ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕವಯಿತ್ರಿ ಡಾ.ಎಚ್.ಎಲ್. ಪುಷ್ಪಾ ಜಯಗಳಿಸಿದ್ದು, ಮೂರು ವರ್ಷಗಳ ಅವಧಿಗೆ ಚುನಾಯಿತರಾಗಿದ್ದಾರೆ. ಹುಟ್ಟುಹಬ್ಬದ ದಿನದಂದೆ ಅವರು ಚುನಾವಣೆಯಲ್ಲಿ ಗೆದ್ದಿರುವುದು ಮತ್ತೊಂದು ವಿಶೇಷವಾಗಿದೆ.
ಭಾರಿ ಕುತೂಹಲ ಮೂಡಿಸಿದ್ದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಹಾಗೂ ಡಾ.ಎಚ್.ಎಲ್. ಪುಷ್ಪಾ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಎಚ್.ಎಲ್. ಪುಷ್ಪಾ 62 ಮತಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಚ್.ಎಲ್. ಪುಷ್ಪಾಗೆ 342 ಮತಗಳು, ವನಮಾಲಾ ಸಂಪನ್ನಕುಮಾರ್ಗೆ 280 ಮತಗಳು ಹಾಗೂ ಶೈಲಜಾ ಸುರೇಶ್ 33 ಮತಗಳನ್ನು ಪಡೆದಿದ್ದಾರೆ.
ಬೆಂಗಳೂರಿನ ಎನ್.ಆರ್.ಕಾಲನಿಯಲ್ಲಿರುವ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಭಾನುವಾರ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಿತು. ಸಂಘದಲ್ಲಿ 1,330 ಸದಸ್ಯರಿದ್ದು, ಈ ಪೈಕಿ 1,295 ಮಂದಿ ಮತದಾನದ ಅರ್ಹತೆ ಹೊಂದಿದ್ದರು. ಬೆಂಗಳೂರಿನಲ್ಲಿ 650 ಮತದಾರರಿದ್ದರೂ, ಕೇವಲ 280 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಸದಸ್ಯರು ಅಂಚೆ ಮೂಲಕ ಮತ ಚಲಾಯಿಸಿದ್ದಾರೆ. ರಾಜ್ಯದ ಎಲ್ಲೆಡೆಯಿಂದ 699 (ಶೇ.45) ಮತಗಳು ಚಲಾವಣೆಯಾಗಿದ್ದವು. ಇವುಗಳಲ್ಲಿ 44 ಮತಗಳು ತಿರಸ್ಕೃತಗೊಂಡಿವೆ.
ಸಂಘದಲ್ಲಿ ಲೇಖಕಿ ಟಿ. ಸುನಂದಮ್ಮ, ಎಚ್.ಎಸ್. ಪಾರ್ವತಿ, ಹೇಮಲತಾ ಮಹಿಷಿ, ನಾಗಮಣಿ ಎಸ್. ರಾವ್, ಶಶಿಕಲಾ ವೀರಯ್ಯ ಸ್ವಾಮಿ, ಉಷಾ ಪಿ. ರೈ, ಕೆ.ಆರ್. ಸಂಧ್ಯಾ ರೆಡ್ಡಿ, ಡಾ. ವಸುಂಧರಾ ಭೂಪತಿ ಹಾಗೂ ವನಮಾಲ ಸಂಪನ್ನಕುಮಾರ್ ಈವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಡಾ.ಎಚ್.ಎಲ್. ಪುಷ್ಪಾ ಅವರು 10ನೇ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.