ಬಿಹಾರದಲ್ಲಿನ ಬೆಳವಣಿಗೆಗಳು, ಸರ್ಕಾರದ ಬದಲಾವಣೆ ಮತ್ತು ಮಹಾಘಟಬಂಧನ್ ಸರ್ಕಾರ ಅಧಿಕಾರ ವಹಿಸಿಕೊಳ್ಳುವದರೊಂದಿಗೆ, ಪ್ರತಿಪಕ್ಷಗಳ ನಡುವೆ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಪಕ್ಷಗಳನ್ನು ಹೆಚ್ಚು ವಿಶಾಲವಾಗಿ ಜತೆಗೂಡಿಸುವ ಚಟುವಟಿಕೆಗಳು ಆರಂಭವಾಗಿವೆ. ಭಾರತದ ಸಂವಿಧಾನ, ಪ್ರಜಾಪ್ರಭುತ್ವ, ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ದೇಶದ ಆರ್ಥಿಕ ಸಾರ್ವಭೌಮತೆಗೆ ಬಂದಿರುವ ಸವಾಲುಗಳನ್ನು ಎತ್ತಿಕೊಳ್ಳುವ ಪ್ರಕ್ರಿಯೆಗೆ ಹೊಸ ಆವೇಗ ಸಿಕ್ಕಿದೆ. ಹಿಂದುತ್ವ ಕೋಮುವಾದದ ಅಜೆಂಡಾವನ್ನು ಹಿಮ್ಮೆಟ್ಟಿಸುವಲ್ಲಿ. ಈ ಪ್ರಯತ್ನಗಳಲ್ಲಿ ಕೈಜೋಡಿಸಲು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)- ಸಿಪಿಐ(ಎಂ) ಪೊಲಿಟ್ಬ್ಯುರೊ ನಿರ್ಧರಿಸಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹೇಳಿದ್ದಾರೆ.
ಅವರು ನವದೆಹಲಿಯಲ್ಲಿ ಸಪ್ಟಂಬರ್ 16ರಂದು ಎರಡು ದಿನಗಳ ಪೊಲಿಟ್ಬ್ಯುರೊ ಸಭೆಯ ನಂತರ ಸಭೆಯ ನಿರ್ಧಾರಗಳನ್ನು ಕುರಿತಂತೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಈ ಪ್ರಕ್ರಿಯೆ ಮುಂದುವರೆಯುತ್ತದೆ, ಮತ್ತು ವಿವಿಧ ರಾಜ್ಯಗಳಲ್ಲಿ ಇದುವರೆಗೆ ನಡೆದಂತೆ ಆಯಾಯ ರಾಜ್ಯಗಳ ಪ್ರಭಾವೀ ಶಕ್ತಿಗಳ ನೇತೃತ್ವದಲ್ಲಿ ಸ್ಪಷ್ಟ ರೂಪ ಪಡೆಯುತ್ತದೆ ಎಂದು ಮುಂದುವರೆದು ಹೇಳಿದ ಅವರು. ಅಖಿಲ ಭಾರತ ಮಟ್ಟದಲ್ಲಿ ಚುನಾವಣಾ-ಪೂರ್ವ ಮೈತ್ರಿ ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಪಕ್ಷದ ನಿಲವನ್ನು ಪುನರುಚ್ಚರಿಸಿದರು, ಕೇಂದ್ರದಲ್ಲಿ ಸರಕಾರದ ಬದಲಾವಣೆಯಾದಾಗಲೆಲ್ಲ ಅದು ಚುನಾವಣಾ-ನಂತರದ ಮೈತ್ರಿಗಳಿಂದಲೇ ಆಗಿರುವುದು ಎಂಬುದನ್ನು ನೆನಪಿಸಿದರು.
ಕಾಂಗ್ರೆಸಿನ ‘ಭಾರತ್ ಜೋಡೋ’ ಅಭಿಯಾನಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ “ ಜನರ ಬಳಿಗೆ ಹೋಗುತ್ತಿರುವುದು ಒಳ್ಳೆಯದು. ಸಿಪಿಐ(ಎಂ) ಸಪ್ಟಂಬರ್ ಪ್ರಚಾರಾಂದೋಳನದ ಮೂಲಕ ಇದನ್ನು ಮಾಡುತ್ತಿದೆ. ಆಪ್ ಪಕ್ಷವೂ ತನ್ನದೇ ರೀತಿಯಲ್ಲಿ ಮಾಡುತ್ತಿದೆ. ಯಾರು ಎಲ್ಲಿ ಎಷ್ಟು ದಿನ ಕಳೆಯುತ್ತಾರೆ ಎಂಬುದನ್ನು ನಿರ್ಧರಿಸುವುದು ಅವರಿಗೇ ಬಿಟ್ಟದ್ದು, ಆದರೆ ಜನರಂತೂ ಎಲ್ಲವನ್ನೂ ಗಮನಿಸುತ್ತಿದ್ದಾರೆ” ಎಂದ ಯೆಚುರಿ ಕಾಂಗ್ರೆಸ್ ಮುಖಂಡರೊಬ್ಬರ ಟಿಪ್ಪಣಿಯ ಬಗ್ಗೆ ಕೇಳಿದಾಗ “ಬಿಜೆಪಿಯ ಶಾಸಕರು ಸೊನ್ನೆ ಇರುವ ಏಕೈಕ ರಾಜ್ಯ ಕೇರಳ. ಇದನ್ನು ಮಾಡಿದವರು ಯಾರು? ಕೇರಳದಲ್ಲಿ ಬಿಜೆಪಿಯ ವಿಸ್ತರಣೆಯನ್ನು ತಡೆದದ್ದು ಎಲ್ಡಿಎಫ್ ,. ಇನ್ನು ಎ ಅಥವ ಬಿ ಟೀಮ್ ಎನ್ನುವವರು ಇಂತಹ ಆರೋಪ ಮಾಡುವ ಮೊದಲು ಗೋವಾದ ಕಡೆಗೆ ನೋಡಲಿ” ಎಂದು ಹೇಳಿದರು.
ದೇಶ ಆರ್ಥಿಕ ಇಳಿಜಾರಿನಲ್ಲಿ
ಆರ್ಥಿಕ ರಂಗದಲ್ಲಿ, ಭಾರತ ಈಗ ಸ್ಥಗಿತತೆ-ಹಣದುಬ್ಬರದ ಸ್ಥಿತಿಯಿಂದ ಆರ್ಥಿಕ ಹಿಂಜರಿತದತ್ತ ಜಾರುತ್ತಿದೆ, ಇದು ನಿರುದ್ಯೋಗವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ, ದುಡಿಯುವ ಜನಗಳ ಬದುಕನ್ನು ಇನ್ನಷ್ಟು ದುರ್ಭರಗೊಳಿಸುತ್ತದೆ, ಆದ್ದರಿಂದ ಇದರ ವಿರುದ್ಧ ಸಿಪಿಐ(ಎಂ) ಈಗಾಗಲೇ ಪ್ರಚಾರಾಂದೋಲವನ್ನು ಆರಂಭಿಸಿದೆ, ಕಾರ್ಮಿಕರು, ರೈತರು , ಕೃಷಿಕೂಲಿಕಾರರೂ ಹೋರಾಟದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದಾರೆ ಎಂದು ಯೆಚುರಿ ಹೇಳಿದರು.
ಮೋದಿ ಸರ್ಕಾರದ ಪ್ರಚಾರದ ಅಬ್ಬರದ ಹೊರತಾಗಿಯೂ, ಭಾರತದ ಆರ್ಥಿಕತೆಯು ಇಳಿಜಾರಿನಲ್ಲಿದೆ. ಅಂತರಾಷ್ಟ್ರೀಯ ರೇಟಿಂಗ್ ಸಂಸ್ಥೆ ಫಿಚ್ ಹಣಕಾಸು ವರ್ಷ 23ರಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು 7.8 ರಿಂದ 7 ಶೇಕಡಾಕ್ಕೆ ಕಡಿತಗೊಳಿಸಿದೆ. 2020, 2021 ಮತ್ತು 2022 ರಲ್ಲಿ ಭಾರತದ ವಾರ್ಷಿಕ ಬೆಳವಣಿಗೆಯು ನಿಜ ಲೆಕ್ಕಾಚಾರದಲ್ಲಿ ಕೇವಲ 0.8 ಪ್ರತಿಶತ ಎಂದು ವಿಶ್ವಬ್ಯಾಂಕ್ ನೀಡಿರುವ ದತ್ತಾಂಶ ತೋರಿಸುತ್ತದೆ.
ಏರುತ್ತಿರುವ ಆಹಾರದ ಬೆಲೆಗಳ ಕಾರಣದಿಂದ ಹಣದುಬ್ಬರದ ನಾಗಾಲೋಟ ಸತತ 8 ನೇ ತಿಂಗಳಲ್ಲಿ ರಿಝರ್ವ್ ಬ್ಯಾಂಕ್ ಸೂಚಿಸಿರುವ ಮೇಲ್ಮಿತಿಯಾದ 6 ಶೇಕಡಾವನ್ನು ಮೀರಿದೆ. ಆಗಸ್ಟ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆಯಾಗಿದೆ. ಆಹಾರ ಬೆಲೆ ಏರಿಕೆ ಶೇ.7.62 ದಾಟಿದೆ. ಗ್ರಾಮೀಣ ಭಾರತದಲ್ಲಿ ಹಣದುಬ್ಬರವು ಶೇಕಡಾ 7.15 ತಲುಪುವುದರೊಂದಿಗೆ ಪರಿಸ್ಥಿತಿಯು ಇನ್ನೂ ಕೆಟ್ಟದಾಗಿದೆ.
ಅದೇ ಸಮಯದಲ್ಲಿ, ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯು ಜೂನ್ನಲ್ಲಿ ಶೇ.12.7 ರಿಂದ ಜುಲೈನಲ್ಲಿ ಶೇ. 2.4 ಕ್ಕೆ ಇಳಿದಿದೆ. ಗ್ರಾಹಕ ಬಹುಬಾಳಿಕೆ ವಸ್ತುಗಳ ಉತ್ಪಾದನೆಯು ಜೂನ್ಗಿಂತ ಶೇ. 3ರಷ್ಟು ಕಡಿಮೆಯಾಗಿದೆ.
ಇದರ ಪರಿಣಾಮವಾಗಿ ನಿರುದ್ಯೋಗದ ಬೆಳವಣಿಗೆಯು ದೇಶದಲ್ಲಿ ಶೋಚನೀಯ ಉದ್ಯೋಗ ಪರಿಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈಗಾಗಲೇ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) 2021 ರಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಆತ್ಮಹತ್ಯೆಗಳು ದಿನಗೂಲಿ ಕಾರ್ಮಿಕರದ್ದು ಎಂದು ತೋರಿಸಿದೆ ಎಂದು ಈ ಸಭೆಯ ನಂತರ ಪ್ರಕಟವಾಗಿರುವ ಪೊಲಿಟ್ ಬ್ಯುರೊ ಹೇಳಿಕೆ ವಿಶ್ಲೇಷಿಸಿದೆ.
ಸೆಪ್ಟೆಂಬರ್ ಪ್ರಚಾರಾಂದೋಲನ
ಈ ಹಿನ್ನೆಲೆಯಲ್ಲಿ ಜನರ ಜೀವನೋಪಾಯದ ಮೇಲೆ ಹೇರಲಾಗುತ್ತಿರುವ ಹೊರೆಗಳ ವಿರುದ್ಧ ಮತ್ತು ಪ್ರಜಾಪ್ರಭುತ್ವ, ಪ್ರಜಾಸತ್ತಾತ್ಮಕ ಹಕ್ಕುಗಳು, ಜಾತ್ಯತೀತತೆ ಮತ್ತು ಭಾರತೀಯ ಸಂವಿಧಾನವನ್ನು ಕಾಪಾಡಿಕೊಳ್ಳಲು ಸೆಪ್ಟೆಂಬರ್ 14-24 ರವರೆಗೆ ಅಖಿಲ ಭಾರತ ಪ್ರಚಾರಾಂದೋಲನಕ್ಕೆ ಕೇಂದ್ರ ಸಮಿತಿ ಕರೆ ನೀಡಿದೆ. ಅದು ರಾಜ್ಯ ಮಟ್ಟದ ಸಾರ್ವಜನಿಕ ಸಭೆಗಳು ಮತ್ತು ರ್ಯಾಲಿಗಳೊಂದಿಗೆ ಪೂರ್ಣಗೊಳ್ಳುತ್ತದೆ ಎಂದು ಯೆಚುರಿ ಹೇಳಿದರು.
ನಿಜಾಮ ವರ್ಸಸ್ ಹರಿ ಸಿಂಗ್
ಈ ವರ್ಷ ಸಪ್ಟಂಬರ್ 17ರಂದು ಹೈದರಾಬಾದಿನಲ್ಲಿ ನಿಜಾಮನ ಆಳ್ವಿಕೆಯಿಂದ ವಿಮೋಚನೆಯ ದಿನಾಚರಣೆ ನಡೆಸುವುದಾಗಿ ಬಿಜೆಪಿ ಹೇಳಿದೆ. ವಿಚಿತ್ರವೆಂದರೆ ಅದೇ ವೇಳೆಗೆ ನಿಜಾಮನಂತೆಯೇ ಭಾರತವನ್ನು ಸೇರಲು ನಿರಾಕರಿಸಿದ ಜಮ್ಮು ಮತ್ತು ಕಾಶ್ಮೀರದ ದೊರೆ ರಾಜಾ ಹರಿಸಿಂಗ್ನ ಜನ್ಮದಿನವನ್ನು ಸಾರ್ವಜನಿಕ ರಜಾ ದಿನವಾಗಿ ಮಾಡುವುದಾಗಿಯೂ ಘೋಷಿಸಲಾಗಿದೆ. ಕೋಮುವಾದಿ ಧ್ರುವೀಕರಣದ ಮತ್ತು ಚರಿತ್ರೆಯ ಪುನರ್ಲೇಖನದ ಇದಕ್ಕಿಂತ ಹೆಚ್ಚು ಲಜ್ಜೆಗೆಟ್ಟ ವರ್ತನೆ ಬೇರೊಂದಿಲ್ಲ ಎಂದು ಸೀತಾರಾಂ ಯೆಚುರಿ ಹೇಳಿದರು.
ಇದು ಮುಸ್ಲಿಂ ಆಡಳಿತದಿಂದ ‘ವಿಮೋಚನೆ’ ಎಂದು ಪ್ರತಿಪಾದಿಸುವ ಮೂಲಕ ಕೋಮು ಭಾವೋದ್ರೇಕಗಳನ್ನು ಬಡಿದೆಬ್ಬಿಸುವ ಮತ್ತು ಈ ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕವಾಗಿ ಇತಿಹಾಸವನ್ನು ತಿರುಚುವುದು ಮತ್ತು ಪುನಃ ಬರೆಯುವ ಗುರಿಯನ್ನು ಬಿಜೆಪಿ ಹೊಂದಿದೆ ಎಂಬುದು ಸ್ಪಷ್ಟ.
ನಿಜಾಮರ ಆಳ್ವಿಕೆಯು, 1946 ರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಅದರ ಕ್ರೂರ ದಬ್ಬಾಳಿಕೆಯ ಭೂಮಾಲಿಕತ್ವದ ವಿರುದ್ಧ ಪ್ರಾರಂಭಿಸಿದ ಸಶಸ್ತ್ರ ಹೋರಾಟದ ನಂತರ ಉಳಿಯಲಾರದ ಸ್ಥಿತಿಗೆ ಬಂದಿತ್ತು. ಸೆಪ್ಟೆಂಬರ್ 13, 1948 ರಂದು ಪ್ರಾರಂಭವಾದ ಪೊಲೀಸ್ ಕಾರ್ಯಾಚರಣೆ ಅದು ಸೆಪ್ಟೆಂಬರ್ 17, 1948 ರಂದು ಶರಣಾಗುವಂತೆ ಮಾಡಿದ ಕೊನೆಯ ಹುಲ್ಲುಗರಿಕೆಯಾಗಿ ಪರಿಣಮಿಸಿತು.
ಆರ್ಎಸ್ಎಸ್ ಈ ತಥಾಕಥಿತ ‘ವಿಮೋಚನೆ’ ತನ್ನ ಸಾಧನೆ ಎಂದು ಹೇಳಿಕೊಳ್ಳುವುದು ಹಾಸ್ಯಾಸ್ಪದವಾಗಿದೆ. ಮಹಾತ್ಮಾ ಗಾಂಧಿಯವರ ಹತ್ಯೆಯ ನಂತರ, ಸರ್ದಾರ್ ಪಟೇಲ್ ಆರ್ಎಸ್ಎಸ್ ನ್ನು ನಿಷೇಧಿಸಿದರು. ನಿಷೇಧವು ಫೆಬ್ರವರಿ 4, 1948 ರಿಂದ ಜುಲೈ 11, 1949 ರವರೆಗೆ ಇತ್ತು. ನಿಜಾಮ ಶರಣಾಗತನಾಗುವಂತೆ ಬಲವಂಪಡಿಸುವುದರಲ್ಲಿ ಯಾವುದೇ ಪಾತ್ರವಿದೆ ಎಂಬ ಬಿಜೆಪಿಯ ದಾವೆ ಹಾಸ್ಯಾಸ್ಪದವಾಗಿದೆ.
ಈ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ 1946-51ರ ಅವಧಿಯಲ್ಲಿ ನಡೆದ ಸಶಸ್ತ್ರ ರೈತ ಹೋರಾಟದ ನಿಜವಾದ ಭವ್ಯ ಇತಿಹಾಸವನ್ನು ಈ ವರ್ಷ ದೇಶಾದ್ಯಂತ ನೆನಪಿಸಿಕೊಳ್ಳಲು ಸಿಪಿಐ(ಎಂ) ನಿರ್ಧರಿಸಿದೆ ಎಂದು ಅವರು ಹೇಳಿದರು. ಸಿಪಿಐ(ಎಂ) ಈ ಹೋರಾಟದ ಅಸಂಖ್ಯಾತ ಹುತಾತ್ಮರನ್ನು ಮತ್ತು ಲಕ್ಷಾಂತರ ರೈತರನ್ನು ಊಳಿಗಮಾನ್ಯ ದಾಸ್ಯದಿಂದ ವಿಮೋಚನೆಗೊಳಿಸಿರುವುದನ್ನು ಸ್ವರಿಸುತ್ತ ಆಚರಿಸುತ್ತದೆ. ಎರಡನೆಯ ಮಹಾಯುದ್ಧದ ನಂತರದ ಭಾರತದ ವಿವಿಧ ಭಾಗಗಳಲ್ಲಿ ಸಂಭವಿಸಿದ ರೈತ ಉತ್ಕ್ರಾಂತಿಯ ಜೊತೆಗೆ, ಈ ಐತಿಹಾಸಿಕ ಸಶಸ್ತ್ರ ಹೋರಾಟವು ಸ್ವತಂತ್ರ ಭಾರತದಲ್ಲಿ ಭೂಸುಧಾರಣೆಯ ಪ್ರಶ್ನೆಯನ್ನು ಕೇಂದ್ರ ಕಾರ್ಯಸೂಚಿಗೆ ತಂದಿತು ಎಂದು ಯೆಚುರಿ ನೆನಪಿಸಿದರು.
ಮಹಿಳೆಯರ ಮೇಲಿನ ದೌರ್ಜನ್ಯ
2021 ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳ ಪ್ರಮಾಣ ಶೇಕಡಾ 15 ಕ್ಕಿಂತಲೂ ಹೆಚ್ಚಿನ ದೊಡ್ಡ ಏರಿಕೆಯನ್ನು ಕಂಡಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋದ ಈ ಸಭೆ ಕಳವಳದಿಂದ ಗಮನಿಸಿದೆ, ಆದರೆ ಶಿಕ್ಷೆಗೊಳಗಾದವರ ಪ್ರಮಾಣ ಕೆಳಮಟ್ಟದಲ್ಲೇ ಇದೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಇಬ್ಬರು ದಲಿತ ಅಪ್ರಾಪ್ತ ವಯಸ್ಸಿನವರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಭೀಕರ ಪ್ರಕರಣವು ಆ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಕುಸಿದಿರುವುದರ ಪ್ರತಿಬಿಂಬವಾಗಿದೆ ಎಂದು ಅದು ಹೇಳಿದೆ.