ಏ ಸುಮ್ನೆ ಇರು, ಬೇರೆ ಭಾಷೆ ಬರುತ್ತೆ; ಮಹಿಳೆ ಮೇಲೆ ದರ್ಪ ತೋರಿದ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ

ಬೆಂಗಳೂರು: ಸಮಸ್ಯೆಗಳ ಬಗ್ಗೆ ತಿಳಿಸಲು ಮಹಿಳೆಯೊಬ್ಬಳು ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಬಳಿಗೆ ಬಂದ ಸಂದರ್ಭದಲ್ಲಿ ಆಕೆಯನ್ನು ಬೈದು ಗದರಿಸುವ ಘಟನೆ ನಡೆದಿದೆ. ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಳೆ ಅನಾಹುತ ಪ್ರದೇಶವಾದ ವರ್ತೂರು ಕೆರೆ ಕೋಡಿ ವೀಕ್ಷಣೆಗೆ ಶಾಸಕ ಅರವಿಂದ ಲಿಂಬಾವಳಿ ಅಧಿಕಾರಿಗಳೊಂದಿಗೆ ಆಗಮಿಸಿದರು. ಇದೇ ಸಮಯದಲ್ಲಿ ಮನವಿಯೊಂದಿಗೆ ಸಮಸ್ಯೆ ಹೇಳಲು ಬಂದ ಮಹಿಳೆಗೆ, ನಿನಗೆ ಮಾನ ಮರ್ಯಾದೆ ಇದ್ಯಾ? ನಿನಗೆ ನಾಚಿಕೆ ಆಗಲ್ವಾ ಎಂದು ಏರು ದನಿಯಲ್ಲಿ ಬೈದಿರುವ ಘಟನೆ ನಡೆದಿದೆ. ನಂತರ ಮಹಿಳೆಯನ್ನು ಠಾಣೆಗೆ ಕರೆದುಕೊಂಡು ಹೋಗಿ ಕೂರಿಸಿ ಎಂದು ಶಾಸಕರು ಕಿಡಿಕಾರಿದ್ದಾರೆ.

ಶಾಸಕ ಹಾಗೂ ಮಹಿಳೆಯ ನಡುವಿನ ಸಂಭಾಷಣೆ ಹೀಗಿದೆ;

ಮಹಿಳೆ : ಸರ್ ಒಂದು ನಿಮಿಷ ಸರ್…
ಶಾಸಕ ಅರವಿಂದ ಲಿಂಬಾವಳಿ: ಹೇ.. ಕೊಡಮ್ಮ ಇಲ್ಲಿ…. ಹೇಯ್…. ಕೊಡೆ ಇಲ್ಲಿ…
ಮಹಿಳೆ: ಸರ್ ಇದು ಡಾಕ್ಯುಮೆಂಟ್… ಸ್ವಲ್ಪ ಇರಿ ಸರ್. ಕೇಳಿಸ್ಕೊಳಿ..
ಶಾಸಕ ಅರವಿಂದ ಲಿಂಬಾವಳಿ: ಹೇ.. ಇವಳನ್ನು ಪೊಲೀಸ್ ಕರೆಸಿ ಕಳಿಸು..
ಮಹಿಳೆ: ಇರಿ ಸರ್. ಸ್ವಲ್ಪ ಇರಿ ಸರ್..
ಶಾಸಕ ಅರವಿಂದ ಲಿಂಬಾವಳಿ: ಹೇಯ್… ಏನ್ ಕೇಳಿಸ್ಕೊಳೋದು.. ಮುಚ್ಚುಬಾಯಿ…
ಮಹಿಳೆ: ಸರ್ ಏನ್ ಸರ್.. ಸ್ವಲ್ಪ ಮರ್ಯಾದೆ ಕೊಡಿ… ಮಹಿಳೆ ಅಂತಾ…
ಶಾಸಕ ಅರವಿಂದ ಲಿಂಬಾವಳಿ: ಏನ್ ಮರ್ಯಾದೆ ನಿಂಗೆ.. ಒತ್ತುವರಿ ಮಾಡಿದ್ದಲ್ಲದೇ, ಮರ್ಯಾದೆ ಬೇರೆ ಕೊಡಬೇಕಾ ನಿಂಗೆ..
ಮಹಿಳೆ: ಸ್ವಲ್ಪ ಡಾಂಕ್ಯುಮೆಂಟ್ ಪರಿಶೀಲಿಸಿ ನೋಡಿ ಸರ್.. ಆಮೇಲೆ ತೀರ್ಮಾನ ಮಾಡಿ.. ನಾನೆಲ್ಲಿ ಒತ್ತುವರಿ ಮಾಡಿದ್ದೀನಿ…
ಶಾಸಕ ಅರವಿಂದ ಲಿಂಬಾವಳಿ: ಮರ್ಯಾದೆ ಅಲ್ಲ.. ನಂಗೆ ಬೇರೆ ಭಾಷೆ ಬರುತ್ತದೆ… ಬೇರೆ ಭಾಷೆ ಬಳಸಬೇಕಾಗುತ್ತದೆ…
ಮಹಿಳೆ: ಸರ್ ಹಾಗೆಲ್ಲಾ ಮಾತನಾಡಬೇಡಿ…
ಶಾಸಕ ಅರವಿಂದ ಲಿಂಬಾವಳಿ: ಬೇರೆ ಭಾಷೆ ಬರುತ್ತದೆ ನನಗೆ…
ಮಹಿಳೆ: ಏನ್ ಮಾತನಾಡುತ್ತಿದ್ದೀರಾ ನೀವು… ಬಿಡಲ್ಲ ನಾನು…
ಶಾಸಕ ಅರವಿಂದ ಲಿಂಬಾವಳಿ: ನಾನು ಬಿಡಲ್ಲ ನಿನ್ನ.. ನಡಿ ಪೊಲೀಸ್ ಸ್ಟೇಷನ್‍ಗೆ… ಕತ್ತು ಹಿಡಿದು ಒಳಗೆ ಹಾಕಿಸುತ್ತೇನೆ..
ಮಹಿಳೆ: ಸರ್ ನಾನು ನ್ಯಾಯ ಕೇಳುತ್ತಿದ್ದೇನೆ…
ಶಾಸಕ ಅರವಿಂದ ಲಿಂಬಾವಳಿ: ಒತ್ತುವರಿ ಮಾಡಿ ನ್ಯಾಯ ಕೇಳ್ತಿಯಾ? ನಾಚಿಕೆ ಆಗಲ್ವಾ ನಿನಗೆ

ಶಾಸಕ ಅರವಿಂದ ಲಿಂಬಾವಳಿಯಿಂದ ನಿಂದನೆಗೆ ಒಳಗಾಗಿದ್ದ ಮಹಿಳೆಯ ಮೇಲೆ ಬಿಬಿಎಂಪಿ ಎಂಜಿನಿಯರ್ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಮಹಿಳೆ ವಿರುದ್ಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ವರದಿಯಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ವಿಚಾರಕ್ಕೆ ಕ್ರಮಕೈಗೊಳ್ಳಲು ಹೋದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಮಹಿಳೆ ವಿರುದ್ಧ ಆರೋಪಿಸಲಾಗಿದೆ.

ಮನವಿ ಸ್ವೀಕರಿಸಿ ಏನು ಸಮಸ್ಯೆ ಎಂಬುದನ್ನು ತಿಳಿದುಕೊಂಡು ಮಾತನಾಡಬೇಕಿತ್ತು. ಮಹಿಳೆಯ ಜೊತೆ ಈ ರೀತಿಯ ವರ್ತನೆ ಎಷ್ಟು ಸರಿ? ದೂರು ನೀಡಿ ಹೆದರಿಸುವ ತಂತ್ರವನ್ನು ಶಾಸಕರು ಅನುಸರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *