ಚಿತ್ರದುರ್ಗ: ಮೇ ತಿಂಗಳಲ್ಲಿ ಕೆಜಿ ಟೊಮೊಟೊಗೆ 100 ರೂ.ಗೆ ಮಾರಾಟವಾಗುತ್ತಿತ್ತು, ಆದರೆ ಇದೀಗ ಭಾರೀ ಕುಸಿತ ಕಂಡಿದ್ದು, 15 ಕೆಜಿ ಇರುವ ಟೊಮೊಟೊ ಬಾಕ್ಸ್ ಅನ್ನು 10 ರುಪಾಯಿಗೂ ತೆಗೆದುಕೊಳ್ಳಲು ವ್ಯಾಪಾರಸ್ಥರು ಸಿದ್ಧರಿಲ್ಲ.
ಇದರಿಂದ ಬೇಸರಗೊಂಡ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ ರೈತರು ತಮ್ಮ ಉತ್ಪನ್ನಗಳನ್ನು ರಸ್ತೆಗೆ ಸುರಿದು ನಾಶಪಡಿಸಿದ್ದಾರೆ. ರೈತರು ಟೊಮೆಟೊವನ್ನು ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆ ಮೇಲೆ ಸುರಿದು ಟ್ರಾಕ್ಟರ್ಗಳನ್ನು ಚಲಾಯಿಸಿದರು.
ಇತ್ತೀಚೆಗಷ್ಟೇ ಟೊಮೊಟೊ ದಾಖಲೆಯ ಬೆಲೆಯಲ್ಲಿ ಮಾರಾಟವಾಗಿದ್ದರಿಂದ ಸಂತಸಗೊಂಡಿದ್ದ ಕಲ್ಲಹಳ್ಳಿ, ತೊರೆಕೋಲಮ್ಮನಹಳ್ಳಿ, ನಾಯಕನಹಟ್ಟಿ ಮತ್ತಿತರ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಿತ್ತನೆ ಮಾಡಿದ್ದರು. ಆದರೆ ಮಾರುಕಟ್ಟೆಯಲ್ಲಿ ಉತ್ತಮ ಇಳುವರಿ ಬಂದಿರುವುದರಿಂದ ಬೆಲೆ ಕುಸಿತ ಕಂಡಿದೆ. ಅಲ್ಲದೆ, ಈ ಪ್ರದೇಶದಲ್ಲಿ ಸಂಸ್ಕರಣಾ ಘಟಕಗಳ ಕೊರತೆಯೂ ಟೊಮೆಟೊ ಬೆಳೆಗಾರರ ಮೇಲೆ ಪರಿಣಾಮ ಬೀರಿದ್ದರಿಂದ ಬೆಲೆ ನಷ್ಟ ಉಂಟಾಗಿ ರೈತರು ಆತಂಕಗೊಂಡಿದ್ದಾರೆ.
ನಾಲ್ಕು ಎಕರೆಯಲ್ಲಿ ಟೊಮೊಟೊ ಬೆಳೆದು ಉತ್ತಮ ಇಳುವರಿ ಬಂದಿದೆ. ಶುಕ್ರವಾರ ನಾನು 150 ಬಾಕ್ಸ್ ಕೊಯ್ಲು ಮಾಡಿದ್ದೆ, ಆದರೆ ವ್ಯಾಪಾರಿಗಳು ಬಾಕ್ಸ್ ಗೆ 10 ರೂಪಾಯಿಗೂ ತೆಗೆದುಕೊಳ್ಳಲು ಬರುತ್ತಿಲ್ಲ, ಹೀಗಾಗಿ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ ಪಕ್ಕದಲ್ಲಿ ಟೊಮೊಟೊ ಹಾಕಲು ನಿರ್ಧರಿಸಿದ್ದೇನೆ. ನನ್ನ ಹೂಡಿಕೆಯನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಈಗ ನಾನು 4 ಲಕ್ಷ ರೂಪಾಯಿ ಸಾಲವನ್ನು ಹೊಂದಿದ್ದೇನೆ ಎಂದು ಕಲ್ಲಹಳ್ಳಿಯ ರೈತ ಮಾರುತೇಶ್ ಹೇಳಿದ್ದಾರೆ.
ಚಳ್ಳಕೆರೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವಿರೂಪಾಕ್ಷಪ್ಪ ಮಾತನಾಡಿ, ‘ಉತ್ತಮ ಗುಣಮಟ್ಟದ ಟೊಮೊಟೊ ಬಾಕ್ಸ್ಗೆ 60-70 ರೂ.ಗೆ ಮಾರಾಟವಾಗಿತ್ತು. ಅಂದರೆ ಕೇವಲ ರೂ. ಪ್ರತಿ ಕೆಜಿಗೆ 1 ರೂ. ಇದ್ದು ಉತ್ಪಾದನಾ ವೆಚ್ಚವನ್ನು ಸಹ ಪೂರೈಸಲು ಸಾಧ್ಯವಾಗುತ್ತಿಲ್ಲʼ ಎಂದು ತಿಳಿಸಿದ್ದಾರೆ.
ಚಿಕ್ಕಮ್ಮನಹಳ್ಳಿ ಮಧ್ಯ ಕರ್ನಾಟಕದಲ್ಲಿ ಅತಿ ದೊಡ್ಡ ಟೊಮೊಟೊ ಮಾರುಕಟ್ಟೆಯನ್ನು ಹೊಂದಿದೆ. ಕೂಡ್ಲಿಗಿ, ಬಳ್ಳಾರಿ, ಮೊಳಕಾಲ್ಮುರು, ಚಿತ್ರದುರ್ಗ, ಹಿರಿಯೂರು, ರಾಯದುರ್ಗ, ಸಿರಾ, ಚಳ್ಳಕೆರೆ ಮತ್ತಿತರೆಡೆ ಬೆಳೆಯುವ ಟೊಮೊಟೊ ಇಲ್ಲಿಗೆ ತರಲಾಗುತ್ತದೆ. ಬೆಂಗಳೂರು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಇಲ್ಲಿಂದ ಕಳುಹಿಸಲಾಗುತ್ತದೆ.
ಲಕ್ಷ್ಮೇಶ್ವರ
ಟೊಮೊಟೊ ಬೆಲೆ ದಿಢೀರ್ ಕುಸಿತದ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರದ ಹೊಸ ನಿಲ್ದಾಣದ ಎದುರು ಸಹ ಬೆಳೆಗಾರರು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು. 20ರಿಂದ 30 ಕಿಲೋ ಟೊಮೊಟೊ ತುಂಬಿದ ಪ್ಲಾಸ್ಟಿಕ್ ಬಾಕ್ಸಿಗೆ ಗುರುವಾರ ಕೇವಲ ರೂ. 20ರಿಂದ 30ಕ್ಕೆ ಮಾರಾಟವಾಗಿದೆ. ಮಂಗಳವಾರದಿಂದ ಬೆಳೆ ಇಳಿಮುಖಗಿದ್ದು, ಬೆಲೆ ಚೇತರಿಕೆಯಾಗದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಬೆಳೆಗಾರರು ರಸ್ತೆಗೆ ಟೊಮೊಟೊ ಸುರಿದು ಪ್ರತಿಭಟನೆ ನಡೆಸಿದರು.