ಆಹಾರ ಖಾತೆ ಸಚಿವ ಉಮೇಶ್ ಕತ್ತಿ ನಿಧನ

ಬೆಂಗಳೂರು: ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಅವರು ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿದ್ದ 61 ವರ್ಷದ ಉಮೇಶ್ ಕತ್ತಿ ಅವರು ಮಂಗಳವಾರ ರಾತ್ರಿ 10.30ರ ಸುಮಾರಿಗೆ ಬಾತ್ ರೂಮ್ ಗೆ ತೆರಳಿದ್ದಾಗ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಅವರ ಕುಟುಂಬದವರು ತಕ್ಷಣ ಅವರನ್ನು ಸರ್ಕಾರಿ ಕಾರಿನಲ್ಲಿಯೇ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತು.
ತೀವ್ರ ನಿಗಾ ಘಟಕದಲ್ಲಿ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ಬುಧವಾರ ಬೆಳಗ್ಗೆ ಬೆಳಗಾವಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ತಿಳಿದು ಬಂದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ 1961ರ ಮಾರ್ಚ್‌ 14ರಂದು ಜನಿಸಿದ್ದ ಉಮೇಶ್‌ ಕತ್ತಿ ಅವರು ಪತ್ನಿ ಶೀಲಾ, ಮಗ ನಿಖಿಲ್‌, ಮಗಳು ಸ್ನೇಹಾ ಅವರನ್ನು ಅಗಲಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಒಲವು ಹೊಂದಿದ್ದ ಉಮೇಶ್ ಕತ್ತಿ ಆಗಾಗ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಲ್ಲಿರುತ್ತಿದ್ದರು. ಅಲ್ಲದೆ ತಾವು ಒಂದಲ್ಲ ಒಂದು ದಿನ ನಾನು ಮುಖ್ಯಮಂತ್ರಿಯಾಗುವುದಾಗಿ ಹಲವು ಬಾರಿ ಹೇಳಿದ್ದರು.

5 ಪಕ್ಷ, ಎಂಟು ಬಾರಿ ಶಾಸಕ : ಬೆಳಗಾವಿಯ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ 8 ಬಾರಿ ಶಾಸಕರಾಗಿದ್ದ ಉಮೇಶ್ ಕತ್ತಿ, ವಿಭಿನ್ನವಾದ ರಾಜಕೀಯ ಪಥದಲ್ಲಿ ಸಾಗಿ ಸುದ್ದಿ ಮಾಡಿದ್ದರು.

ಉಮೇಶ್ ಕತ್ತಿಯವರ ತಂದೆ ವಿಶ್ವನಾಥ್ ಕತ್ತಿಯ ಅಕಾಲಿಕ ನಿಧನದಿಂದ ಹುಕ್ಕೇರಿ ವಿಧಾನಸಭಾ ಕ್ಷೇತ್ರ ಖಾಲಿಯಾಗಿತ್ತು, 1985ರಲ್ಲಿ ಉಮೇಶ್​ ಕತ್ತಿಯರವು, ಜನತಾ ಪಕ್ಷದಿಂದ ಶಾಸಕರಾಗಿ ವಿಧಾನಸಭಾ ಮೆಟ್ಟಿಲನ್ನು ಮೊದಲ ಬಾರಿಗೆ ಹತ್ತಿದರು. ಅಂದಿನಿಂದ ಇಲ್ಲಿಯವರೆಗೆ 2004ರಲ್ಲಿ ಹೊರತಾಗಿ ಇನ್ಯಾವುದೇ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನೇ ಕಂಡಿಲ್ಲ. ಹೀಗಾಗಿ ದಾಖಲೆಯ 8 ಬಾರಿ ಶಾಸಕರಾಗಿದ್ದ ಸಾಧನೆ ಅವರದ್ದು.

ಜನತಾ ಪಕ್ಷದಿಂದ ರಾಜಕೀಯ ಆರಂಭಿಸಿದ್ದ ಉಮೇಶ್ ಕತ್ತಿ, ಭಾರತೀಯ ಜನತಾ ಪಕ್ಷದ ಮೂಲಕ ತಮ್ಮ ರಾಜಕೀಯ ಕೊನೆಗೊಳಿಸಿದರು. 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. 1989ರಲ್ಲಿ ಜನತಾದಳದಿಂದ ಜಯಭೇರಿ ಬಾರಿಸಿದ್ದರು.

1994ರಲ್ಲೂ ಉಮೇಶ್​ ಕತ್ತಿ, ಜನತಾದಳದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿ, ಎಚ್​ಡಿ ದೇವೇಗೌಡರ ಸಚಿವ ಸಂಪುಟದಲ್ಲಿ ಸಕ್ಕರೆ ಸಚಿವರಾಗಿ ಕೆಲಸ ಮಾಡಿದರು. ನಂತರ ಜೆಎಚ್​ ಪಟೇಲ್ ಸರ್ಕಾರದಲ್ಲೂ ಪ್ರಭಾವಿ ಲೋಕೋಪಯೋಗಿ ಖಾತೆಯನ್ನು ನಿಭಾಯಿಸಿದರು. 1999ರ ವಿಧಾನಸಭಾ ಚುನಾವಣೆಯಲ್ಲಿ ದೇವೇಗೌಡರಿಂದ ದೂರ ಸರಿದ ಉಮೇಶ್ ಕತ್ತಿ, ಜೆಡಿಯುನೊಂದಿಗೆ ಗುರುತಿಸಿಕೊಂಡು, ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದರು. ಆದರೆ ನಂತರದ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್​ ಚಿಹ್ನೆಯಲ್ಲಿ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಕತ್ತಿ ಮೊದಲ ಸೋಲಿನ ರುಚಿ ಕಂಡರು, ಇದು ಅವರ ಕೊನೆಯ ಸೋಲು ಆಗಿತ್ತು.

2008ರಲ್ಲಿ ಮತ್ತೆ ಜೆಡಿಎಸ್​ಗೆ ಬಂದು ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಆದರೆ ಚುನಾವಣೆ ಬಳಿಕ ನಡೆದ ಆಪರೇಷನ್ ಕಮಲದ ಭಾಗವಾಗಿ ಕತ್ತಿ ಬಿಜೆಪಿ ಸೇರಿದರು.
ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ ಉಮೇಶ್ ಕತ್ತಿ ಗೆಲುವು ಸಾಧಿಸಿ, ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಬಂಧೀಖಾನೆ, ಕೃಷಿ ಸಚಿವರಾಗಿ ಕೆಲಸ ಮಾಡಿದರು.

ನಂತರದ 2013-2018ರ ವಿಧಾನಸಭಾ ಚುನಾವಣೆಯಲ್ಲಿಯೂ ಉಮೇಶ್ ಕತ್ತಿ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ನಿರಾಯಾಸವಾಗಿ ಗೆದ್ದುಬಂದರು.
ನಂತರ ಇತ್ತೀಚಿನ ಯಡಿಯೂರಪ್ಪ ಸರ್ಕಾರದಲ್ಲಿಯೂ ಉಮೇಶ್ ಕತ್ತಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ಈಗ ಹಾಲಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಹಾಗೂ ಅರಣ್ಯ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದರು.

ತಮ್ಮ ಸಂಪುಟ ಸಹೋದ್ಯೋಗಿ ಉಮೇಶ್ ಕತ್ತಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ಸೂಚಿಸಿದ್ದು, ಅರಣ್ಯ ಸಚಿವ, ನನ್ನ ಆಪ್ತ ಸಹೋದ್ಯೋಗಿ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ನಿಧನದಿಂದ ರಾಜ್ಯ ಓರ್ವ ನುರಿತ ಮುತ್ಸದ್ಧಿ, ಕ್ರಿಯಾಶೀಲ ಮುಖಂಡ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *