ಲಕ್ನೋ: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಬಿಜೆಪಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಂದು ಸಾಮಾಜಿಕ ಮಾಧ್ಯಮದಲ್ಲಿ ಗುರುತಿಸಿಕೊಂಡಿರುವ ಶ್ರೀಕಾಂತ್ ತ್ಯಾಗಿ ಮಹಿಳೆಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆಗಿದ್ದು, ಈ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಮೀರತ್ನಲ್ಲಿ ಶ್ರೀಕಾಂತ್ ತ್ಯಾಗಿಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ಉತ್ತರ ಪ್ರದೇಶ ಪೊಲೀಸರು, ಇತ್ತೀಚಿನ ವೈರಲ್ ವೀಡಿಯೊದಲ್ಲಿ, ಶ್ರೀಕಾಂತ್ ತ್ಯಾಗಿ ನೋಯ್ಡಾದ ಸೆಕ್ಟರ್ 93 ರ ಗ್ರಾಂಡ್ ಓಮ್ಯಾಕ್ಸ್ನಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮತ್ತು ನಿಂದನೆ ಮಾಡಿದ ಪ್ರಕರಣಕ್ಕಾಗಿ ಇದೀಗ ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಹಿಳೆ ವಿರುದ್ಧ ನಿಂದನೆ ಮತ್ತು ಹಲ್ಲೆ ಪ್ರಕರಣದ ಬಳಿಕ ಪರಾರಿಯಾಗಿದ್ದ. ಶ್ರೀಕಾಂತ್ ತ್ಯಾಗಿ ಪರ ವಕೀಲರು ಗ್ರೇಟರ್ ನೋಯ್ಡಾ ನ್ಯಾಯಾಲಯದಲ್ಲಿ ಶರಣಾಗತಿ ಅರ್ಜಿಯನ್ನು ಸಲ್ಲಿಸಿದ್ದರು. ಶ್ರೀಕಾಂತ್ ತ್ಯಾಗಿ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂ. ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದರು. ಇದಾದ ಬಳಿಕ ತ್ಯಾಗಿಯನ್ನು ಬಂಧಿಸಲಾಗಿದೆ.
ಬಿಜೆಪಿ ಹೆಸರಲ್ಲಿ ಜನರಿಗೆ ಧಮ್ಕಿ ಹಾಕುತ್ತಿದ್ದ ಶ್ರೀಕಾಂತ್, ನಿನ್ನೆಯಷ್ಟೇ ತ್ಯಾಗಿ ಅಕ್ರಮ ಕಟ್ಟಡವನ್ನು ನೋಯ್ಡಾ ಪ್ರಾಧಿಕಾರ ತಂಡ ಕಟ್ಟಡ ನೆಲಸಮಗೊಳಿಸಿದೆ. ನಿನ್ನೆ ಪೊಲೀಸ್ ಸಿಬ್ಬಂದಿಯೊಂದಿಗೆ ನೋಯ್ಡಾದ ಸೆಕ್ಟರ್ -93 ಬಿ ನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಹೌಸಿಂಗ್ ಸೊಸೈಟಿಯಲ್ಲಿ ಅವರ ಮನೆಯ ಹೊರಗೆ ಅಕ್ರಮ ನಿರ್ಮಾಣ ಮಾಡಿದ್ದ ಮನೆಯನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿದ ನಂತರ ಆತನ ಬಂಧನವಾಗಿದೆ.
ಇತ್ತೀಚೆಗೆಷ್ಟೇ ಶ್ರೀಕಾಂತ್ ತ್ಯಾಗಿ ಪತ್ನಿಯನ್ನು ಮತ್ತೆ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದರು. ಮಂಗಳವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಪೊಲೀಸರು ಶ್ರೀಕಾಂತ್ ಅವರ ಫ್ಲಾಟ್ನಿಂದ ಪತ್ನಿಯನ್ನು ಕರೆದುಕೊಂಡು ಬಂದಿದ್ದಾರೆ. ನೋಯ್ಡಾ ಪೊಲೀಸರು ಶುಕ್ರವಾರ ಆಕೆಯನ್ನು ವಶಕ್ಕೆ ಪಡೆದು 24 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದರು. ಪೊಲೀಸರು ಶ್ರೀಕಾಂತ್ ಸಂಬಂಧಿಕರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳವಾರ ಸಂಜೆ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಗೆ ಪ್ರವೇಶಕ್ಕೆ ಅನುಮತಿ ನೀಡದೆ ಪ್ರವೇಶಿಸಿದ ಮತ್ತು ಶ್ರೀಕಾಂತ್ ತ್ಯಾಗಿಯಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯ ವಿಳಾಸವನ್ನು ಕೇಳಿದ್ದಕ್ಕಾಗಿ ಪೊಲೀಸರು ತ್ಯಾಗಿಯ ಆರು ಬೆಂಬಲಿಗರನ್ನು ಬಂಧಿಸಿದ್ದಾರೆ.