ಬೆಂಗಳೂರು: ಮಹಿಳಾ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಹದೇವಪುರ ಕ್ಷೇತ್ರದ ಸಂತ್ರಸ್ತ ಮಹಿಳೆ ನಡೆದ ಘಟನಾವಳಿಯನ್ನು ವಿವರಿಸಿ ʻಮೊನ್ನೆ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಮನೆ ಹಿಂದೆಗಡೆ ಗೋಡೆನ್ನು ಒಡೆಯುತ್ತಿದ್ದರು. ನನ್ನ ಗಮನಕ್ಕೆ ಬಂದಾಗ ಅಲ್ಲಿ ಬಿಬಿಎಂಪಿ ಅಧಿಕಾರಿ ಹಾಗೂ ಬಿಜೆಪಿ ನಾಯಕರು ಇದ್ದರು. ದಾಖಲೆಗಳ ಪ್ರಕಾರ ನಮ್ಮ ಕಟ್ಟಡದ ಗೋಡೆ ಒತ್ತುವರಿ ಆಗಿಲ್ಲ. ನಾವು ಸರ್ವೆ ಮಾಡಿಸಿ, 2006ರಲ್ಲಿ ಯೋಜನಾ ಅನುಮತಿ ಪಡೆದೇ ಕಟ್ಟಿದ್ದೇವು. ಆದರೂ ಸಹ ಒತ್ತುವರಿ ಎಂದು ಗೋಡೆ ಒಡೆಯಲು ಮುಂದಾದರು, ಈ ಗೋಡೆ ಒಡೆಯುವ ಮುನ್ನ ನನಗೆ ಲಿಖಿತ ಅಥವಾ ಮೌಖಿಕವಾಗಿ ನೋಟೀಸ್ ನೀಡಬಹುದಾಗಿತ್ತು. ಆದರೆ ಯಾವುದೇ ನೋಟೀಸ್ ನೀಡದೇ ಒಡೆಯುತ್ತಿದ್ದೀರಿ ಎಂದು ಕೇಳಿದಾಗ ಅವರು ಶಾಸಕರು ಹೇಳಿದ್ದಾರೆ, ನಾವು ಯಾರ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೇಳಿ ತಮ್ಮ ಕಾರ್ಯ ಮುಂದುವರೆಸಿದರು.
ಜಾಗ ಒತ್ತುವರಿ ಆಗಿದ್ದರೆ, ಅದರ ದಾಖಲೆಯನ್ನು ನಮ್ಮ ಗಮನಕ್ಕೆ ತಂದಿದ್ದರೆ ನಾನು ಅದನ್ನು ಬಿಟ್ಟುಕೊಡುತ್ತಿದ್ದೆವು. ನಾನು 35 ವರ್ಷಗಳಿಂದ ಸಮಾಜ ಸೇವೆಯಲ್ಲಿ ಇದ್ದೇನೆ. ಇಂತಹ ವಿಚಾರವಾಗಿ ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ ಎಂದು ಹೇಳಿದೆ. ಅಲ್ಲಿನ ಸ್ಥಳೀಯ ಪೊಲೀಸ್ ಅಧಿಕಾರಿ ನನ್ನ ಮಾತು ಸರಿ ಇದೆ ಎಂದರು ಮತ್ತು ಅವರು ಸಾಮಾಗ್ರಿಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ನಂತರ 3 ಗಂಟೆಗೆ ಶಾಸಕ ಅರವಿಂದ ಲಿಂಬಾವಳಿ ಆ ಪ್ರದೇಶಕ್ಕೆ ಭೇಟಿ ನೀಡಿದರು. ಆ ಸಂದರ್ಭದಲ್ಲಿ ನನ್ನ ಪತಿಯ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ಎಳೆದುಕೊಂಡು ಹೋಗಿ ಪೊಲೀಸ್ ಗಾಡಿಯಲ್ಲಿ ಕೂರಿಸಿದರು. ನಾನು ಯೋಜನಾ ಅನುಮತಿ ಪತ್ರ ತೆಗೆದುಕೊಂಡು ಹೋದಾಗ ಅವರ ಆಪ್ತರು, ಕಾರ್ಯಕರ್ತರು ಸಾಹೇಬರ ಹತ್ತಿರ ಮಾತಾಡುವಂತಿಲ್ಲ ಎಂದರು. ದಾಖಲೆ ತೋರಿಸುತ್ತೇನೆ ಎಂದು ಅವರ ಅನುಮತಿ ಕೇಳಲು ಮುಂದಾದೆ. ಆಗ ಶಾಸಕರು ಏಖಾಏಕಿ ನನ್ನ ಕೈಯಲ್ಲಿದ್ದ ದಾಖಲೆ ಕಿತ್ತುಕೊಳ್ಳಲು ಮುಂದಾದರು. ಬಾಯಿಗೆ ಬಂದಂತೆ ಮಾತನಾಡಿದರು. ದಾಖಲೆ ಕಿತ್ತು ಬೇರೆಯವರಿಗೆ ನೀಡಿ ಸುಡಲು ಹೇಳಿದರು. ನಂತರ ರೇಗಾಡಿ ಏಕವಚನದಲ್ಲಿ ಬೈಯ್ದರು ಎಂದು ಘಟನೆಯ ವಿವರಗಳನ್ನು ತಿಳಿಸಿದರು.
ಮುಂದುವರೆದು ಮಾತನಾಡಿದ ಸಂತ್ರಸ್ತ ಮಹಿಳೆ, ನಾನಾಗ ನೀವು ಎಲ್ಲರಿಗೂ ಶಾಸಕರಾಗಿದ್ದು, ನಮ್ಮ ಅಹವಾಲು ಸ್ವೀಕರಿಸಬೇಕು ಎಂದು ಕೇಳಿದಾಗ ಏಕವಚನದಲ್ಲಿ ಬೈಯ್ಯುತ್ತಾ ಹೊಡೆಯಲು ಮುಂದಾದರು. ಅಲ್ಲಿದ್ದ ಕಾರ್ಯಕರ್ತರು, ಅಧಿಕಾರಿಗಳು, ಜನರು ಮೂಕ ಪ್ರೇಕ್ಷಕರಾಗಿದ್ದರು. ಅವಳನ್ನು ಎಳೆದುಕೊಂಡು ಹೊಡೆಯಿರಿ ಎಂದು ಅವರು ಹೇಳಿದರು. ಮಹಿಳಾ ಪೊಲೀಸರಿಗೆ ನನ್ನನ್ನು ಎಳೆದುಕೊಂಡು ಹೋಗುವಂತೆ ಸೂಚಿಸಿದರು. ನನ್ನನ್ನು ನಾಯಿಯಂತೆ ಎಳೆದುಕೊಂಡು ಹೋದರು. ಸಂಜೆ 5 ಗಂಟೆಗೆ ಎಳೆದುಕೊಂಡು ಹೋದವರು ರಾತ್ರಿ 10 ಗಂಟೆವರೆಗೂ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡಿದ್ದರು. ಇದರಿಂದ ನನ್ನ ಮೇಲಿನ ದೌರ್ಜನ್ಯ ಕಂಡ ಮಾಧ್ಯಮದವರು ಇದನ್ನು ಸೆರೆ ಹಿಡಿದು ಅದನ್ನು ಬಿತ್ತರಿಸಿದ್ದಾರೆ. ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು.
ನಾನು ಮಹಿಳಾ ಹಾಗೂ ಮಕ್ಕಳ ಹಿತಕ್ಕಾಗಿ ಕೆಲಸ ಮಾಡುತ್ತಿದ್ದೆ. ನನ್ನ ಕೆಲಸ ನೋಡಿದ್ದವರು ಪೊಲೀಸ್ ಠಾಣೆಗೆ ಬಂದು ನನ್ನ ರಕ್ಷಣೆಗೆ ನಿಂತರು.
ನಾನು ಅರವಿಂದ ಲಿಂಬಾವಳಿ ಮೇಲೆ ಕೂಗಾಡಿದ್ದೇನೆ, ಶಾಸಕರು ಏನೂ ಮಾತನಾಡಿಲ್ಲ ಎಂದು ಹೇಳಲಾಗಿದೆ. ಆಗ ನಾನು ದೂರು ನೀಡುತ್ತೇನೆ ಎಂದಾಗ ನಾನು ಪ್ರತಿ ದೂರು ನೀಡುತ್ತೇವೆ ಎಂದು ಬೆದರಿಸಿದ್ದಾರೆ. ನಾನು ಕೊಟ್ಟ ದೂರನ್ನು ಪಕ್ಕಕ್ಕಿಟ್ಟರು. ದೂರು ಸ್ವೀಕೃತಿ ಪ್ರತಿಯನ್ನು ನೀಡಲಿಲ್ಲ. ಆಗ ನಾನು ನನಗಾದ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದೆ. ಆಗ ಪೊಲೀಸ್ ಅಧಿಕಾರಿಗಳು ನನ್ನನ್ನು ಮಾತ್ರ ಕರೆಸಿ ರಾಜಿ ಮಾಡಲು ಮುಂದಾದರು. ನೀವು ಹೋರಾಟ ಮಾಡಿದರೆ ಏನೂ ಪ್ರಯೋಜನವಿಲ್ಲವೆಂದರು. ಕಾನೂನಿನ ಪ್ರಕಾರ ಮಹಿಳೆಯನ್ನು ಸಂಜೆ ಆರು ಗಂಟೆ ನಂತರ ಠಾಣೆಯಲ್ಲಿ ಇರಿಸಿಕೊಳ್ಳುವಂತಿಲ್ಲ. ಆದರೂ ಸಹ ನನ್ನನ್ನು ಆರೋಪಿಯಂತೆ ಕಾಣುತ್ತಿದ್ದರು. ಇದನ್ನು ಪ್ರಶ್ನಿಸಿದಾಗ ನಮಗೆ ಆದೇಶ ಬಂದಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮತ್ತೆ ಇಂತಹ ದೌರ್ಜನ್ಯ ನಡೆಯಬಾರದು. ಶಾಸಕರ ತಪ್ಪು ಅವರಿಗೆ ಅರಿವಾಗಬೇಕು. ಅವರು ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಸಂತ್ರಸ್ತ ಮಹಿಳೆ ಹೇಳಿದರು.
ಶಾಸಕ ಲಿಂಬಾವಳಿ ವಿರುದ್ಧ ಮಹಿಳಾ ಆಯೋಗ ಕ್ರಮಕೈಗೊಳ್ಳಬೇಕು: ಪುಷ್ಪ ಅಮರನಾಥ್
ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು ಮಹಿಳೆ ಮೇಲೆ ತೋರಿರುವ ದರ್ಪವನ್ನು ಕಾಂಗ್ರೆಸ್ ಪಕ್ಷದ ಪರವಾಗಿ ನಾವು ಖಂಡಿಸುತ್ತೇವೆ. ಶಾಸಕರು ಆ ಮಹಿಳೆಗೆ ಬಹಿರಂಗವಾಗಿ ಬೇಷರತ್ ಕ್ಷಮೆ ಕೇಳಬೇಕು. ಇಲ್ಲವಾದರೆ ನಿಮ್ಮ ನಾಯಕರುಗಳು, ನಿಮ್ಮಂತಹ ನಾಲಾಯಕ್ ನಾಯಕರ ರಾಜೀನಾಮೆ ಪಡೆಯಬೇಕು ಎಂದು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದೆ.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಮಹಿಳಾ ಕಾಂಗ್ರೆಸ್ ಘಟಕವು ಮಹಿಳೆಯರಿಗೆ ಅನ್ಯಾಯಾವಾದಾಗಲೆಲ್ಲಾ ಧ್ವನಿ ಎತ್ತಿದ್ದೇವೆ. ರಾಜ್ಯದಲ್ಲಿ ಮಹಿಳಾ ಆಯೋಗ ಎಂಬುದು ಇದ್ದರೆ ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿದೆ ಎಂಬ ನಂಬಿಕೆ ಇದೆ. ನಾವು ಈ ವಿಚಾರವಾಗಿ ಮಹಿಳಾ ಆಯೋಗಕ್ಕೂ ದೂರು ನೀಡುತ್ತೇವೆ. ಮಹಿಳೆಯರು ಅನ್ಯಾಯ ಸಹಿಸಿಕೊಳ್ಳುವುದು ಸರಿಯಲ್ಲ, ಅವರು ತಮಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದ ಪುಷ್ಪ ಅಮರನಾಥ್ ಅವರು, ಇತ್ತೀಚೆಗೆ ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿ ತಂದೆಯ ಅಧಿಕಾರದ ಹೆಸರೇಳಿ ಪೊಲೀಸ್ ಅಧಿಕಾರಿಗಳ ಮೇಲೆ ದರ್ಪ ತೋರಿದ್ದನ್ನು ನೆನಪಿಸಿದರು.