ಕೇಂದ್ರ ಸರ್ಕಾರ ಮತ್ತೆ ಮತ್ತೆ ಹಿಂದಿ ಹೇರಿಕೆಯ ಯತ್ನಕ್ಕೆ ಮುಂದಾಗುತ್ತಿದೆ. ಸದ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಗಳ ಸಂಸದೀಯ ಸ್ಥಾಯಿ ಸಮಿತಿ ಸಲ್ಲಿಸಿದ್ದ ವರದಿಯಿಂದ ಕಿಚ್ಚು ಹತ್ತಿಕೊಂಡಿದೆ. ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಿಂದಿ ಹೇರಿಕೆ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿ ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮವು ಕಡ್ಡಾಯವಾಗಿ ಹಿಂದಿ ಮತ್ತು ಸ್ಥಳೀಯ ಭಾಷೆಯಾಗಿರಬೇಕು. ಇದಲ್ಲದೆ, ನೇಮಕಾತಿ ಪರೀಕ್ಷೆಗಳಲ್ಲಿ ಕಡ್ಡಾಯ ಇಂಗ್ಲಿಷ್ ಭಾಷೆಯ ಪ್ರಶ್ನೆ ಪತ್ರಿಕೆಗಳನ್ನು ತೆಗೆಯಬೇಕು. ಇಂಗ್ಲಿಷ್ ಅನ್ನು ಸಂಪೂರ್ಣವಾಗಿ ಬೋಧನಾ ಮಾಧ್ಯಮವಾಗಿ ಮಾತ್ರ ಬಳಸಬೇಕು ಮತ್ತು ಕ್ರಮೇಣ ಅದನ್ನು ಹಿಂದಿಯಾಗಿ ಬದಲಾಯಿಸಬೇಕು. ‘ಎ’ ವರ್ಗದ ರಾಜ್ಯಗಳಲ್ಲಿ ಹಿಂದಿಗೆ ಗೌರವಾನ್ವಿತ ಸ್ಥಾನ ನೀಡಬೇಕು. ಅದನ್ನ ಶೇ 100ರಷ್ಟು ಬಳಸಬೇಕು. ಹಿಂದಿಯನ್ನು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಒಂದನ್ನಾಗಿ ಮಾಡಬೇಕು. ಅಮಿತ್ ಶಾ ನೇತೃತ್ವದ ಸಮಿತಿಯು 11ನೇ ವರದಿಯಲ್ಲಿ ಈ ಅಂಶಗಳನ್ನ ಉಲ್ಲೇಖಿಸಿದೆ. ಇದು ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಗಳ ಸಂಸದೀಯ ಸಮಿತಿ ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸಿದ್ದು, ಇದರಲ್ಲಿ ಹಿಂದಿ ಭಾಷೆಯನ್ನು ಹೇರುವಂತ ಅಂಶಗಳು ಇವೆ ಎಂಬ ಗಂಭೀರ ಆಪಾದನೆಗಳಿವೆ. ಇದರ ವಿರುದ್ಧ ದೊಡ್ಡ ದೊಡ್ಡ ನಾಯಕರು ಸಿಡಿದೆದ್ದಿದ್ದಾರೆ.
ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಡಿಎಂಕೆ ಪಕ್ಷ ಸಮರ ಸಾರಿದೆ. ಡಿಎಂಕೆ ಯುವ ಘಟಕ ಕಾರ್ಯದರ್ಶಿ ಉದಯ್ ನಿಧಿ ನೇತೃತ್ವದಲ್ಲಿ ತಮಿಳುನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟಿಸಲು ಕರೆ ನಡೆಸಿದ್ದರು. ಅತ್ತ ಪಶ್ಚಿಮ ಬಂಗಾಳದಲ್ಲಿಯೂ ಯುವಕರು ಧರಣಿ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕನ್ನಡದ ರಾಷ್ಟ್ರಕವಿ ಕುವೆಂಪು ಅವರ ಪೋಟೋ ಹಿಡಿದು ಬಂಗಾಳದ ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ವಿಶೇಷ.
ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಅಂತ ಜನ ಬೀದಿಗಿಳಿದಿದ್ದಾರೆ. ಕುವೆಂಪು, ಅಣ್ಣಾದೊರೈ ಮತ್ತು ಥಳಪತಿ ಫೋಟೋ ಹಿಡಿದು ಪ್ರತಿಭಟಿಸುತ್ತಿದ್ದಾರೆ.
ಡಿಎಂಕೆ ಪ್ರತಿಭಟನೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅಸಮಾಧಾನ ಹೊರಹಾಕಿದ್ದು, ರಾಜಕೀಯ ದುರುದ್ದೇಶದಿಂದಲೇ ಈ ರೀತಿ ಮಾಡಲಾಗ್ತಿದೆ ಎಂದು ಕಿಡಿಕಾರಿದ್ದಾರೆ. ಜೊತೆಗೆ ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಮಾಡಲು ನಾವು ಬಿಡುವುದಿಲ್ಲ ಎಂದಿದ್ದಾರೆ. ಸದ್ಯ ಸಿ ವರ್ಗದಲ್ಲಿ ಬರುವ ರಾಜ್ಯಗಳಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಪ್ರತಿಭಟನೆಗಳಾಗುತ್ತಿದೆ. ಮುಂದೆ ಇದು ಯಾವ ರೂಪ ಪಡೆದುಕೊಳ್ಳುತ್ತೆ ಅನ್ನೋದು ನೋಡಬೇಕಷ್ಟೇ.