– ಭಾವನ ಟಿ
ಗರತಿ ನಾನು…
ಕಾದಿರುವೆ ಅವನ ದಾರಿ…
ಪ್ರತಿದಿನವೂ ನನಗೆ ಮೊದಲ ರಾತ್ರಿಯೇ!
ಒಂದು ಇರುಳಿನಲ್ಲಿ ಅವನ ತೊಳತೆಕ್ಕೆಯಲ್ಲಿದ್ದರೆ..
ಇನ್ನೊಂದು ಬೆಳದಿಂಗಳಿನಲ್ಲಿ ಇವನ ಚಂದ್ರಮುಖಿಯಾಗಿರುವೆ…
ಮಗದೊಂದು ಅಂಧಕಾರದ ದಿನದಂದು ಇನ್ನೋರ್ವನ,
ದೇವರೆಂದು ದೇವದಾಸಿಯಾಗಿ ಪೂಜಿಸುತ್ತಿರುವೆ..!!
ಒಬ್ಬ ನನ್ನ ದುಪ್ಪಟವ ಸರಿಸಿದ್ದರೆ,
ಇನ್ನೊಬ್ಬ ನನ್ನ ಅಧರಗಳಿಂದ ರಕ್ತವನ್ನೇ ಹೀರಿಬಿಟ್ಟಿದ್ದ!!
ಅವನ್ಯಾವನೋ ನನ್ನ ಬಿಗಿಯಾದ ರವಿಕೆಯ ಸಡಿಲಿಸಿದ್ದರೆ,
ಇವನ್ಯಾವನೋ ನನ್ನ ಎದೆಯ ಬಗೆದು ಅಲ್ಲಿರುವ ಮುಗ್ದ ಮನದ ಹತ್ಯೆಗೈದಿದ್ದ!!
ಆ ಕರಿಮುಖದವ ನನ್ನೆಲ್ಲಾ ಕನಸುಗಳನ್ನು ಕಗ್ಗತ್ತಲಿನಲ್ಲಿ ಬಚ್ಚಿಟ್ಟಿದ್ದರೆ,
ಈ ಬಿಳಿಮೊಗದವ ಮಂಜಿನಲ್ಲಿ ನನ್ನ ಆಸೆಗಳ ಕಟ್ಟಿಟ್ಟು ಹೆಪ್ಪುಗಟ್ಟಿಸಿ ಬಿಟ್ಟಿದ್ದ!!
ನನಗೆ ನಾನು ಗರತಿ…
ಸಮಾಜಕ್ಕೆ ನಾನೇ ಸೂಳೆ!
ನನ್ನೀ ಹೃದಯ ಅಪ್ಪಟ ಪತಿವ್ರತೆ…
ನನ್ನೀ ದೇಹ ಹಲವು ಗಂಡು ಮೃಗಗಳಿಗೆ ಆಹಾರವಾಗಿ ವ್ಯಭಿಚಾರಿಣಿ!
ನಾನೇ ಗರತಿ…
ನಾನೇ ಸೂಳೆ…