ಪ್ರವೀಣ್ ನೆಟ್ಟಾರ್ ಹತ್ಯೆ : ಬಿಜೆಪಿ ಸಂಸದ, ಶಾಸಕರಿಗೆ ಧಿಕ್ಕಾರದ ಬಿಸಿ ಸ್ವಪಕ್ಷದ ಕಾರ್ಯಕರ್ತರಿಂದಲೇ ಘೇರಾವ್

ಪುತ್ತೂರು: ಹತ್ಯೆಯಾಗಿರುವ ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರ್ ಅವರ ಮೃತದೇಹದ ಅಂತಿಮ ದರ್ಶನದ ವೇಳೆ ಬೆಳ್ಳಾರೆ ಜಂಕ್ಷನಿಗೆ ಆಗಮಿಸಿದ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಹಿಂದುತ್ವ ಸಂಘಟನೆಯ ಕಾರ್ಯಕರ್ತರು, ಹಾಗೂ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಧಿಕ್ಕಾರ ಕೂಗಿರುವ ಘಟನೆ ನಡೆದಿದೆ.

ನಳಿನ್ ಕುಮಾರ್ ಕಟೀಲ್, ಸಚಿವ ಸುನೀಲ್‌ ಕುಮಾರ್ ಮತ್ತು ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಬೆಳ್ಳಾರೆಗೆ ಬಂದಿಳಿಯುತ್ತಿದ್ದಂತೆಯೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದುತ್ವ  ಸಂಘಟನೆಗಳ ಕಾರ್ಯಕರ್ತರು ಉದ್ವಿಗ್ನಗೊಂಡು ನಳಿನ್ ಕುಮಾರ್ ಕಟೀಲ್ ಕಾರಿನ ಮೇಲೆ ಮುಗಿಬಿದ್ದರು. ಕಾರನ್ನು ಪಲ್ಟಿ ಮಾಡಲೂ ಕೆಲವರು ಯತ್ನಿಸಿ, ಟೈರ್​ನಿಂದ ಗಾಳಿ ಹೊರಬಿಟ್ಟರು. ಪರಿಸ್ಥಿತಿ ಕೈಮೀರುವುದು ಮನಗಂಡ ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪು ಚೆದುರಿಸಿದರು. ಪೊಲೀಸ್ ಭದ್ರತೆಯಲ್ಲಿಯೇ ನಳಿನ್ ಕುಮಾರ್ ಕಟೀಲ್ ಸ್ಥಳದಿಂದ ಹೊರನಡೆದರು.

ಪೊಲೀಸರೊಂದಿಗೆ ಕಾರ್ಯಕರ್ತರು ವಾಗ್ವಾದಕ್ಕಿಳಿದರು. ‘ಬೇಕೇ ಬೇಕು, ನ್ಯಾಯ ಬೇಕು’ ಎಂಬ ಘೋಷಣೆ ಮೊಳಗಿಸಿದರು. ಬೆಳ್ಳಾರೆ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಬಿಗಿ ಬಂದೋಬಸ್ತ್​ ಹಾಕಲಾಗಿದೆ. ಅಂಗಡಿಗಳನ್ನು ಮುಚ್ಚಿಸುತ್ತಿರುವ ಪೊಲೀಸರು ಗುಂಪು ಸೇರಿದ್ದ ಕಾರ್ಯಕರ್ತರನ್ನು ಲಾಠಿ ಬೀಸಿ ಚೆದುರಿಸುತ್ತಿದ್ದಾರೆ.

ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರು ಹತ್ಯೆಯಿಂದ ಜನ ರೊಚ್ಚಿಗೆದ್ದು ಹಿಂಸಾಚಾರಕ್ಕಿಳಿದಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪುತ್ತೂರು ಡಿಪೋಗೆ ಸೇರಿದ ಬಸ್​​  ಪುತ್ತೂರಿನಿಂದ ಸ್ಟೇಟ್ ಬ್ಯಾಂಕ್ ಕಡೆ ಹೋಗುತ್ತಿದ್ದಾಗ ಬೊಳ್ವಾರು ಬಳಿ ಅದರ ಮೇಲೆ ಕಲ್ಲುತೂರಾಟ ನಡೆಸಲಾಗಿದೆ.

 

Donate Janashakthi Media

Leave a Reply

Your email address will not be published. Required fields are marked *