‘ಹಿಂದೂ’ ಪದವನ್ನು ಸೃಷ್ಟಿಸಿದ್ದು ಬ್ರಿಟಿಷರು: ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ

ಚೆನ್ನೈ : ಚೋಳರ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ. ಬ್ರಿಟಿಷರು ತಮ್ಮ ಅನುಕೂಲಕ್ಕಾಗಿ ಹಿಂದೂ ಪದವನ್ನು ಸೃಷ್ಟಿಸಿಕೊಂಡಿದ್ದು ಅಷ್ಟೇ ಎಂದು ಖ್ಯಾತ ನಟ ಕಮಲ್‌ಹಾಸನ್‌ ಹೇಳಿದ್ದಾರೆ. ರಾಜ ರಾಜ ಚೋಳ ಹಿಂದೂ ಆಗಿರಲಿಲ್ಲ ಎಂದು ಖ್ಯಾತ ತಮಿಳು ಸಿನಿಮಾ ನಿರ್ದೇಶಕ ವೆಟ್ರಿಮಾರನ್‌ ಹೇಳಿಕೆ ಸಮರ್ಥನೆ ವೇಳೆ ಕಮಲ್ ಹಾಸನ್‌ ಆಡಿದ ಮಾತುಗಳು ಭಾರಿ ವಿವಾದಕ್ಕೆ ಕಾರಣವಾಗಿದೆ. ರಾಜ ರಾಜ ಚೋಳನ ಚರಿತ್ರೆ ಆಧರಿಸಿದ, ಖ್ಯಾತ ನಿರ್ದೇಶನ ಮಣಿರತ್ನಂ ಅವರ ಐತಿಹಾಸಿಕ ಚಿತ್ರ ‘ಪೊನ್ನಿಯನ್‌ ಸೆಲ್ವನ್‌’ ಬಿಡುಗಡೆಯಾದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

ಭಾರತೀಯ ಸಿನಿಮಾ ರಂಗದ ಖ್ಯಾತ ನಟ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾವನ್ನು ಸಿನಿ ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ. ಬಾಕ್ಸ್ ಆಫೀಸಿನಲ್ಲಿ ದಾಖಲೆ ರೀತಿಯಲ್ಲಿ ಈ ಚಿತ್ರ ಕಲೆಕ್ಷನ್ ಮಾಡುತ್ತಿದೆ. ಈವರೆಗೂ 250 ಕೋಟಿಗೂ ಅಧಿಕ ಹಣವನ್ನು ಈ ಚಿತ್ರ ಗಳಿಸಿದೆ. ದೇಶಕ್ಕೆ ದೇಶವೇ ಈ ಸಿನಿಮಾವನ್ನು ಕೊಂಡಾಡುತ್ತಿರುವ ಹೊತ್ತಿನಲ್ಲಿ  ಕಮಲ್ ಹಾಸನ್ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.

ನಿನ್ನೆಯಷ್ಟೇ ಈ ಸಿನಿಮಾವನ್ನು ಕಮಲ್ ಹಾಸನ್ ವೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚಿತ್ರದ ಬಗ್ಗೆ ಸಾಕಷ್ಟು ಸಕಾರಾತ್ಮಕ ಮಾತುಗಳನ್ನು ಹೇಳಿದ್ದಾರೆ. ಕಥೆ ಚೆನ್ನಾಗಿದ್ದರೆ ಸಿನಿಮಾ ಗೆಲ್ಲುತ್ತದೆ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿ ಎಂದು ಹೇಳಿದ್ದಾರೆ. ಆಂಧ್ರದಲ್ಲಿ ಈ ಚಿತ್ರಕ್ಕೆ ಬೆಂಬಲ ಸಿಗುತ್ತಿಲ್ಲ ಎನ್ನುವ ಹೇಳಿಕೆಯನ್ನು ಅಲ್ಲಗಳೆದಿರುವ ಅವರು, ಯಾರೋ ಹೇಳುತ್ತಾರೆ ಅಂತ ನಂಬೋದು ಬೇಡ. ತೆಲುಗಿನಲ್ಲೂ ಈ ಚಿತ್ರಕ್ಕೆ ಬೆಂಬಲ ವ್ಯಕ್ತವಾಗಿದೆ ಅಂದಿದ್ದಾರೆ.

ಪೊನ್ನಿಯಿನ್ ಸೆಲ್ವನ್ ಸಿನಿಮಾದ ಕಥಾ ಹಂದರದ ಬಗ್ಗೆ ಮಾತನಾಡಿರುವ ಕಮಲ್, ಚೋಳ ರಾಜರು ಹಿಂದೂಗಳಲ್ಲ ಎಂದು ಹೇಳಿದ್ದು, ಈ ಮಾತೇ ವಿವಾದಕ್ಕೆ ಕಾರಣವಾಗಿದೆ. ಚೋಳ ರಾಜರು ಯಾಕೆ ಹಿಂದೂಗಳಲ್ಲ ಅನ್ನುವುದನ್ನೂ ವಿವರಿಸಿರುವ ಅವರು, ‘ಚೋಳನ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ. ರಾಜರಾಜ ಚೋಳನು ಆಳುತ್ತಿದ್ದ ವೇಳೆ ಶೈವ ಮತ್ತು ವೈಷ್ಣವ ಧರ್ಮ ಮಾತ್ರವಿತ್ತು. ಬ್ರಿಟಿಷರು ನಮ್ಮ ದೇಶಕ್ಕೆ ಬಂದಾಗ ನಮ್ಮನ್ನ ಹೇಗೆ ಕರೆಯಬೇಕು ಎಂದು ಅವರಿಗೆ ಗೊತ್ತಾಗಲಿಲ್ಲ. ಆನಂತರ ಅವರು ಹಿಂದೂ ಅಂತ ಕರೆದರು ಎಂದಿದ್ದಾರೆ.

ಕಮಲ್ ಹಾಸನ್ ಮಾತಿಗೂ ಮೊದಲು ತಮಿಳಿನ ಮತ್ತೋರ್ವ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಕೂಡ ‘ರಾಜರಾಜ ಚೋಳನು ಹಿಂದೂ ಆಗಿರಲಿಲ್ಲ’ ಎಂಬ ಹೇಳಿಕೆ ನೀಡಿದ್ದರು. ಇದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಪೊನ್ನಿಯಿನ್ ಸೆಲ್ವನ್ ಸಿನಿಮಾ ನೋಡಿದ ನಂತರ ಮಾತನಾಡಿದ್ದ ವೆಟ್ರಿಮಾರನ್ ‘ನಿರಂತರವಾಗಿ ನಮ್ಮಅಸ್ಮಿತೆಯನ್ನು ಕಸಿದುಕೊಳ್ಳಲಾಗುತ್ತಿದೆ. ವಳ್ಳುವರ್ ಅವರನ್ನು ಕೇಸರಿಕರಣ ಮಾಡುವುದು ಹಾಗೂ ರಾಜ ರಾಜ ಚೋಳನನ್ನು ಹಿಂದೂ ಎಂದು ಕರೆಯುವುದು ನಡೆದೇ ಇದೆ’ ಎಂದು ತಿವಿದಿದ್ದರು. ಅವರ ಮಾತು ಪರ ವಿರೋಧದ ಚರ್ಚೆಗೆ ಕಾರಣವಾಗಿತ್ತು.

ವೆಟ್ರಿಮಾರನ್ ಆಡಿದ ಮಾತಿಗೆ ಬಿಜೆಪಿಯ ಮುಖಂಡ ಎಚ್.ರಾಜಾ ಅವರು ಪ್ರತಿಕ್ರಿಯೆ ನೀಡಿ, ‘ನಿರ್ದೇಶಕ ವೆಟ್ರಿಮಾರನ್ ಅವರಿಗೆ ಇತಿಹಾಸ ಚೆನ್ನಾಗಿ ತಿಳಿದಿಲ್ಲ. ಅವರು ಇತಿಹಾಸವನ್ನು ಸರಿಯಾಗಿಯೂ ಓದಿಕೊಂಡಿಲ್ಲ. ರಾಜ ರಾಜ ಚೋಳನು ನಿರ್ಮಿಸಿದ ಎರಡು ಮಸೀದಿ ಅಥವಾ ಚರ್ಚ್ ತೋರಿಸಲಿ’ ಎಂದು ಸವಾಲು ಹಾಕಿದ್ದಾರೆ. ಈ ಮಾತಿಗೆ ಪೂರಕ ಎನ್ನುವಂತೆ ಕಮಲ್ ಹಾಸನ್ ಮಾತನಾಡಿದ್ದಾರೆ. ವೆಟ್ರಿಮಾರನ್ ಮಾತಿಗೆ ಬೆಂಬಲ ಸೂಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *