ಬಳ್ಳಾರಿ: ವಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ 3 ರೋಗಿಗಳು ಒಂದೇ ಸಮಯದಲ್ಲಿ ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಐಸಿಯುನಲ್ಲಿ ಮೂರು ರೋಗಿಗಳು ಮೃತಪಟ್ಟ ಬಳಿಕ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯಕ್ಕೆ ಈ ವೀಡಿಯೋ ವೈರಲ್ ಆಗುತ್ತಿದ್ದು, ಮೂವರ ಸಾವಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆ ವೆಂಟಿಲೇಟರ್ ಕಾರ್ಯ ಸ್ಥಗಿತವಾಗಿರುವುದೇ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಮೌಲಾ ಹುಸೇನ್ ಹಾಗೂ ಚೆಟ್ಟೆಮ್ಮ ಹಾಗೂ ಮೂತ್ರಕೋಶ ವೈಫಲ್ಯದಿಂದ ಬಳಲುತ್ತಿದ್ದ ಮತ್ತೊಬ್ಬ ರೋಗಿ ಸಹ ಸಾವನ್ನಪ್ಪಿದ್ದಾರೆ. ಐಸಿಯುನಲ್ಲಿದ್ದ 10 ರೋಗಿಗಳ ಪೈಕಿ, ಈ ಮೂವರು ರೋಗಿಗಳು ಅಸುನೀಗಿದ್ದಾರೆ.
ಇದನ್ನೂ ಓದಿ : ಒಂದೇ ಶಾಲೆಯ ಮೂವರು ಬಾಲಕಿಯರು ನಾಪತ್ತೆ
ಮೂವರ ಮೃತಪಟ್ಟ ಬಳಿಕ ಘಟನೆಗೆ ಸಂಬಂಧಿಸಿ ವಿಮ್ಸ್ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ. ಐಸಿಯುದಲ್ಲಿದ್ದ ಉಳಿದ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದೆ. ಈ ಐಸಿಯುನಲ್ಲಿ ವಿವಿಧ ಖಾಯಿಲೆಯಿಂದ ಬಳಲುತಿದ್ದ ರೋಗಿಗಳಿದ್ದರು. ಈ ಘಟನೆ ಕಳೆದು 24 ಗಂಟೆ ಆದರೂ ವಿದ್ಯುತ್ ಸಮಸ್ಯೆ ಸರಿಯಾಗಿಲ್ಲ. ಹೀಗಾಗಿ ವಿಮ್ಸ್ ಆಡಳಿತ ಮಂಡಳಿ ವಿರುದ್ಧ ರೋಗಿಗಳು, ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದಾರೆ.
ವಿವಿಧ ವಾರ್ಡ್ ಹಾಗೂ ಆಸ್ಪತ್ರೆಗೆ ವಿದ್ಯುತ್ ಸರಬರಾಜು ಮಾಡುವ ಮೇನ್ ಕೇಬಲ್ ಬ್ಲಾಸ್ಟ್ ಆದ ಪರಿಣಾಮ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ವಿಮ್ಸ್ ಆಸ್ಪತ್ರೆಯ ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇಬ್ಬರು ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದ್ರೂ ಇನ್ನೂ ಕೂಡ ಸಮಸ್ಯೆ ಬಗೆಹರಿದಿಲ್ಲ. 24 ಗಂಟೆ ಕಳೆದರೂ ವಿದ್ಯುತ್ ಸಮಸ್ಯೆ ಸರಿಯಾಗಿಲ್ಲ. ಸದ್ಯ ಬಾಡಿಗೆ ಜನರೇಟರ್ ಮೂಲಕ ತಾತ್ಕಾಲಿಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಐಸಿಯುನಲ್ಲಿದ್ದ ರೋಗಿಗಳನ್ನು OT ವಾರ್ಡ್ ಹಾಗೂ ಟ್ರಾಮ್ ಕೇರ್ ಸೆಂಟರ್ ಸೇರಿದಂತೆ ಬೇರೆ ಬೇರೆ ವಾರ್ಡ್ಗಳಿಗೆ ಶಿಫ್ಟ್ ಮಾಡಲಾಗುತ್ತಿದೆ. ವಿದ್ಯುತ್ ಸಮಸ್ಯೆಯಿಂದ ಎಕ್ಸರೇ, ಸ್ಕ್ಯಾನಿಂಗ್ ಎಲ್ಲವೂ ಬಂದ್ ಆಗಿದೆ.