ಮಂಗಳೂರು: ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್ ಆಗಿ ಬಿಜೆಪಿಯ ಕದ್ರಿ ಪದವು ಕ್ಷೇತ್ರದ ಪಾಲಿಕೆ ಸದಸ್ಯ ಜಯಾನಂದ ಅಂಚನ್ ಆಯ್ಕೆಯಾಗಿದ್ದಾರೆ. ಉಪ ಮೇಯರ್ ಆಗಿ ಬಿಜೆಪಿಯ ಸೆಂಟ್ರಲ್ ಮಾರ್ಕೆಟ್ ಕ್ಷೇತ್ರದ ಪಾಲಿಕೆ ಸದಸ್ಯೆ ಪೂರ್ಣಿಮಾ ಆಯ್ಕೆಯಾದರು.
ಇಂದು(ಸೆಪ್ಟಂಬರ್ 09) ನಡೆದ ಚುನಾವಣೆ ನಡೆಯಿತು. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಜಿ.ಸಿ . ಪ್ರಕಾಶ್ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಸದಸ್ಯರು ಕೈಯೆತ್ತುವ ಮೂಲಕ ಪರ-ವಿರೋಧ ಮತಗಳನ್ನು ಚಲಾಯಿಸಿದರು.
ಬಿಜೆಪಿಯಿಂದ ಜಯಾನಂದ ಅಂಚನ್ ಹಾಗೂ ಕಾಂಗ್ರೆಸ್ ಪಕ್ಷದಿಂದ ದೇರೇಬೈಲ್(ದಕ್ಷಿಣ) ಕ್ಷೇತ್ರದ ಸದಸ್ಯ ಶಶಿಧರ್ ಹೆಗ್ಡೆ ಕಣದಲ್ಲಿದ್ದರು. ಜಯಾನಂದ ಅಂಚನ್ ಅವರಿಗೆ ಒಟ್ಟು ಮತದಾರರಲ್ಲಿ 46 ಮಂದಿ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 14 ಮತ ಪಡೆದರು.
ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಪೂರ್ಣಿಮಾ 46 ಮತಗಳನ್ನು ಗಳಿಸಿ ಚುನಾಯಿತರಾದರು. ಅವರ ವಿರುದ್ಧ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಬಂದರ್ ಕ್ಷೇತ್ರದ ಪಾಲಿಕೆ ಸದಸ್ಯೆ ಝೀನತ್ ಶಂಸುದ್ದೀನ್ 14 ಮತಗಳನ್ನು ಗಳಿಸಿದರು.
ಎಸ್ ಡಿಪಿಐ ಪಕ್ಷದ ಇಬ್ಬರು ಸದಸ್ಯರು ಮತದಾನ ಪ್ರಕ್ರಿಯೆಯಿಂದ ತಟಸ್ಥರಾಗಿದ್ದರು.