ಭಾರತ ಹಿಂದೂ ರಾಷ್ಟ್ರವಾಗಬೇಕೆ ಅಥವಾ ಇಸ್ಲಾಮಿಕ್ ರಾಷ್ಟ್ರವಾಗಬೇಕೆ ?

ಟಿ.ಸುರೇಂದ್ರ ರಾವ್

ಈ ಕುರಿತು ಸಂವಿಧಾನ ರಚನಾ ಸಭೆ (ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿ) ಯಲ್ಲಿ ವ್ಯಾಪಕ ಹಾಗೂ ಆಸಕ್ತಿದಾಯಕ ವಿಚಾರ ವಿನಿಮಯಗಳು ನಡೆದಿವೆ. ಭಾರತೀಯ ಸಮಾಜದ ಬಹುಸಂಸ್ಕೃತಿ, ಬಹುಧರ್ಮೀಯ, ಬಹುಭಾಷೀಯ, ಬಹುಜಾತೀಯ ಅಂಶಗಳನ್ನು ಪರಿಗಣಿಸಿದ ಸಭೆಯು ಭಾರತವು ಜಾತ್ಯತೀತ ಪ್ರಜಾಸತ್ತಾತ್ಮಕ, ಸಾಮಾಜಿಕ ನ್ಯಾಯ, ಸಾರ್ವಭೌಮ ಗಣತಂತ್ರವಾಗಬೇಕು ಎಂದು ನಿರ್ಣಯ ಮಾಡಿರುವುದನ್ನು ನಾವೆಲ್ಲರೂ ತಿಳಿದುಕೊಂಡಿದ್ದೇವೆ. ಅದಕ್ಕೆ ಪೂರಕವಾಗಿ ನಮ್ಮ ಸಂವಿಧಾನವನ್ನು ರಚಿಸಲಾಗಿದೆ. ಸಂವಿಧಾನದ ಅಡಿಯಲ್ಲಿ ಆ ಅಂಶಗಳನ್ನು ಒಳಗೊಂಡ ಕಾನೂನುಗಳನ್ನು ಅಂಗೀಕರಿಸಲಾಗಿದೆ. ಸಂವಿಧಾನದ ಮೂಲ ಆಶಯಗಳಿಗೆ (basic character of Indian constitution) ಧಕ್ಕೆ ಬಾರದಂತೆ ಆಡಳಿತ ನಡೆಸಬೇಕೆಂಬ ಸರ್ವಸಮ್ಮತ ತೀರ್ಮಾನದ ಆಧಾರದಲ್ಲಿ ಕಳೆದ 75 ವರ್ಷಗಳ ಕಾಲ ಸರ್ಕಾರಗಳು ಅಧಿಕಾರ ನಡೆಸಿವೆ. ಸಮಾಜ ಬದಲಾವಣೆಗೆ ಅನುಗುಣವಾಗಿ ಹಲವಾರು ತಿದ್ದುಪಡಿಗಳನ್ನು, ಮೂಲ ಆಶಯಕ್ಕೆ ಕುಂದು ಉಂಟಾಗದಂತೆ ತರಲಾಗಿದೆ.

ಆದರೆ ದೇಶದಲ್ಲಿ ಇತ್ತೀಚೆಗೆ ಕೋಮುವಾದಿ ಮತಾಂಧ ಶಕ್ತಿಗಳು ತಲೆ ಎತ್ತಿವೆ. ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿ ಹಿಂದೂ ರಾಷ್ಟ್ರ ಮತ್ತು ಇಸ್ಲಾಮಿಕ್ ರಾಷ್ಟ್ರ ರಚನೆಯ ಮಾತುಗಳನ್ನು ಬಹಿರಂಗವಾಗಿ ಆಡುತ್ತಿವೆ. ಅಷ್ಟೇ ಅಲ್ಲ ಆ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಿವೆ ಕೂಡ. ಈ ದೇಶವಿರೋಧಿ, ಸಂವಿಧಾನ ವಿರೋಧಿ ಶಕ್ತಿಗಳಿಗೆ ಕುಮ್ಮಕ್ಕು ನೀಡುವ ಸಂಘಟನೆಗಳು ಹಾಗೂ ಪಕ್ಷಗಳ ನಡುವಿನ ತಿಕ್ಕಾಟಗಳು ಕೋಮು ಗಲಭೆಗಳನ್ನು ಹುಟ್ಟುಹಾಕಿ ಕೋಮುಧೃವೀಕರಣಕ್ಕೆ ಕಾರಣವಾಗುತ್ತಿವೆ.

ಈ ಹಿನ್ನೆಲೆಯಲ್ಲಿ ನಮ್ಮ ಸಂವಿಧಾನದ ಮೂಲ ಆಶಯಗಳನ್ನು ರಕ್ಷಿಸುವ ಪ್ರಧಾನ ಜವಾಬ್ದಾರಿ ಹೊತ್ತಿರುವ ನಮ್ಮ ದೇಶದ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಬೇಕಾದ ತುರ್ತು ಹಾಗೂ ಅನಿವಾರ್ಯತೆ ಉದ್ಭವಿಸಿದೆ. ಭಾರತದ ಸಂವಿಧಾನವನ್ನು ಗೌರವಿಸುವ ಎಲ್ಲಾ ಶಕ್ತಿಗಳೂ ಒಂದಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಕಳಕಳಿಯ ಮನವಿ ಮಾಡುವ ಮೂಲಕ ಭಾರತದ ಜಾತ್ಯತೀತ ಗುಣವನ್ನು ಕಾಪಾಡಲು ಒತ್ತಾಯಿಸುತ್ತಾರೆಂದು ಹಾರೈಸಬಹುದೆ ?

Donate Janashakthi Media

Leave a Reply

Your email address will not be published. Required fields are marked *