ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಯೊಬ್ಬರು, ನೌಕರರ ಸಂಘದ ಅಸ್ತಿತ್ವದಲ್ಲಿಲ್ಲದ ಅಧಿಕಾರಿಯೊಬ್ಬರಿಗೆ ಸಂಬಂಧಿಸಿದ ಅಧಿಕೃತ ಪತ್ರವನ್ನು ದುರ್ಬಳಕೆ ಮಾಡಿಕೊಂಡು, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ಆಯುಕ್ತರಿಗೆ ಅಕ್ರಮ ಪತ್ರ ವ್ಯವಹಾರ ನಡೆಸಿದ ಆರೋಪ ಕೇಳಿ ಬಂದಿದೆ.
ಬಿಬಿಎಂಪಿ ಅಧಿಕಾರಿ ಅಮೃತ್ ರಾಜ್ ಎಂಬುವರಿಗೆ ಸೇರಿದ ಪತ್ರವನ್ನು ಬಳಸಿಕೊಂಡು ಎಂ ಮಾಯಣ್ಣ ಅವ್ಯವಹಾರ ನಡೆಸಿದ್ದಾರೆ ಎಂಬುದಾಗಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಾಯಣ್ಣ ವಿರುದ್ಧ ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಕೆ.ನರಸಿಂಹ ದೂರು ದಾಖಲಿಸಿದ್ದಾರೆ.
ಆರೋಪಿ ಎಂ ಮಾಯಣ್ಣ ವಿರುದ್ಧ ಈ ಹಿಂದೆ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿದ್ದರು.
ದೂರಿನ ಕುರಿತು ಪ್ರತಿಕ್ರಿಯಿಸಿದ ಮಾಯಣ್ಣ, ದೂರು ನೀಡಿರುವ ಕೆ ನರಸಿಂಹ ಎಂಬುವವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಂಘದಿಂದ ಪದಚ್ಯುತಿಗೊಂಡಿರುವ ಅಮೃತ್ ರಾಜ್ ಎಂಬಾತನ ಸೂಚನೆ ಮೇರೆಗೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.