“ಕಾರ್ಯಾಂಗದ ಜವಾಬುದಾರಿಕೆಯನ್ನು ನ್ಯಾಯಾಂಗವು ಖಚಿತಪಡಿಸಬೇಕಾಗಿದೆ”
ನವದೆಹಲಿ: ಬೇಹುಗಾರಿಕಾ ತಂತ್ರಾಂಶ ಪೆಗಸಸ್ ಬಳಕೆಯ ಬಗ್ಗೆ ತನಿಖೆ ನಡೆಸಲು ದೇಶದ ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಸಮಿತಿಯೊಂದಿಗೆ ಕೇಂದ್ರ ಸರಕಾರ ಸಹಕರಿಸಿಲ್ಲ ಎಂದು ಸಮಿತಿಯ ವರದಿ ಹೇಳಿರುವುದಾಗಿ ಸ್ವತಃ ದೇಶದ ಮುಖ್ಯ ನ್ಯಾಯಾಧೀಶರು ಹೇಳಿದ್ದಾರೆ.. “ನೀವು ಇಲ್ಲಿ ಯಾವ ನಿಲುವನ್ನು ತಳೆದಿರೋ ಅಲ್ಲಿಯೂ ಅದೇ ನಿಲುವು ತಳೆದಿದ್ದೀರಿ “ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
ಕೇಂದ್ರ ಸರ್ಕಾರ ಈ ರೀತಿ ನಮ್ಮದೇ ನಾಗರಿಕರ ವಿರುದ್ಧ ಮಿಲಿಟರಿ ದರ್ಜೆಯ ಬೇಹುಗಾರಿಕೆ ತಂತ್ರಾಂಶ ಬಳಕೆಯ ಬಗ್ಗೆ ನ್ಯಾಯಾಂಗದ ಮುಂದೆ ಮತ್ತು ದೇಶಕ್ಕೆ ಜವಾಬುದಾರಿಯಾಗಲಿ ನಿರಾಕರಿಸಿರುವುದು ಅತ್ಯಂತ ಖಂಡನಾರ್ಹ ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಹೇಳಿದೆ. ಈ ಬೇಹುಗಾರಿಕೆ ತಂತ್ರಾಂಶದ ಬಳಕೆಯ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಸರ್ಕಾರವು “ಸಹಕಾರಿಯಾಗಿರಲಿಲ್ಲ” ಎಂಬುದು ಸ್ವೀಕಾರಾರ್ಹವಲ್ಲ ಎಂದು ಅದು ಹೇಳಿದೆ.
“ರಾಷ್ಟ್ರೀಯ ಭದ್ರತೆ” ಯನ್ನು ಉಲ್ಲೇಖಿಸಿ ನಾಗರಿಕರ ಮೂಲಭೂತ ಹಕ್ಕುಗಳು, ವಿಶೇಷವಾಗಿ ಖಾಸಗಿತ್ವದ ಹಕ್ಕನ್ನು ವಿವೇಚನಾರಹಿತ ರೀತಿಯಲ್ಲಿ ಉಲ್ಲಂಘಿಸಲಾಗದು ಎಂದು ಸುಪ್ರೀಂ ಕೋರ್ಟ ಈ ಮೊದಲೇ ವಿಚಾರಣೆಯ ವೇಳೆಯಲ್ಲಿ ಟಿಪ್ಪಣಿ ಮಾಡಿತ್ತು ಎಂಬುದನ್ನು ನೆನಪಿಸಿರುವ ಪೊಲಿಟ್ ಬ್ಯುರೊ ಸರ್ಕಾರವು ತನ್ನ ಇಂತಹ ಅಸಹಕಾರದ ಮೂಲಕ ಉನ್ನತ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವವರು, ವಿರೋಧ ಪಕ್ಷದ ನಾಯಕರು, ಪತ್ರಕರ್ತರು ಮುಂತಾದವರ ವಿರುದ್ಧ ಈ ಬೇಹುಗಾರಿಕೆ ತಂತ್ರಾಂಶವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.ಇದು ಪ್ರಜಾಪ್ರಭುತ್ವದ ಗುಣಮಟ್ಟ ಮತ್ತು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ ಎಂದು ಅದು ಹೇಳಿದೆ.
ಪೆಗಾಸಸ್ ಬಳಕೆಯ ಆರೋಪಗಳು ಬಂದಾಗ, ಅನೇಕ ದೇಶಗಳು ಗಂಭೀರ ತನಿಖೆಯನ್ನು ಪ್ರಾರಂಭಿಸಿದವು. ಫ್ರಾನ್ಸ್, ಮೆಕ್ಸಿಕೋ, ಸ್ಪೇನ್ ಮತ್ತು ಇತರರು ಈ ತನಿಖೆಗಳನ್ನು ಗಂಭೀರವಾಗಿ ಅನುಸರಿಸುತ್ತಿದ್ದಾರೆ. ಭಾರತ, ಹಂಗೇರಿ ಮತ್ತು ಸೌದಿ ಅರೇಬಿಯಾದಂತಹ ದೇಶಗಳ ಸರ್ಕಾರಗಳು ಈ ಬೇಹುಗಾರಿಕೆ ತಂತ್ರಾಂಶವನ್ನು ಖರೀದಿಸಿವೆ ಎಂದು ಇಸ್ರೇಲಿ ತನಿಖೆಗಳು ಬಹಿರಂಗಪಡಿಸಿವೆ. ಇದನ್ನು ಗಮನಿಸಿದರೆ, ಕೇಂದ್ರ ಸರ್ಕಾರವು ತನ್ನ ಕೈ ಶುದ್ಧವಾಗಿದೆ ಎಂದು ತೋರಿಸಬೇಕಾಗುತ್ತದೆ ಮತ್ತು ಉತ್ತರದಾಯಿಯಾಗಬೇಕಾಗಿದೆ. ನ್ಯಾಯಾಂಗ ಅಂತಹ ಹೊಣೆಗಾರಿಕೆಯನ್ನು ಖಚಿತಪಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.