ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಆರು ತಿಂಗಳು ಜೈಲು ಶಿಕ್ಷೆ: ಅಹಮದಾಬಾದ್‌ ನ್ಯಾಯಾಲಯ

ಅಹಮದಾಬಾದ್: ಗುಜರಾತ್ ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ಕಟ್ಟಡಕ್ಕೆ ಡಾ ಬಿ ಆರ್ ಅಂಬೇಡ್ಕರ್ ಹೆಸರಿಡಬೇಕು ಎಂದು ಒತ್ತಾಯಿಸಿ ರಸ್ತೆ ತಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಇತರ 18 ಮಂದಿಗೆ ಅಹಮದಾಬಾದ್‌ನ ನ್ಯಾಯಾಲಯ ಆರು ತಿಂಗಳ ಸಾಮಾನ್ಯ ಜೈಲು ಶಿಕ್ಷೆಯನ್ನು ವಿಧಿಸಿದೆ.

2016ರಲ್ಲಿ  ಘಟಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಂದು ತೀರ್ಪು ಪ್ರಕಟಿಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಿ ಎನ್ ಗೋಸ್ವಾಮಿ ಅವರು ದಂಡ ವಿಧಿಸಿ, ಮೇಲ್ಮನವಿ ಸಲ್ಲಿಸಲು ಅನುವು ಮಾಡಿಕೊಡಲು ಅವರ ಶಿಕ್ಷೆಯನ್ನು ಅಕ್ಟೋಬರ್ 17 ರವರೆಗೆ ಅಮಾನತಿನಲ್ಲಿಟ್ಟಿದ್ದಾರೆ.

2016ರಲ್ಲಿ ಗುಜರಾತ್ ವಿಶ್ವವಿದ್ಯಾಲಯ ಸಮೀಪ ನಡೆಸಿದ ಪ್ರತಿಭಟನೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿತ್ತು. ಅದರಲ್ಲಿ ಮೇವಾನಿ ಮತ್ತು ಇತರೆ 18 ಮಂದಿ ತಪ್ಪಿತಸ್ಥರು ಎಂದು ನ್ಯಾಯಾಲಯ ನಿರ್ಣಯಿಸಿದೆ ಮತ್ತು ತಲಾ ಆರು ತಿಂಗಳು ಜೈಲು ಶಿಕ್ಷೆಯೊಂದಿಗೆ 700 ರೂ ದಂಡ ವಿಧಿಸಿದೆ.

ಸೆಕ್ಷನ್ 143 (ಕಾನೂನುಬಾಹಿರ ಸಭೆ) ಮತ್ತು 147 (ಗಲಭೆ) ಹಾಗೂ ಗುಜರಾತ್ ಪೊಲೀಸ್ ಕಾಯಿದೆಯ ಸೆಕ್ಷನ್‌ಗಳ ಅಡಿಯಲ್ಲಿ 19 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆಯ ಅವಧಿಯಲ್ಲಿ ಒಬ್ಬ ಆರೋಪಿ ಸಾವನ್ನಪ್ಪಿದ್ದರು.

ಈ ಹಿಂದೆ ಮೇ ತಿಂಗಳಿನಲ್ಲಿ, ಗುಜರಾತಿನ ಮೆಹ್ಸನಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಿಗ್ನೇಶ್ ಮೇವಾನಿ ಮತ್ತು ಇತರೆ ಒಂಬತ್ತು ಮಂದಿಯನ್ನು, ಅನುಮತಿ ಇಲ್ಲದೆ ‘ಆಜಾದಿ ಮೆರವಣಿಗೆ’ ನಡೆಸಿದ ಒಂಬತ್ತು ವರ್ಷಗಳ ಹಳೆಯ ಪ್ರಕರಣದಲ್ಲಿ ಮೂರು ತಿಂಗಳು ಜೈಲು ಶಿಕ್ಷೆಗೆ ಒಳಪಡಿಸಿತ್ತು.

2017ರ ಜುಲೈನಲ್ಲಿ ಮೇವಾನಿ ಅವರ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ನ ಕೆಲವು ಸದಸ್ಯರು ಮತ್ತು ಎನ್‌ಸಿಪಿ ಪದಾಧಿಕಾರಿ ರೇಷ್ಮಾ ಪಟೇಲ್ ಸೇರಿದಂತೆ ಹತ್ತು ಮಂದಿ, ಐಪಿಸಿ ಸೆಕ್ಷನ್ 143ರ ಅಡಿ ಅಕ್ರಮ ಕೂಡುವಿಕೆ ನಡೆಸಿದ್ದ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಹೆಚ್ಚುವರಿ ಮುಖ್ಯ ನ್ಯಾಯಾಧೀಶ ಜೆಎ ಪರ್ಮಾರ್ ತೀರ್ಪು ನೀಡಿದ್ದರು. ಈ ಪ್ರಕರಣ ಸದ್ಯ ಉಚ್ಚ ನ್ಯಾಯಾಲಯದ ಮುಂದೆ ಬಾಕಿ ಇದೆ. ಮೇವಾನಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ತಡೆಹಿಡಿಯಲಾಗಿದೆ.

ಪ್ರಮುಖ ದಲಿತ ನಾಯಕರಾದ ಶಾಸಕ ಜಿಗ್ನೇಶ್‌ ಮೇವಾನಿ ಅವರು 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಸ್ವತಂತ್ರವಾಗಿ ಗೆದ್ದಿದ್ದರು. ನಂತರ ಪಕ್ಷವು ಅವರನ್ನು ಗುಜರಾತ್ ಘಟಕದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿತ್ತು.

Donate Janashakthi Media

Leave a Reply

Your email address will not be published. Required fields are marked *