ಮದ್ದೂರು: ತಾಲ್ಲೂಕಿನ ಹೊಸಗಾವಿ ಗ್ರಾಮ ಪಂಚಾಯಿತಿಗೆ ಖಾಯಂ ಪಿಡಿಒ ನೇಮಿಸಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಪಂಚಾಯಿತಿ ಕಛೇರಿ ಮುಂಭಾಗ ಪ್ರತಿಭಟನೆ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ ಆರ್ ರತ್ನಮ್ಮ ಅವರು ಮಾತನಾಡಿ, ನೂತನ ಗ್ರಾಮ ಪಂಚಾಯಿತಿ ಸದಸ್ಯರು ಆಯ್ಕೆಯಾಗಿ 2 ವರ್ಷ ಕಳೆದರೂ ನಮ್ಮ ಗ್ರಾಮ ಪಂಚಾಯಿತಿಗೆ ಖಾಯಂ ಪಿಡಿಒ ಅವರನ್ನು ಸರ್ಕಾರ ನೇಮಕ ಮಾಡುತ್ತಿಲ್ಲ. ಖಾಯಂ ಪಿಡಿಒ ಅವರನ್ನು ನೇಮಕ ಮಾಡದಿರುವುದರಿಂದ ಸಾರ್ವಜನಿಕ ಕೆಲಸಗಳು ಕುಂಠಿತವಾಗುತ್ತಿವೆ. ಸಮರ್ಪಕವಾಗಿ ಕೆಲಸ ಕಾರ್ಯಗಳು ಆಗುತ್ತಿಲ್ಲವೆಂದು ಸಾರ್ವಜನಿಕರು ನಮ್ಮ ಮೇಲೆ ಬೇಸರ ಮಾಡಿಕೊಂಡಿದ್ದಾರೆ. ಪಿಡಿಒ ಸುಮಲತಾ ಎಂಬುವವರನ್ನು ನಮ್ಮ ಪಂಚಾಯಿತಿಗೆ ಸರ್ಕಾರ ನಿಯೋಜಿಸಿ ಆದೇಶ ಮಾಡಿದೆ. ಆದರೆ ಹಿರಿಯ ಅಧಿಕಾರಿಗಳು ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಹೊಸಗಾವಿ ಗ್ರಾಮ ಪಂಚಾಯಿತಿಗೆ ಕರ್ತವ್ಯಕ್ಕೆ ಹಾಜರಾಗಲು ತಡೆ ಒಡ್ಡಿದ್ದಾರೆ. ಸಣ್ಣಪುಟ್ಟ ಕೆಲಸಗಳಿಗೂ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಅಲೆಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಅನುಷ್ಠಾನ ಮಾಡುವ ಅಧಿಕಾರಿಗಳ ಇಲ್ಲದಿದ್ದರೆ ನಾವೇನು ಕೆಲಸ ಮಾಡುವುದು. ಹೊಸಗಾವಿ ಗ್ರಾಮ ಪಂಚಾಯಿತಿಗೆ ಸೇರಿದ ಹಳ್ಳಿಗಳು ಅಭಿವೃದ್ಧಿಯಿಂದ ಕುಂಠಿತವಾಗಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಮತ್ತು ಸರಕಾರ ಗಮನಹರಿಸಿ ತಕ್ಷಣ ಖಾಯಂ ಪಿಡಿಒ ಅವರನ್ನು ನೇಮಿಸಬೇಕು. ಇಲ್ಲದಿದ್ದರೆ ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ ಎಸ್ ಗೌಡ, ಶೋಭಾ, ಸುನಂದಮ್ಮ, ಕಮಲಮ್ಮ, ಪುಟ್ಟಸ್ವಾಮಿ, ಸಂತೋಷ್, ಎಂ.ಎನ್. ಪುಟ್ಟರಾಜು ಸೇರಿದಂತೆ ಇತರರು ಇದ್ದರು.