ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆ, ಹಣದುಬ್ಬರ, ಜಿಎಸ್ಟಿ ಹೆಚ್ಚಳ ಹಾಗೂ ನಿರುದ್ಯೋಗಗಳ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಸಂಸತ್ ಭವನದ ಎದುರು ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಪ್ರಜಾಪ್ರಭುತ್ವದ ನಾಶಕ್ಕೆ ದೇಶವನ್ನು ಕೊಂಡೊಯ್ಯಲಾಗುತ್ತಿದೆ. ಒಂದೊಂದೇ ಇಟ್ಟಿಗೆಯಿಂದ ಭಾರತವನ್ನು ಕಟ್ಟುವ ಕೆಲಸ ಅಂದಾಜು ಶತಮಾನದ ಹಿಂದೆ ಆರಂಭವಾಗಿತ್ತು. ಅದನ್ನು ನಿಮ್ಮ ಕಣ್ಣೆದುರೇ ಕೆಡವಲಾಗುತ್ತಿದೆ. ಸರ್ವಾಧಿಕಾರವನ್ನು ಸ್ಥಾಪಿಸುವಂತಹ ಕೆಲಸಗಳು ನಡೆಯುತ್ತಿವೆ. ಅಂಥವರ ವಿರುದ್ಧ ಯಾರಾದರೂ ಪ್ರತಿಭಟಿಸಿದರೆ, ಅವರ ಮೇಲೆ ನಿಷ್ಕಾರುಣವಾಗಿ ದಾಳಿ ನಡೆಸುವುದು, ಜೈಲಿಗೆ ಹಾಕುವುದು, ಬಂಧಿಸುವುದು ಮತ್ತು ಥಳಿಸುವುದು ನಡೆಯುತ್ತಿದೆ” ಎಂದು ಆರೋಪಿಸಿದರು.
“ವಿರೋಧ ಪಕ್ಷಗಳು ಅಭಿಪ್ರಾಯಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಅದು ಜನರ ಸಮಸ್ಯೆಗಳನ್ನು ಕೇಳಲು ಬಯಸುತ್ತಿಲ್ಲ. ಬೆಲೆ ಏರಿಕೆ, ನಿರುದ್ಯೋಗ ಮತ್ತು ಸಮಾಜದಲ್ಲಿನ ಹಿಂಸಾಚಾರದಂತಹ ವಿಷಯಗಳ ಬಗ್ಗೆ ಧ್ವನಿ ಎತ್ತಲಾಗುತ್ತಿದೆ. ಸರ್ಕಾರ ದೇಶದ 4-5 ಜನರ ಹಿತಾಸಕ್ತಿ ಕಾಪಾಡುವ ಸಲುವಾಗಿ ನಡೆಯುತ್ತಿದೆ ಮತ್ತು ಇಬ್ಬರು ವ್ಯಕ್ತಿಗಳು ನಡೆಸುತ್ತಿರುವ 2- 3 ಬೃಹತ್ ಉದ್ಯಮಗಳ ಹಿತಾಸಕ್ತಿಗಾಗಿ ಈ ಸರ್ವಾಧಿಕಾರ ನಡೆಯುತ್ತಿದೆ” ಎಂದರು.
“ಭಾರತದಲ್ಲಿ ಈಗ ಪ್ರಜಾಪ್ರಭುತ್ವ ಉಳಿದಿಲ್ಲ. ನಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಪ್ರತಿಭಟನೆ ನಡೆಸಲು ಅನುಮತಿ ಕೊಡುತ್ತಿಲ್ಲ. ನಮ್ಮನ್ನು ರಾಜ್ಯಸಭೆ ಮತ್ತು ಲೋಕಸಭೆಗಳಿಂದ ಅಮಾನತು ಮಾಡಲಾಗುತ್ತಿದೆ” ಎಂದು ಕಿಡಿಕಾರಿದರು.
ಹಿಟ್ಲರ್ ನೊಂದಿಗೆ ಪ್ರಧಾನಿ ಮೋದಿಯನ್ನು ಹೋಲಿಸಿದ ರಾಹುಲ್ ಗಾಂಧಿ ʻʻಸರ್ವಾಧಿಕಾರಿ ಹಿಟ್ಲರ್ ಹೇಗೆ ಚುನಾವಣೆಯಲ್ಲಿ ಗೆಲ್ಲಲು ಇಡೀ ಜರ್ಮನಿಯ ಎಲ್ಲ ಸಂಸ್ಥೆಗಳ ಮೇಲೆಯೂ ನಿಯಂತ್ರಣ ಹೊಂದಿದ್ದ. ನನಗೆ ಇಡೀ ವ್ಯವಸ್ಥೆಯನ್ನು ಕೊಡಿ. ಹೇಗೆ ಚುನಾವಣೆಗಳಲ್ಲಿ ಗೆಲ್ಲಲಾಗಿದೆ ಎಂಬುದನ್ನು ತೋರಿಸಿದ್ದ. ಅದೇ ರೀತಿಯ ಸರ್ವಾಧಿಕಾರಿ ಪ್ರವೃತ್ತಿಗಳನ್ನು ಮೋದಿಯೂ ಅನುಸರಿಸುತ್ತಿದ್ದಾರೆ ” ಎಂದು ಆರೋಪಿಸಿದರು.
ಕಪ್ಪುಬಟ್ಟೆ ಧರಿಸಿ ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕರು ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸಂಸತ್ ಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಉತ್ತರಾಖಂಡ್ ಮಾಜಿ ಸಿಎಂ ಹರೀಶ್ ರಾವತ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಬಸ್ಸಿನಲ್ಲಿ ಕರೆದೊಯ್ದಿದ್ದಾರೆ.
ಸಂಸತ್ ನಿಂದ ರಾಷ್ಟ್ರಪತಿ ಭವನದವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿ, ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್ ಸಂಸದರು ಮತ್ತು ಕಾರ್ಯಕರ್ತರು ನಿರ್ಧರಿಸಿದ್ದರು. ಆದರೆ ದೆಹಲಿ ಪೊಲೀಸರು ರಾಷ್ಟ್ರರಾಜಧಾನಿಯಲ್ಲಿ ನಿಷೇಧಾಜ್ಞೆ ಆದೇಶ ಜಾರಿಯಲ್ಲಿರುವುದರಿಂದ ಪ್ರತಿಭಟನೆ ನಡೆಸಲು ಅನುಮತಿ ನೀಡಲಿಲ್ಲ ಎಂದು ವರದಿ ಹೇಳಿದೆ.
ಪ್ರತಿಭಟನೆಯನ್ನು ಮುಂದುವರೆಸಿದ ಕಾಂಗ್ರೆಸ್ ನ ಸಂಸದರು ರಾಷ್ಟ್ರಪತಿ ಭವನದತ್ತ ಬೆಲೆ ಏರಿಕೆ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ತೆರಳುತ್ತಿದ್ದ ವೇಳೆ ವಿಜಯ್ ಚೌಕ್ ಬಳಿ ತಡೆದಿದ್ದಾರೆ ಎಂದು ವರದಿಯಾಗಿದೆ.