡ ಯೂನಿಯನುಗಳಾದ BLET and SMART-TD ಒಪ್ಪಂದದ ಕುರಿತು ನವೆಂಬರ್ ನಲ್ಲಿ ತಮ್ಮ ಕಾರ್ಮಿಕ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಿವೆ.
ಪ್ರಸ್ತಾವಿತ ಒಪ್ಪಂದದಲ್ಲಿ ಶೇ.24ರಷ್ಟು ವೇತನ ಏರಿಕೆ ಮತ್ತು 5000 ಡಾಲರುಗಳ ಬೋನಸ್ ಸೇರಿದೆ. ಆದರೆ ಅನಾರೋಗ್ಯ ರಜಾದ ಅಭಾವ, ಹಿಂಡಿ ಹಿಪ್ಪೆ ಮಾಡುವ ಬಿಡುವಿಲ್ಲದ ದೀರ್ಘ ಕೆಲಸದ ಅವಧಿ ಮುಂತಾದ ಕೆಟ್ಟ ಕೆಲಸದ ಪರಿಸ್ಥಿತಿಗಳಿಂದ ಕಾರ್ಮಿಕರು ನರಳುತ್ತಿದ್ದಾರೆ. ರೈಲು ಕಂಪನಿಗಳು ತಮ್ಮ ಲಾಭಾಂಶ ಹೆಚ್ಚಿಕೊಳ್ಳಲು 2015-2021 ಅವಧಿಯಲ್ಲಿ ಕಾರ್ಮಿಕರ ಸಂಖ್ಯೆಯನ್ನು 1.61 ಲಕ್ಷದಿಂದ 1.15 ಲಕ್ಷಕ್ಕೆ ಕಡಿತಗೊಳಿಸಿದೆ. ಇದೇ ಅವಧಿಯಲ್ಲಿ ಸರಕು ಸಾಗಾಣಿಕೆ ಪ್ರಮಾಣ ಏರಿಕೆ ಕಂಡಿದೆ. ಕಾರ್ಮಿಕರ ಜೀವನದ ಗುಣಮಟ್ಟದ ಕುರಿತು ಕಂಪನಿಗಳಿಗೆ ಕಿಂಚಿತ್ತು ಕಾಳಜಿಯಿಲ್ಲವೆಂಬುದು ಸ್ಪಷ್ಟ. ಇದು ಕಾರ್ಮಿಕರನ್ನು ರೊಚ್ಚಿಗೆಬ್ಬಿಸಿದೆಯೆಂದು BMWED ಅಧ್ಯಕ್ಷ ಟೋನಿ ಕಾರ್ಡ್ ವೆಲ್ ಹೇಳಿದ್ದಾರೆ.