ರಾಜ್ಯದಾದ್ಯಂತ ಭಾರಿ ಮಳೆ ಸಾಧ್ಯತೆ: 19 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌

  • ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 40-50 ಕಿ.ಮೀ. ತಲುವುವ ಸಾಧ್ಯತೆ
  • ದಕ್ಷಿಣ ಕನ್ನಡ ವ್ಯಾಪಕ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ (ಆ.2) ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, 19 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್‌ ನೀಡಿದೆ.

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ರಾಯಚೂರು ಮತ್ತು ವಿಜಯಪುರ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಕೋಲಾರ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಿಗೆ ಯೆಲ್ಲೊಅಲರ್ಟ್‌ ನೀಡಲಾಗಿದೆ.

ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 40-50 ಕಿ.ಮೀ. ತಲುವುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ಸೋಮವಾರ ತುಮಕೂರು ಜಿಲ್ಲೆಯ ವೈ.ಎನ್‌.ಹೊಸಕೋಟೆ, ಕೊಡಗು ಜಿಲ್ಲೆಯ ಸಂಪಾಜೆಯಲ್ಲಿ ತಲಾ 11, ಕೊಡಗು ಜಿಲ್ಲೆಯ ಭಾಗಮಂಡಲ 9, ನಾಪೋಕ್ಲು8, ಗದಗ ಜಿಲ್ಲೆಯ ಬೆಳ್ಳಟ್ಟಿ ಹಾಗೂ ಕೋಲಾರ ಜಿಲ್ಲೆಯ ಮುಳಬಾಗಲಿನಲ್ಲಿ ತಲಾ 7 ಸೆಂ.ಮೀ. ಮಳೆಯಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿಆ.2ರಂದು ಯೆಲ್ಲೊಹಾಗೂ ನಂತರ ನಾಲ್ಕು ದಿನಗಳಲ್ಲಿಆರೆಂಜ್‌ ಅಲರ್ಟ್‌ ಘೋಷಿಸಿದ್ದು, ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿಆ.2ರಿಂದ ಎರಡು ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡದಂತೆ ಯಾತ್ರಾರ್ಥಿಗಳಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮುಂದುವರಿದ ಮಳೆ :  ಬೆಂಗಳೂರು ನಗರದಲ್ಲಿ ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಹಲವು ಪ್ರದೇಶಗಳು ಜಲಾವೃಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲದೆ ರಸ್ತೆಯಲ್ಲಿ ನೀರು ತುಂಬಿಕೊಂಡ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ವಿಧಾನಸೌಧ, ಕೆ.ಆರ್.ವೃತ್ತ, ಶಿವಾಜಿನಗರ, ಲಾಲ್ ಬಾಗ್ ರಸ್ತೆ, ಕೆಂಗಲ್ ಹನುಮಂತಯ್ಯ ರಸ್ತೆ, ಜಯನಗರ, ಜೆ.ಪಿ.ನಗರ, ಮೆಜೆಸ್ಟಿಕ್, ಸಿಟಿ ಮಾರುಕಟ್ಟೆ, ಹೆಬ್ಬಾಳ, ಯಶವಂತಪುರ, ಪೀಣ್ಯ, ವಿಜಯನಗರ ಹಾಗೂ ಎಚ್ ಎಎಲ್ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

Donate Janashakthi Media

Leave a Reply

Your email address will not be published. Required fields are marked *