ಪಾಟ್ನಾ: ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು ದೇಶದಲ್ಲಿ ಕೇವಲ 50 ಸ್ಥಾನಗಳಿಗೆ ಅಷ್ಟೇ ಸೀಮಿತಗೊಳಿಸಿ ಕಟ್ಟಿಹಾಕಲಾಗುವುದು. ಇದಕ್ಕಾಗಿಯೇ ವಿರೋಧ ಪಕ್ಷಗಳ ಸಂಘಟನೆ ಮತ್ತು ಏಕೀಕೃತ ಮೈತ್ರಿಕೂಟ ರಚನೆಗೆ ಭಾಗವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಹೇಳಿದ್ದಾರೆ.
ಸಂಯುಕ್ತ ಜನತಾ ದಳ (ಜೆಡಿಯು) ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬಳಿಕ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಿತೀಶ್ ಕುಮಾರ್ ಬಿಜೆಪಿ ಪಕ್ಷದ ಗೆಲುವಿಗೆ ಅಂತ್ಯ ಹಾಕುವ ಕಾಲ ಸಂಹಿತವಾಗಿದೆ ಎಂಬ ಆಶಯ ವ್ಯಕ್ತಪಡಿಸಿದರು.
‘ಬಿಹಾರದ ಸಾಮಾಜಿಕ ಮತ್ತು ಕೋಮು ಸೌಹಾರ್ದ ಕದಡಲು ಬಿಜೆಪಿ ಪ್ರಯತ್ನಿಸಬಹುದು. ಅವರ ಪ್ರಯತ್ನಗಳನ್ನು ನಾವು ವಿಫಲಗೊಳಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ನಾವು ಕಟ್ಟೆಚ್ಚರ ವಹಿಸಬೇಕು’ ಎಂದು ನಿತೀಶ್ ಕುಮಾರ್ ಜೆಡಿಯು ಕಾರ್ಯಕರ್ತರಿಗೆ ಕರೆ ನೀಡಿದರು.
ಸುಮಾರು 30 ವರ್ಷ ಬಿಜೆಪಿಯ ಮಿತ್ರರಾಗಿದ್ದ ನಿತೀಶ್ ಕುಮಾರ್ ತಮ್ಮ ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆಯ ಕಿವಿಮಾತನ್ನೂ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ವಿಭಜಿಸಲು ಬಿಜೆಪಿ ಪ್ರಯತ್ನಿಸಬಹುದು ಎಂಬುದು ಅವರ ಆತಂಕವಾಗಿದೆ.
2020ರಲ್ಲಿ ಜರುಗಿದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಳಸಂಚುಗಳನ್ನು ಕೈಗೊಳ್ಳುವ ಮೂಲಕ ಜೆಡಿಯು ಗೆಲುವಿಗೆ ಕಡಿವಾಣ ಹಾಕಿತ್ತು. ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವ ಆಸೆಯೂ ನನಗಿರಲಿಲ್ಲ. ಜೆಡಿಯು ಮತ್ತು ಬಿಜೆಪಿ ನಡುವೆ ಹಲವು ಭಿನ್ನಮತಗಳಿಗೆ ಅದೇ ವಿಧಾನಸಭಾ ಚುನಾವಣೆಯು ಬೀಜ ಬಿತ್ತಿತ್ತು.
ಜೆಡಿಯು ಮಾಜಿ ಅಧ್ಯಕ್ಷ ಆರ್.ಸಿ.ಪಿ.ಸಿಂಗ್ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರಬಹುದೆಂಬ ಅನುಮಾನಗಳು ಮೂಡತೊಡಗಿದವು. ಚುನಾವಣೆಯ ನಂತರದ ಬೆಳವಣಿಗೆಗಳು ಕಾರಣವಾಗಿದ್ದವು. ಆರ್ಸಿಪಿ ಸಿಂಗ್ ನೇತೃತ್ವದಲ್ಲಿ ಜೆಡಿಯು ವಿಭಜನೆಗೊಳ್ಳಲಿದೆ ಎಂಬ ಅನುಮಾನಗಳು ದಟ್ಟವಾಗತೊಡಗಿದಂತೆ, ಬಿಜೆಪಿಯ ನಂಟು ಕಡಿದುಕೊಳ್ಳಲು ನಿತೀಶ್ ಕುಮಾರ್ ತೀರ್ಮಾನಿಸಿದರು.
ನಂತರದ ಬೆಳವಣಿಗೆಯಲ್ಲಿ ಇತ್ತೀಚಿಗೆ ಆರ್ಜೆಡಿ-ಕಾಂಗ್ರೆಸ್ ಬೆಂಬಲದೊಂದಿಗೆ ನಿತೀಶ್ ಕುಮಾರ್ ಹೊಸ ಸರ್ಕಾರ ರಚಿಸಿದರು. ಬಿಹಾರ ಸರ್ಕಾರಕ್ಕೆ ಎಡಪಕ್ಷಗಳು ಹೊರಗಿನಿಂದ ಬೆಂಬಲ ಸೂಚಿಸಿವೆ.
‘ಎಲ್ಲ ವಿರೋಧ ಪಕ್ಷಗಳು ಒಗ್ಗೂಡಿ ಹೋರಾಡಿದರೆ ಬಿಜೆಪಿಯನ್ನು ಕೇವಲ 50 ಸ್ಥಾನಗಳಿಗೆ ಮಾತ್ರ ಸೀಮಿತಗೊಳಿಸುವ ಎಲ್ಲಾ ಸಂದರ್ಭಗಳು ಇವೆ. ಈ ಅಭಿಯಾನಕ್ಕೆ ನನ್ನನ್ನು ನಾನು ಸಮರ್ಪಿಸಿಕೊಳ್ಳುತ್ತಿದ್ದೇನೆ’ ಎಂದು ನಿತೀಶ್ ಕುಮಾರ್ ಹೇಳಿದರು.
ರಾಜಕೀಯ ಅಭಿಯಾನದ ಭಾಗವಾಗಿ ಮೂರು ದಿನಗಳ ಪ್ರವಾಸ ಹೊರಟಿರುವ ನಿತೀಶ್ ಕುಮಾರ್, ನಾಳೆ (ಸೆಪ್ಟೆಂಬರ್ 5) ದೆಹಲಿಗೆ ತೆರಳಲಿದ್ದಾರೆ.