ಹೈದರಾಬಾದ್: ತೆಲಂಗಾಣ ಪ್ರವಾಸದ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪಡಿತರ ಕೇಂದ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಕಾಣದಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಆಡಳಿತರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ಎಸ್) ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಾಧನೆ ಎಲ್ಲರಿಗೂ ತಿಳಿಯಬೇಕಿದೆಯಲ್ಲವೇ ಹಾಗಿದ್ದಲ್ಲಿ ಬೆಲೆ ಏರಿಕೆಯಲ್ಲಿಯೂ ಮೋದಿ ಅವರ ಸಾಧನೆ ದಾಖಲೆ ಮುಟ್ಟಿದೆ ಎಂದು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸಿಲಿಂಡರ್ಗಳಿಗೆ ಮೋದಿ ಚಿತ್ರದೊಂದಿಗೆ ಬೆಲೆಯನ್ನೂ ನಮೂದಿಸುವ ಮೂಲಕ ಬೆಲೆ ಏರಿಕೆ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
Lelo ji… poster nikla… #justasking pic.twitter.com/dv7l0xz2Jq
— Prakash Raj (@prakashraaj) September 3, 2022
ನಿಮಗೆ ಮೋದಿಜೀಯವರ ಚಿತ್ರ ಬೇಕಲ್ಲವೇ ನಿರ್ಮಲಾ ಸೀತಾರಾಮನ್ ಜೀ?. ಇಲ್ಲಿದೆ ನೋಡಿ ಎಂದು ಟಿಆರ್ಎಸ್ ಪಕ್ಷದ ಕಾರ್ಯಕರ್ತರು ಅಡುಗೆ ಸಿಲಿಂಡರ್ಗಳ ಮೇಲೆ ಮೋದಿ ನಗುತ್ತಿರುವ ಫೋಟೋ ಅಂಟಿಸಿ ಅದರ ಮೇಲೆ 1105 ರೂಪಾಯಿ ಬೆಲೆ ಬರೆದು “ನಿರ್ಮಲಾ ಸೀತಾರಾಮನ್ ಅವರೇ ನೋಡಿರಿ” ಎಂದು ಉಲ್ಲೇಖಿಸಿದ್ದಾರೆ.
ಪಡಿತರ ಅಕ್ಕಿ ವಿತರಣೆಯಲ್ಲಿ ಕೇಂದ್ರದ ಪಾಲಿನ ವಿಚಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರದ ವಿಚಾರವಾಗಿ ತಾರಕ್ಕೇರಿರುವ ಬಿಜೆಪಿ ಮತ್ತು ಟಿಆರ್ಎಸ್ ಮಧ್ಯೆ ಕಿತ್ತಾಟ ಹೊಸ ಸ್ವರೂಪ ಪಡೆದುಕೊಂಡು ಇದೀಗ ಬೆಲೆ ಏರಿಕೆ ವಿಚಾರದಲ್ಲಿಯೂ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಆಡಳಿತ ಸಾಧನೆ ಮಾಡಿದೆ ಎಂದು ಪ್ರಚುರಪಡಿಸಲಾಗಿದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಉಚಿತವಾಗಿ ಅಕ್ಕಿ ವಿತರಣೆ ಮಾಡುತ್ತಿದೆ. ಆದರೂ ಪಡಿತರ ಕೇಂದ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರ ಹಾಕದಿರುವುದು ಸರಿಯಲ್ಲ ಎಂದು ಬಹಿರಂಗವಾಗಿಯೇ ನಿರ್ಮಲಾ ಸೀತಾರಾಮನ್ ಅಸಮಾಧಾನ ವ್ಯಕ್ತಪಡಿಸಿದ್ದರು.