ಬೆಂಗಳೂರು : ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವ ರಾಜ್ಯ ಸರಕಾರದ ನೀತಿಯನ್ನು ಖಂಡಿಸಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದ ರೈತ ನಾಯಕರನ್ನು ಬಿಜೆಪಿ ಸರಕಾರ ಸ್ವಾತಂತ್ರ್ಯ ದಿನವೇ ಬಂಧಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ದೇವನಹಳ್ಳಿಯ ವಿಮಾನ ನಿಲ್ದಾಣದ ಸುತ್ತ ಮುತ್ತಲಿನ 1700 ಎಕರೆಗೂ ಹೆಚ್ಚು ಬೆಲೆ ಬಾಳುವ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುವ ಸರಕಾರ ನೀತಿಯ ವಿರುದ್ಧ 135 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರು. ಜನಪರ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ನಾಯಕತ್ವ ನೀಡಿದ್ದ, ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಸಮಿತಿ ಅಧ್ಯಕ್ಷ ಜಿಸಿ ಬಯ್ಯಾರೆಡ್ಡಿಯರನ್ನು ಇಂದು ಬೆಳಗ್ಗೆ 4 ಗಂಟೆ ಸಮಯದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಉಮೇಶ್ ಮತ್ತು ಅವರ ಸಿಬ್ಬಂದಿಗಳು ಬಯ್ಯಾರೆಡ್ಡಿಯವ ಮನೆಗೆ ಆಗಮಿಸಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಆರ್ ಕೆ ಹೆಗಡೆ ನಗರದ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ನಂತರ ಬಯ್ಯಾರೆಡ್ಡಿ ಹಾಗೂ ಸಂಘಟನೆಯ ಪ್ರಮುಖರನ್ನು ಧೂಳು ತುಂಬಿದ ಗೋಡೌನಿನಲ್ಲಿರಿಸಿದ್ದಾರೆ.
ಕಳೆದ 135 ದಿನಗಳಿಂದ ದೇವನಹಳ್ಳಿ ತಾಲ್ಲೂಕಿನ ಅತ್ಯಂತ ಫಲವತ್ತಾದ ಕೃಷಿ ಭೂಮಿ ಭೂ ಸ್ವಾಧೀನವನ್ನು ವಿರೋಧಿಸಿ ನಿರಂತರ ಧರಣಿ ಸತ್ಯಾಗ್ರಹ ನಡೆಯುತ್ತಿದ್ದರೂ ಸರ್ಕಾರ ರೈತರ ಆಹವಾಲು ಕೇಳದೇ ಬಲವಂತದ ಭೂ ಸ್ವಾಧೀನ ದ ತನ್ನ ಅಕ್ರಮವನ್ನು ಮುಂದುವರೆಸಿತ್ತು
ಈ ಧೋರಣೆ ಖಂಡಿಸಿ ಹೋರಾಟ ನಿರತ ರೈತರು ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯ ಈ ದಿನ, ಒಂದೆಡೆ ಕೈಯ್ಯಲ್ಲಿ ರಾಷ್ಟ್ರ ದ್ವಜ ಹಿಡಿದು ಅಮೃತ ಮಹೋತ್ಸವ ಆಚರಿಸುತ್ತಾ ಮತ್ತೊಂದೆಡೆ ರಾಜ್ಯ ಸರಕಾರದ ರೈತ ವಿರೋಧಿ ನಿಲುಮೆಯಾದ ಬಲವಂತದ ಅನಗತ್ಯ ಭೂ ಸ್ವಾಧೀನವನ್ನು ವಿರೋಧಿಸಲು ಬಾಯಿಗೆ ಕಪ್ಪು ಬಟ್ಟೆ ಧರಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಈ ಹೋರಾಟ ದಮನಿಸಲು ಬಂಧಿಸಿದ್ದಾರೆ ಎಂದು ಜನಪರ ಸಂಘಟನೆಗಳು ಆರೋಪಿಸಿವೆ.
ಪ್ರಾಂತ ರೈತ ಸಂಘ ಖಂಡನೆ : ಸಂಘಟನೆಯ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿಯವರನ್ನು ರಾತ್ರೋ ರಾತ್ರಿ ಬಂಧಿಸಿರುವುದು ಖಂಡನೀಯ, ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ.
ಈ ಕುರಿತು ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಪತ್ರಿಕಾ ಹೇಳಿಕೆ ನೀಡಿದ್ದು, ಬಯ್ಯಾರೆಡ್ಡಿಯವರನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಿಡದೇ ಅಕ್ರಮವಾಗಿ ಬಂಧನದಲ್ಲಿರಿಸಿರುವುದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆಂಬ ಸುಳ್ಳು ಆರೋಪದ ಮೇಲೆ ಬಂಧಿಸಿ ಹೋರಾಟ ನಿರತರನ್ನು ಬೆದರಿಸಲು ಯತ್ನಿಸಿದ್ದಾರೆ. ಇಂತಹ ಬಂಧನ ಹಾಗೂ ಬೆದರಿಕೆಗಳಿಂದ ರೈತರನ್ನು ಹೋರಾಟದಿಂದ ಹಿಂದೆ ಸರಿಯುವಂತೆ ಮಾಡಲು ಸಾಧ್ಯವಿಲ್ಲ ಎಂದು ಸರಕಾರವನ್ನು ಎಚ್ಚರಿಸಿದ್ದಾರೆ.
ಈ ಪ್ರತಿಭಟನೆಯು ದೇಶದ ಅಮೃತ ಮಹೋತ್ಸವದ ವಿರುದ್ದವಲ್ಲವೆಂದು ಮತ್ತು ರಾಜ್ಯ ಸರಕಾರದ ಬಲವಂತದ ಭೂ ಸ್ವಾಧೀನದ ವಿರುದ್ಧವೆಂದು ಪೋಲೀಸ್ ಇಲಾಖೆಗೂ ಗೊತ್ತಿದ್ದರೂ, ರಾತ್ರೊ ರಾತ್ರಿ ಬಂಧನಕ್ಕೆ ಮುಂದಾಗಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಬಸವರಾಜ ಆರೋಪಿಸಿದ್ದಾರೆ.
ಈ ಕೂಡಲೇ ಜಿ.ಸಿ. ಬಯ್ಯಾರೆಡ್ಡಿಯವರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು, ಮತ್ತು ಬಲವಂತದ ಫಲವತ್ತಾದ ಜಮೀನುಗಳ ಭೂ ಸ್ವಾಧೀನವನ್ನು ಕೈಬಿಡುವಂತೆ ರಾಜ್ಯ ಸರಕಾರವನ್ನು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ.