ಹಾವೇರಿ: ರಾಜ್ಯ ಸರ್ಕಾರ 2022-23ನೇ ಸಾಲಿನಲ್ಲಿ ರಾಜ್ಯಾದ್ಯಂತ 46 ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ಸ್ವಾಗತ ಮಾಡಿ ವಿದ್ಯಾರ್ಥಿ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸುತ್ತದೆ.
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ, ರಾಜ್ಯದ ಆರಂಭಿಸಲು ಉದ್ದೇಶಿಸಿರುವ ನೂತನ ಪದವಿ ಪೂರ್ವ ಕಾಲೇಜುಗಳ ಪೈಕಿ ಹಾವೇರಿ ಜಿಲ್ಲೆಗೆ 12 ಕಾಲೇಜು ಮಂಜೂರು ಮಾಡಲಾಗಿದೆ. ಅದರಲ್ಲೂ ಹಾವೇರಿ ತಾಲ್ಲೂಕಿಗೆ 3 ಶಿಗ್ಗಾಂವಿ ತಾಲ್ಲೂಕಿಗೆ 5 ಸವಣೂರು ತಾಲ್ಲೂಕಿಗೆ 4 ಮಂಜೂರು ಮಾಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮದೇ ಜಿಲ್ಲೆಯ ಅತೀ ದೊಡ್ಡ ತಾಲ್ಲೂಕಾದ ರಾಣೇಬೆನ್ನೂರ, ಹಾನಗಲ್, ಬ್ಯಾಡಗಿ, ಹಿರೇಕೆರೂರು ನೂತನ ತಾಲ್ಲೂಕಾದ ರಟ್ಟಿಹಳ್ಳಿ ಕಣ್ಣಿಗೆ ಕಾಣಲಿಲ್ಲವೇ? ಈ ರೀತಿಯ ಮಲತಾಯಿ ಧೋರಣೆಯನ್ನು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕೂಡಲೇ ಕೈ ಬಿಟ್ಟು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿರುವ ಹೋಬಳಿಗೊಂದು ಮೂಲಭೂತ ಸೌಕರ್ಯಗಳ ಜೊತೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಬೇಕೆಂದು ಎಸ್ಎಫ್ಐ ಒತ್ತಾಯಿಸಿದ್ದಾರೆ.
ಬಡವರು, ರೈತ, ಕಾರ್ಮಿಕ ಕುಟುಂಬಗಳಿಗೆ ಅವರ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಆರ್ಥಿಕ ಹೊರೆ ತಗ್ಗಿಸುವ ನಿರ್ಧಾರವನ್ನು ಸ್ವಾಗತಿಸುತ್ತಾ, ನೂತನ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸುವ ಮುಂಚೆ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಕಾಲೇಜುಗಳಿಗೆ ಸಮರ್ಪಕ ಮೂಲ ಸೌಲಭ್ಯಗಳನ್ನು ಒದಗಿಸಿ, ಅಧ್ಯಯನಕ್ಕೆ ಪೂರಕವಾದ ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಶುದ್ಧ ಕುಡಿಯುವ ನೀರು, ಶೌಚಾಲಯ ಒದಗಿಸಬೇಕು, ಶಿಕ್ಷಕರು ಹಾಗೂ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಬೇಕು ಎಸ್ಎಫ್ಐ ಮುಖಂಡರಾದ ಅರುಣ್ ಕಡಕೋಳ, ಗುಡ್ಡಪ್ಪ ಮಡಿವಾಳರ, ರವಿ ಬಂಕಾಪುರ ತಿಳಿಸಿದರು.