ರಾಣೇಬೆನ್ನೂರ: ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಸತಿನಿಲಯಗಳ ಸಂಖ್ಯೆ ಹೆಚ್ಚಿಸಬೇಕು, ಹಾಗೂ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಎಸ್.ಎಫ್.ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಮಾತಾನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದರು ಕೂಡಾ ವಿದ್ಯಾರ್ಥಿ ಸಮುದಾಯ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ, ಹಾವೇರಿ ಜಿಲ್ಲಾ ಕೇಂದ್ರವಾಗಿ 25 ವರ್ಷಗಳು ಉರುಳಿದರೂ ಸಹ ಹಾವೇರಿ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ವಿದ್ಯಾರ್ಥಿ ಸಮುದಾಯ ನೂರಾರು ಸಮಸ್ಯೆಗಳನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಮೂಲ ಕಾರಣ ಇದುವರೆಗೂ ಇಲ್ಲಿ ಆಳ್ವಿಕೆ ಮಾಡಿದ ಸಚಿವರು, ಶಾಸಕರು, ಸಂಸದರು ಹಾಗೂ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದಾಗಿ ವಿದ್ಯಾರ್ಥಿ ಸಮುದಾಯಕ್ಕೆ ಅತ್ಯಂತ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಅವರನ್ನು ವಿದ್ಯಾಭ್ಯಾಸದಿಂದ ವಂಚಿತರಾಗಿ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯ ಶಾಸಕರಾಗಿ ರಾಜ್ಯದ ಮುಖ್ಯಮಂತ್ರಿಗಳಾಗಿ ಒಂದು ವರ್ಷ ಪೂರ್ಣಗೊಳಿಸಿದ್ದರು ಸಹ ಅನೇಕ ಸಮಸ್ಯೆಗಳ ಸುಳಿವಿನಲ್ಲಿ ವಿದ್ಯಾರ್ಥಿ ಸಮುದಾಯ ನರಳುತ್ತಿದೆ ಎಂದು ಆರೋಪಿಸಿದರು.
ರಾಣೇಬೆನ್ನೂರ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶ ದಿಂದ ವಿದ್ಯಾರ್ಥಿಗಳು ಉನ್ನತ ಅಭ್ಯಾಸ ಮಾಡುವ ಕನಸನ್ನು ಹೊತ್ತು ನಗರಕ್ಕೆ ಆಗಮಿಸುತ್ತಾರೆ ಒಂದೆಡೆ ಬಸ್ಸಿನ ಸಮಸ್ಯೆ ಹಾಗೂ ಹೆಚ್ಚಿನ ಅಭ್ಯಾಸಕ್ಕಾಗಿ ವಸತಿಗಾಗಿ ಸಾವಿರಾರು ಸಂಖ್ಯೆಯಲ್ಲಿ ವಸತಿ ನಿಲಯಗಳಿಗೆ ವಿದ್ಯಾರ್ಥಿಗಳು ಅರ್ಜಿ ಹಾಕಿದರೂ ಸಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುತ್ತಿಲ್ಲ. ಹಾಸ್ಟೆಲ್ ಸಿಗದಿರುವ ಕಾರಣ ಶಿಕ್ಷಣವನ್ನೇ ಮೊಟಕುಗೊಳಸುತ್ತಿದ್ದಾರೆ. ಅರ್ಜಿ ಹಾಕಿದ ಸಾವಿರಾರು ವಿದ್ಯಾರ್ಥಿಗಳ ಪೈಕಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಗೆ ಮಾತ್ರ ವಸತಿ ಸೌಲಭ್ಯಗಳು ಸಿಗುತ್ತಿವೆ.ಇದರಿಂದಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದರೆ ಉನ್ನತ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಆಗ್ರಹಿಸಿದರು.
ಎಸ್ಎಫ್ಐ ಹಲವಾರು ಹೋರಾಟದ ಭಾಗವಾಗಿ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದ ಸಂದರ್ಭದಲ್ಲಿ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿತ್ತು. ಆದರೆ ಪ್ರಸ್ತುತವಾಗಿ ಅರ್ಜಿ ಹಾಕುವ ಪ್ರತಿಯೊಬ್ಬರಿಗೂ ಹಾಸ್ಟೆಲ್ ಸೌಲಭ್ಯ ಕೂಡುವುದಾಗಿ ಸಚಿವರೆ ಹೇಳಿಕೆ ನೀಡುತ್ತಾರೆ ಆದರೆ, ಈ ಮಾತು ಸುಳ್ಳಾಗುತ್ತಿದೆ. ಈ ಆದೇಶ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಬಾಡಿಗೆ ಕಟ್ಟಡ ನಡೆಸಲು ಸಾಕಷ್ಟು ಅನುದಾನ ಇದ್ದರೂ ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿಗಳು ಬೇಜವಾಬ್ದಾರಿ ವರ್ತನೆಯಿಂದ ದಲಿತ ವಿದ್ಯಾರ್ಥಿಗಳು ವಸತಿ ಸೌಲಭ್ಯ ದಿಂದ ವಂಚಿತರಾಗುತ್ತಿದ್ದಾರೆ ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು, ಎಸ್ಎಫ್ಐ ಜಿಲ್ಲಾ ಮುಖಂಡರಾದ ಅರುಣ್ ಕಡಕೋಳ,ಎಸ್ಎಫ್ಐ ತಾಲ್ಲೂಕು ಕಾರ್ಯದರ್ಶಿ ಗುಡ್ಡಪ್ಪ ಮಡಿವಾಳರ, ಉಪಾಧ್ಯಕ್ಷ ಹೊನ್ನಪ್ಪ ಕುದುರಿಹಾಳ ವಿದ್ಯಾರ್ಥಿಗಳಾದ ಅನಿತಾ ಲಮಾಣಿ, ಅಂಬಿಕಾ ಎಸ್ , ದೀಪಾ ಡಿ ಆರ್, ಕವಿತಾ ಎಚ್ , ಜ್ಯೋತಿ ಡಿ , ಭೀಮವ್ವ, ಮೈಲಾರಿ, ರಾಜೇಶ್ ಎಮ್ ಆರ್, ಪುಟ್ಟರಾಜು, ಲೋಕೇಶ್, ದಿಲೀಪ್, ವಿಜಯಕುಮಾರ, ಗುಡ್ಡೆಶ, ಬೀರಪ್ಪ, ಮಾಲತೇಶ ಸೇರಿದಂತೆ ಅನೇಕರು ವಹಿಸಿಕೊಂಡಿದ್ದರು.