ಹಿಂದಿ ದಿವಸ ಆಚರಣೆಗೆ ವಿರೋಧ: ನಾಳೆ ರಾಜ್ಯಾದ್ಯಂತ ಪ್ರತಿಭಟನೆ-ಅಭಿಯಾನ

ಬೆಂಗಳೂರು: ಕೇಂದ್ರ ಸರ್ಕಾರದ ವತಿಯಿಂದ ಪ್ರತಿವರ್ಷ ಸೆಪ್ಟೆಂಬರ್ 14ರಂದು ನಡೆಸಲಾಗುವ ಹಿಂದಿ ದಿವಸ ಆಚರಣೆಗೆ ರಾಜ್ಯಾದ್ಯಂತ ಆಕ್ರೋಶದ ಅಲೆ ವ್ಯಕ್ತವಾಗುತ್ತಿದ್ದು, ನಾಳೆ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.

ಕನ್ನಡಿಗರ ತೆರಿಗೆ ಹಣದಿಂದ ನಡೆಸುವ ಹಿಂದಿ ದಿವಸ ಆಚರಣೆ ಕನ್ನಡಿಗರಿಗೆ ಯಾಕಾಗಿ ಬೇಕು? ಹಿಂದಿ ಹೇರಿಕೆ ಸಹಿಸುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಕಿಡಿಕಾರಿವೆ.

ಟ್ವಿಟರ್ ಅಭಿಯಾನ

ನಾಳೆ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕರ್ನಾಟಕ ರಕ್ಷಣಾ ವೇದಿಕೆ ಟ್ವಿಟರ್ ಅಭಿಯಾನಕ್ಕೆ ಕರೆ ನೀಡಿದೆ. #StopHindiImposition #ಹಿಂದಿಹೇರಿಕೆನಿಲ್ಲಿಸಿ ಎಂಬ ಹ್ಯಾಶ್ ಟ್ಯಾಗ್ ಗಳನ್ನು ಬಳಸಿ ಟ್ವೀಟ್ ಮಾಡಲು ಕರವೇ ಮನವಿ ಮಾಡಿದೆ.

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದು, ಬೆಂಗಳೂರಿನಲ್ಲಿಯೂ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ.

ಎಚ್.ಡಿ.ಕುಮಾರಸ್ವಾಮಿ ಕಿಡಿ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಿಂದಿ ದಿವಸ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದು, ಆಚರಣೆಯನ್ನು ಕೈಬಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ.

ಹಿಂದಿ ದಿವಸವನ್ನು ಅವರು ಹಿಂದಿ ರಾಜ್ಯಗಳಲ್ಲಿ ಆಚರಿಸಿಕೊಳ್ಳಲಿ. ನಮಗೆ ಅದರ ಅವಶ್ಯಕತೆ ಇಲ್ಲ. 2,500 ವರ್ಷಗಳ ಇತಿಹಾಸವಿರುವ ಕನ್ನಡ ನುಡಿಹಬ್ಬವನ್ನು ಹಿಂದಿ ಭಾಷಿಕರು ಆಚರಿಸುತ್ತಾರೆಯೇ? ಕೇವಲ 400 ವರ್ಷಗಳ ಇತಿಹಾಸದ ಹಿಂದಿಯ ದಿನವನ್ನು ನಾವೇಕೆ ಆಚರಿಸಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *