ಹುಬ್ಬಳ್ಳಿ: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ದೇಶದೆಲ್ಲೆಡೆ ರಾಷ್ಟ್ರೀಯ ಧ್ವಜ ಹಾರಿಸುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ರಾಷ್ಟ್ರೀಯ ಧ್ವಜದ ಚಿತ್ರವಾಗಿ ಬದಲಾಯಿಸಲು ಮನವಿ ಮಾಡಿದೆ. ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇದನ್ನು ಪಾಲಿಸದ್ದನ್ನು ಕಂಡ ಕಾಂಗ್ರೆಸ್ ಮುಖಂಡರು ಪಾದಯಾತ್ರೆ ಮೂಲಕ ಆರ್‌ಎಸ್‍ಎಸ್ ಹುಬ್ಬಳ್ಳಿಯ ಹೆಗ್ಗೇರಿಯಲ್ಲಿರುವ ಆರ್ ಎಸ್ ಎಸ್ ಕೇಶವ ಕುಂಜ ಕಚೇರಿಗೆ ಭೇಟಿ ನೀಡಿ ರಾಷ್ಟ್ರೀಯ ಧ್ವಜ ವಿತರಣೆ ಮಾಡಿದ ಘಟನೆ ನಡೆದಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸಲಾಗುವುದಿಲ್ಲ ಎಂಬ ಆರೋಪಗಳ ಮಧ್ಯೆಯೇ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರಧ್ವಜ ನೀಡಿದರೂ, ಸ್ವೀಕರಿಸಲು ನಿರಾಕರಿಸಿದರು ಎನ್ನಲಾಗಿದೆ. ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಬಳಿಕ ಮುಜುಗರಕ್ಕೊಳಗಾದ ಆರ್‌ಎಸ್‌ಎಸ್ ಕಾರ್ಯಕರ್ತರು ಅನಿವಾರ್ಯವಾಗಿ ರಾಷ್ಟ್ರಧ್ವಜವನ್ನು ಸ್ವೀಕರಿಸಿದ್ದಾರೆ.
ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿ ಮಠ ಅವರ ನೇತೃತ್ವದಲ್ಲಿ ಖಾದಿಯಿಂದ ತಯಾರಿಸಿದ ತ್ರಿವರ್ಣ ರಾಷ್ಟ್ರಧ್ವಜ ಹಸ್ತಾಂತರಿಸಲಾಯಿತು.
ಪ್ರಾರಂಭದಲ್ಲಿ ನಮಗೆ ಬೇಡ ನಮ್ಮ ಬಳಿ ರಾಷ್ಟ್ರಧ್ವಜ ಇದೆ ಎಂದು ಸಂಘದ ಪ್ರಮುಖರು ಕಲೆ ಬಿದ್ದಿರುವ ರಾಷ್ಟ್ರ ಧ್ವಜವನ್ನು ತಂದು ಕಾಂಗ್ರೆಸ್ಸಿಗರಿಗೆ ತೋರಿಸಿದರು. ಇದಕ್ಕೆ ತಕರಾರು ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಕಲೆ ಬಿದ್ದಿರುವ ಧ್ವಜವನ್ನು ಧ್ವಜಾರೋಹಣ ಮಾಡಬಾರದು ಎಂದರು. ಆಗ ಆರ್‌ಎಸ್‍ಎಸ್‍ನವರು ನಾವು ಈ ಧ್ವಜವನ್ನು ತೊಳೆದು ಧ್ವಜಾರೋಹಣ ಮಾಡುತ್ತೇವೆ ಎಂದು ಹೇಳಿದರು. ಆಗ ಮತ್ತೆ ಕಾಂಗ್ರೆಸ್‍ನವರು ಧ್ವಜದ ಮೇಲೆ ಕಲೆ ಬಿದ್ದರೆ ಧ್ವಜವನ್ನು ತೊಳೆಯಬಾರದು ಎಂದು ಧ್ವಜ ಸಂಹಿತೆ ಹೇಳುತ್ತದೆ ಎಂದು ಹೇಳಿದ ಕಾಂಗ್ರೆಸ್‍ನವರು ರಾಷ್ಟ್ರಧ್ವಜವನ್ನು ನೀಡಿದರು. ಕೆಲ ಕಾಲ ವಾಗ್ವಾದದ ನಂತರ ಅಮರನಾಥ್ ಅವರು ತ್ರಿವರ್ಣ ರಾಷ್ಟ್ರಧ್ವಜವನ್ನು ಸ್ವೀಕರಿಸಿದರು.
ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿ ಮಠ ಮಾತನಾಡಿ, ಕೇಂದ್ರ ಸರ್ಕಾರದ ಆದೇಶದಂತೆ ಕಳೆದ ಏಳು ದಿನಗಳಿಂದ ಭಾರತೀಯರೆಲ್ಲರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತ್ರಿವರ್ಣ ಧ್ವಜದ ಭಾವಚಿತ್ರವನ್ನು ಪ್ರದರ್ಶಿಸಬೇಕೆಂದು ಕರೆ ನೀಡಲಾಗಿದೆ. ಆದರೆ ಇದುವರೆಗೂ ಆರ್‌ಎಸ್‌ಎಸ್ ನವರು ಭಗವಧ್ವಜವೇ ಇಟ್ಟುಕೊಂಡಿದ್ದಾರೆ. ಸಾವರ್ಕರ್, ಗೋಳ್ವಾಲ್ಕರ್ ಯಾವಾಗಲೂ ತ್ರಿವರ್ಣ ಧ್ವಜದ ವಿರುದ್ಧ ಮಾತನಾಡುತ್ತಿದ್ದರು. ಅದೇ ರೀತಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 52 ವರ್ಷಗಳ ಕಾಲ ಆರ್‌ಎಸ್‌ಎಸ್ ತ್ರಿವರ್ಣ ರಾಷ್ಟ್ರ ಧ್ವಜಾರೋಹಣ ಮಾಡಿರಲಿಲ್ಲ ಎಂದು ಆರೋಪಿಸಿದರು.
ಹೂವಪ್ಪ ದಾಯಗೋಡಿ, ಬಸವರಾಜ ಮಲಕಾರಿ, ಮುಹಮ್ಮದ್ ಶರೀಫ್ ಗರಗದ, ವಿರೇಶ್ ಜಂಜುನವರ, ಕಿರಣ ಹಿರೇಮಠ, ಶಿವುಕುಮಾರ ಹಿರೇಮಠ,ಬಸವರಾಜ ಮ್ಯಾಗೇಡಿ, ಮಲ್ಲಣ್ಣ ಮುತ್ತಗಿ, ಸಂತೋಷ್ ಮುದ್ದಿ, ಬಾಳಮ್ಮ ಜಂಗಿನವರ, ಪುಷ್ಪಾ ಪಾಟೀಲ, ಸಂತೋಷ ನಾಯಕ, ವಿಶಾಲ ಸಿಂಹಾಸನ, ನಾಗರಾಜ ಓಬ್ಬಂಳಮಪಲ್ಲೆ, ಸುನಿಲ ಮರಾಠೆ ಮತ್ತಿತರರು ಇದ್ದರು.