ಬೆಂಗಳೂರು : ಭಾರತ ಕಮ್ಯೂನಿಸ್ಟ್ ಪಕ್ಷದ 24ನೇ ರಾಜ್ಯ ಸಮ್ಮೇಳನವು ಹಾಸನ ನಗರದಲ್ಲಿ ಸೆಪ್ಟೆಂಬರ್ 25-27ರ ವರೆಗೆ ಯಶಸ್ವಿಯಾಗಿ ಜರುಗಿತು. ಈ ಸಮ್ಮೇಳನದಲ್ಲಿ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದರು.
ಬೆಂಗಳೂರಿನ ಪ್ರೆಸ್‌ಕ್ಲಬ್ ನಲ್ಲಿ ಇಂದು ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿದ್ದು ನವ-ಉದಾರವಾದಿ ಆರ್ಥಿಕ ನೀತಿಗಳನ್ನು ಅತ್ಯಂತ ವೇಗವಾಗಿ ಜಾರಿಗೊಳಿಸುತ್ತಿವೆ. ಇದರಿಂದಾಗಿ ಸಾರ್ವಜನಿಕ ವಲಯದ ಉದ್ದಿಮೆಗಳು, ಬ್ಯಾಂಕ್‌ಗಳು, ಎಲ್‌ಐಸಿ, ಬಂದರುಗಳು, ವಿಮಾನ ನಿಲ್ದಾಣಗಳು, ಕಲ್ಲಿದ್ದಲು ಗಣಿಗಳು, ರಸ್ತೆ ಸಾರಿಗೆ, ಟೆಲಿಕಾಂ, ಇಂಧನ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳನ್ನು ಕಾರ್ಪೊರೇಟ್ ಬಂಡವಾಳಶಾಹಿಗಳಿಗೆ ಈಗಾಗಲೇ ಹಸ್ತಾಂತರಿಸಲಾಗಿದೆ ಇಲ್ಲವೇ ಹಸ್ತಾಂತರಿಸಲಾಗುತ್ತಿದೆ. ಇದರಿಂದ ದೇಶದ ಸಾರ್ವಜನಿಕ ಸ್ವತ್ತು ಕೆಲವೇ ಕಾರ್ಪೊರೇಟ್ ಬಂಡವಾಳಶಾಹಿಗಳ ಕೈಗಳಲ್ಲಿ ಕೇಂದ್ರೀಕೃತವಾಗುತ್ತಿದೆ. ಈ ಅಪಾಯಕಾರಿ ಆರ್ಥಿಕ ನೀತಿಯು ಶ್ರೀಮಂತರು ಮತ್ತು ಬಡವರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸುತ್ತಿದೆ. ಇದು ತೀರಾ ವಿನಾಶಕಾರಿ ಬೆಳವಣಿಗೆ ಎಂದು ಆರೋಪಿಸಿದರು.
ಆಳುವ ಸರ್ಕಾರಗಳ ಕಾರ್ಪೊರೇಟ್-ಪರ ನೀತಿಗಳು ಜನರಿಗೆ ಅರ್ಥವಾಗದಂತೆ ತಡೆಯಲು ದಿನನಿತ್ಯ ಆರ್‌ಎಸ್‌ಎಸ್-ಬಿಜೆಪಿ ಕೂಟವು ಹುಸಿ ರಾಷ್ಟçಪ್ರೇಮದ ಮತವಿಭಜಕ ನೀತಿಯನ್ನು ಜಾರಿ ಮಾಡುತ್ತ ದೇಶದಲ್ಲಿ ಅಸಹನೆ, ಹಿಂಸೆ, ಗಲಭೆಗಳನ್ನು ಹುಟ್ಟುಹಾಕುತ್ತಿದೆ. ಆದುದರಿಂದ ಈ ಆರ್‌ಎಸ್‌ಎಸ್ ಬೆಂಬಲಿತ ಸರ್ಕಾರಗಳನ್ನು ಅಧಿಕಾರದಿಂದ ಇಳಿಸುವುದು ಅನಿವಾರ್ಯವಾಗಿದೆ. ಹೀಗಿರುವಾಗ ಬಿಜೆಪಿ-ವಿರೋಧಿ ಮತಗಳು ವಿಭಜನೆಯಾಗದಂತೆ ಜಾತ್ಯಾತೀತ, ಪ್ರಜಾಸತ್ತಾತ್ಮಕ, ಎಡ ಮತ್ತು ಪ್ರಾದೇಶಿಕ ಪಕ್ಷಗಳು ಕಾರ್ಯತಂತ್ರವನ್ನು ರೂಪಿಸಬೇಕಿದೆ. ಎಲ್ಲ ಫ್ಯಾಸಿಸ್ಟ್ ವಿರೋಧಿ ಶಕ್ತಿಗಳೂ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಸೋಲಿಸಲು ನಮ್ಮ ಸಮ್ಮೇಳನ ಕರೆ ನೀಡಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ವಿಜಯಭಾಸ್ಕರ್, ಬಿ.ಅಮ್ಜದ್, ಶಿವರಾಜ ರಾ ಬಿರಾದಾರ್ ಇದ್ದರು.
ಸಮ್ಮೇಳನ ಕೈಗೊಂಡ ಕೆಲವು ಪ್ರಮುಖ ನಿರ್ಣಯಗಳು ಈ ಕೆಳಗಿನಂತಿವೆ.
1. ಕೃಷಿ ಕ್ಷೇತ್ರವನ್ನು ಕಾರ್ಪೊರೇಟೀಕರಣಗೊಳಿಸುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಾಸನಗಳನ್ನು ಹಿಂಪಡೆಯಲು ಸಮ್ಮೇಳನ ಆಗ್ರಹಿಸಿದೆ.
2. ಕಾರ್ಮಿಕರ ಕನಿಷ್ಟ ಕೂಲಿಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿ ಕನಿಷ್ಟ 31 ಸಾವಿರದ ಐನೂರು ರೂಪಾಯಿಗಳಿಗೆ ನಿಗದಿಪಡಿಸಬೇಕು.
3. ಗುಜರಾತ್‌ನಲ್ಲಿ ಬಿಲ್ಕಿಸ್‌ಬಾನು ಮೇಲಿನ ಸಾಮೂಹಿಕ ಅತ್ಯಾಚಾರಿಗಳಿಗೆ ಕಾನೂನುಬಾಹಿರವಾಗಿ ಕ್ಷಮಾದಾನ ನೀಡಿ ಅವಧಿಪೂರ್ವ ಜೈಲಿನಿಂದ ಬಿಡುಗಡೆಗೊಳಿಸಿರುವ ಅಲ್ಲಿನ ಸರ್ಕಾರದ ಕ್ರಮವನ್ನು ಸಮ್ಮೇಳನ ಖಂಡಿಸುತ್ತಲೇ ಕ್ಷಮಾದಾನವನ್ನು ಹಿಂಪಡೆದು ಆ 11 ಪಾತಕಿಗಳನ್ನು ಪುನಃ ಜೈಲಿಗೆ ಕಳುಹಿಸಬೇಕು ಎಂದು ಸಮ್ಮೇಳನ ಗುಜರಾತ್ ಸರ್ಕಾರವನ್ನು ಒತ್ತಾಯಿಸುತ್ತದೆ.
4. ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಗಣಿ ನಿಕ್ಷೇಪಗಳನ್ನು ಪತ್ತೆಮಾಡಿ ಅಲ್ಲಿ ಗಣಿಗಾರಿಕೆ ಆರಂಭಿಸಿ ಹಾಗೂ ಈಗಾಗಲೇ ಸ್ಥಗಿತಗೊಂಡಿರುವ ಗಣಿಗಾರಿಕೆ ಮತ್ತು ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸಿ ಸ್ಥಳೀಯ ಯುವಜನರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು.
5. ಕೆಜಿಎಫ್‌ನಲ್ಲಿ ಚಿನ್ನದ ಗಣಿಗಾರಿಕೆಯನ್ನು ಪುನರಾರಂಭಿಸಬೇಕು, ನಿವೃತ್ತ ಬಿಜಿಎಂಎಲ್ ಕಾರ್ಮಿಕರಿಗೆ ಬಾಕಿ ಇರುವ 52 ಕೋಟಿ ರೂ.ಗಳು ಮತ್ತು 20 ವರ್ಷಗಳ ಸರಳ ಬಡ್ಡಿಯನ್ನು ಸೇರಿಸಿ ಪರಿಹಾರ ನೀಡಬೇಕು. ಬಿಜಿಎಂಎಲ್ ಕಾರ್ಮಿಕರು ಮತ್ತವರ ಕುಟುಂಬದವರು 120 ವರ್ಷಗಳಿಂದ ವಾಸವಾಗಿರುವ ಮನೆಗಳಿಗೆ ಅವರ ಹೆಸರಿಗೇ ಹಕ್ಕುಪತ್ರಗಳನ್ನು ನೀಡಬೇಕು.
6. ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಶರಣರ ವಿರುದ್ಧ ಅಪ್ರಾಪ್ತ ಬಾಲಕಿಯರು ನೀಡಿರುವ ಲೈಂಗಿಕ ದೌರ್ಜನ್ಯದ ಆರೋಪಗಳ ನಿಷ್ಪಕ್ಷಪಾತವಾದ ಮತ್ತು ನ್ಯಾಯಯುತವಾದ ಸಮಗ್ರ ತನಿಖೆಗಾಗಿ ಸರ್ಕಾರ ತನಿಖಾಧಿಕಾರಿಗಳನ್ನು ಬದಲಿಸಬೇಕು. ಸಂತ್ರಸ್ತ ಬಾಲಕಿಯರ ರಕ್ಷಣೆ ಮತ್ತು ಪೋಷಣೆಗೆ ಸರ್ಕಾರ ಪ್ರಾಮಾಣಿಕ ಕ್ರಮ ಕೈಗೊಳ್ಳಬೇಕು.