ಪಾಟ್ನಾ: ಬಿಹಾರದಲ್ಲಿ ಬಿರುಸುಗೊಂಡಿರುವ ರಾಜಕೀಯ ಚಟುವಟಿಕೆಯಲ್ಲಿ ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಪಾಲ ಫಾಗು ಚೌಹಾಣ್ ಅವರ ಭೇಟಿಗೆ ಸಮಯ ಕೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಳ್ಳಲು ಮುಂದಾಗಿರುವ ನಿತೀಶ್ ಕುಮಾರ್ ಅವರು ಇಂದು ಅಪರಾಹ್ನ 4 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಲಿದ್ದು, ಈ ಮಧ್ಯೆ ಇಂದು ಬೆಳಗ್ಗೆ ಸಭೆ ನಡೆಸಿದ ಜೆಡಿಯುನ ಎಲ್ಲಾ ಶಾಸಕರು ಮತ್ತು ಸಂಸದರು ಮುಖ್ಯಮಂತ್ರಿಗಳು ಅವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ತಾವೆಲ್ಲರೂ ಬದ್ಧವಾಗಿದ್ದೇವೆ ಎಂದು ತಿಳಿಸಿದ್ದಾರೆ.
ಜೆಡಿಯು ಸಂಸದರು ಮತ್ತು ಶಾಸಕರ ಸಭೆ ಮುಕ್ತಾಯವಾಗಿದ್ದು, ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿದುಕೊಳ್ಳಲು ಪಕ್ಷವು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಜೆಡಿಯು ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರೋಧ ಪಕ್ಷಗಳ ಜೊತೆ ಸೇರಿ ಮಹಾಘಟಬಂಧನ್ ರಚನೆ ಮಾಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ತೇಜಸ್ವಿ ಯಾದವ್ ಅವರೊಂದಿಗೆ ರಾಜ್ಯಪಾಲರ ಭೇಟಿಗೆ ನಿತೀಶ್ ಕುಮಾರ್ ಸಮಯಾವಕಾಶ ಕೇಳಿರುವುದರಿಂದ ಈ ವದಂತಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.
ಆಡಳಿತರೂಢ ಜೆಡಿಯು ಸೇರಿದ ಸಭೆಯಲ್ಲಿ ಬಿಜೆಪಿಯೊಂದಿಗಿನ ಸಖ್ಯವನ್ನು ತೊರೆಯಲು ನಿರ್ಧರಿಸಿದೆ ಎಂಬ ಮಾಹಿತಿ ಸಿಕ್ಕಿದೆ. ರಾಜಧಾನಿಯಲ್ಲಿ ರಾಜಕೀಯ ಚಟುವಟಿಕೆ ಹಿನ್ನೆಲೆಯಲ್ಲಿ ಪಾಟ್ನಾದಲ್ಲಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಒಂದುವೇಳೆ ನಿತೀಶ್ ಕುಮಾರ್ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡರೆ ಅವರಿಗೆ ನಮ್ಮ ಬೆಂಬಲವಿದೆ ಎಂದು ಬಿಹಾರದ ಏಕೈಕ ದೊಡ್ಡ ಪಕ್ಷವಾಗಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ತೇಜಸ್ವಿ ಯಾದವ್ ಹೇಳಿದ್ದರು. ಬಿಹಾರದಲ್ಲಿ ಮಹಾರಾಷ್ಟ್ರ ಮಾದರಿಯನ್ನು ಪುನರಾವರ್ತಿಸಲು ಅಮಿತ್ ಶಾ ಬಯಸುತ್ತಿದ್ದಾರೆ ಎಂದು ನಿತೀಶ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಒಂದೆಡೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆಗಿನ ಶಿವಸೇನೆಯ ಮೈತ್ರಿಯನ್ನು ಒಡೆದು ಹೊಸ ಸರ್ಕಾರ ರಚಿಸಿರುವ ಬಿಜೆಪಿಗೆ ಬಿಹಾರದಲ್ಲಿ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ.
ಇದರ ನಡುವೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಾಯಕರು ಮತ್ತು ಶಾಸಕರು ಆರ್‌ಜೆಡಿ ನಾಯಕಿ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.