ಚಾಮರಾಜನಗರ: ಬಿಜೆಪಿ, ಆರ್ಎಸ್ಎಸ್ ಸಿದ್ಧಾಂತದ ವಿರುದ್ಧ ಈ ಯಾತ್ರೆ ಮಾಡಲಾಗುತ್ತಿದೆ. ಸಂವಿಧಾನ ರಕ್ಷಣೆ ಮಾಡಲು ಭಾರತ್ ಜೋಡೋ ಮಾಡುತ್ತಿದ್ದೇವೆ ಎಂದು ಗುಂಡ್ಲುಪೇಟೆಯ ಕಾಂಗ್ರೆಸ್ ಭಾರತ್ ಜೋಡೋ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಈ ಯಾತ್ರೆ ನಡೆಯುತ್ತೆ. ಬಿಸಿಲು, ಮಳೆ ಲೆಕ್ಕಿಸದೇ ಪಾದಯಾತ್ರೆಯನ್ನ ಮಾಡುತ್ತಿದ್ದೇವೆ. ಈ ಪಾದಯಾತ್ರೆಯಲ್ಲಿ ದ್ವೇಷ, ಹಿಂಸೆ ಎಲ್ಲೂ ಕಾಣುವುದಿಲ್ಲ. ಎಲ್ಲ ಧರ್ಮ, ಜಾತಿಯವರೂ ಭಾಗಿಯಾಗಿದ್ದಾರೆ ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆಯನ್ನು ಯಾರಿಂದಲೂ, ಯಾವ ಶಕ್ತಿಯಿಂದ ನಿಲ್ಲಿಸಲು ಆಗುವುದಿಲ್ಲ. ಭಾರತ್ ಜೋಡೋ ಉದ್ದೇಶ ಭಾಷಣ ಮಾಡುವುದಕ್ಕೆ ಅಲ್ಲ. ಬಿಜೆಪಿಯವರು ವಿಪಕ್ಷಗಳ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಜತೆ ಇಡೀ ದೇಶದ ಜನರು ಇದ್ದಾರೆ. ಕರ್ನಾಟಕದಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ ನಿರುದ್ಯೋಗ ಇದೆ ಎಂದು ರಾಹುಲ್ ಗಾಂಧಿ ರಾಜ್ಯ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಕಾಂಗ್ರೆಸ್ ಪಕ್ಷವು ದೇಶವ್ಯಾಪಿ ನಡೆಸಲು ಉದ್ದೇಶಿಸಿರುವ ಭಾರತ್ ಜೋಡೋ ಯಾತ್ರೆ ಶುಕ್ರವಾರ (ಸೆ 30) ಮುಂಜಾನೆ ಕರ್ನಾಟಕವನ್ನು ಪ್ರವೇಶಿಸಿತು. ಹುಲಿ ಸಂರಕ್ಷಿತ ಅರಣ್ಯದಲ್ಲಿ ಪಾದಯಾತ್ರೆಗೆ ಅರಣ್ಯ ಇಲಾಖೆ ಅನುಮತಿ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ತಮಿಳುನಾಡಿನ ಗುಡಲೂರಿನಿಂದ ಕರ್ನಾಟಕದ ಗುಂಡ್ಲುಪೇಟೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಹನದಲ್ಲಿ ಬಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಣ್ಯದಲ್ಲಿಯೇ ಕಾರು ನಿಲ್ಲಿಸಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು.
ಕಾಂಗ್ರೆಸ್ ನಾಯಕರಿಗೆ ಅರಣ್ಯ ಇಲಾಖೆಯು ಕಾರಿನಲ್ಲಿ ತೆರಳಲು ಅವಕಾಶ ನೀಡಿತ್ತು. ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಒಂದೇ ಕಾರಿನಲ್ಲಿ ಗುಂಡ್ಲುಪೇಟೆಗೆ ಬಂದರು. ರಾಹುಲ್ ಗಾಂಧಿ ಅವರನ್ನು ಕೆಕ್ಕೆನಹಳ್ಳಿಯ ಕರ್ನಾಟಕ ಗಡಿಯಲ್ಲೇ ಸಿದ್ದರಾಮಯ್ಯ ತಮ್ಮ ಬೆಂಬಲಿಗರೊಂದಿಗೆ ಸ್ವಾಗತಿಸಿದರು. ಈ ವೇಳೆ ಮಹದೇವಪ್ಪ, ಜಾರ್ಜ್, ಪ್ರಕಾಶ್ ರಾಥೋಡ್ ಉಪಸ್ಥಿತರಿದ್ದರು. ಮತ್ತೊಂದೆಡೆ ರಾಹುಲ್ ಗಾಂಧಿ ಸ್ವಾಗತಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವೇದಿಕೆಯ ಬಳಿಯೇ ಕಾಯುತ್ತಿದ್ದರು. ಗುಂಡ್ಲುಪೇಟೆಯಿಂದ ಕೆಕ್ಕೇನಹಳ್ಳಿ ಸುಮಾರು 25 ಕಿಮೀ ದೂರವಿದೆ.
ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆ ನಡೆಯಲಿದ್ದು, 22 ದಿನ ಸಂಚರಿಸಲಿದೆ ಭಾರತ್ ಜೋಡೋ ಐಕ್ಯತಾ ಯಾತ್ರೆ, ಇಂದು ಗುಂಡ್ಲುಪೇಟೆಯಿಂದ ಪ್ರವೇಶ ಮಾಡಿ, ಏಳು ಜಿಲ್ಲೆಯಲ್ಲಿ ಯಾತ್ರೆ ಸಂಚಾರ ಮಾಡಲಿದೆ. ಅವು ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳು. – ಒಟ್ಟು 511 ಕಿ.ಮೀ ರಾಹುಲ್ ಗಾಂಧಿ ಹಾಗೂ ಕೈ ನಾಯಕರು ಹೆಜ್ಜೆ ಹಾಕಲಿದ್ದು, ಇಂದು ಸ್ವಾಗತ ಸಮಾವೇಶದ ವೇದಿಕೆ ಮೇಲೆ 200ಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮೂರು ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ
ಭಾರತ್ ಜೋಡೋ ಯಾತ್ರೆಯಲ್ಲಿ ಶಿಸ್ತಿಗೆ ಮೊದಲ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮದ ರೂಪುರೇಷೆಯನ್ನು ಸಂಪೂರ್ಣ ಶಿಸ್ತುಬದ್ಧವಾಗಿ ರೂಪಿಸಲಾಗಿದೆ. ರಾಹುಲ್ ಗಾಂಧಿ ಸ್ವಾಗತ, ಪಾದಯಾತ್ರಿಗಳಿಗೆ ಊಟೋಪಚಾರ, ಸ್ವಚ್ಛತೆವಿಚಾರವಾಗಿಯೂ ಶಿಸ್ತಿಗೆ ಆದ್ಯತೆ ನೀಡಲಾಗಿದೆ. 22 ದಿನಗಳ ಕಾಲ ಕಾರ್ಯಕ್ರಮದ ವೇಳಾಪಟ್ಟಿಯಲ್ಲೂ ಶಿಸ್ತು ಎದ್ದು ಕಾಣುತ್ತಿದೆ. ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೆಪಿಸಿಸಿ ತಯಾರಿ ನಡೆಸಿದೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.