ಕೆ.ಪಿ.ಸುರೇಶ
ಕಾಂಗ್ರೆಸ್ಸನ್ನು ಹಳಿದು ಆಡಳಿತ ಸೂತ್ರ ಹಿಡಿದ ಭಾಜಪದ ಅಪಸವ್ಯಗಳು ಬಹಿರಂಗವಾಗುತ್ತಿದ್ದರೆ ಆರೆಸ್ಸೆಸ್ ಏನು ಮಾಡುತ್ತಿರುತ್ತೆ?
ಭ್ರಷ್ಟಾಚಾರದ, ಅನೈತಿಕ ನಡೆಗಳ ಪ್ರಸಂಗಗಳು ಬಹಿರಂಗವಾಗುತ್ತಿದ್ದಂತೆ. ಆರೆಸ್ಸೆಸ್ ಅಪ್ಸೆಟ್ ಆಗಿದೆ ಎನ್ನುವ ಪುಕಾರು ಹಬ್ಬುತ್ತೆ. ಓಹೋ, ಇವರಿಗೆ ನೈತಿಕವಾಗಿ ಅಸಮಾಧಾನಿದೆ ಎಂದು ಆರೆಸ್ಸೆಸ್ ಅಭಿಮಾನಿಗಳು ಬಿಡಿ, ಪ್ರಗತಿಪರರೂ ಭಾವಿಸಿ, ಈಗ ಒಂದು ವಿಕೆಟ್ ಬೀಳುತ್ತದೆ ಎಂದು ಕಾಯುತ್ತೇವೆ.
ಆದರೆ, ಈ ಪ್ರಕರಣ ಅಂಚಿಗೆ ಸರಿದಾಗ ಆರೆಸ್ಸೆಸ್ ಅಸಮಾಧಾನಗೊಂಡದ್ದು ಏನಾಯಿತು ಎಂದು ಕೇಳಿದವರಿಲ್ಲ! ಆರೆಸ್ಸೆಸ್ ಅವರನ್ನು ಮತ್ತೆ ಈ ಭ್ರಷ್ಟಾಚಾರ ಮುಂದುವರಿಸಲು ಬಿಡುತ್ತೆ.
ಈಗಲ್ಲ, ೨೦೦೮ರ ಸಂದರ್ಭದಲ್ಲೂ ಬಳ್ಳಾರಿಯ ಅಮೂಲ್ಯ ಅದಿರು ದೋಚಿ ಲಕ್ಷಾಂತರ ಕೋಟಿ ಯ ಕಾಸು ರೆಡ್ಡಿ ರಿಪಬ್ಲಿಕ್ ಮಾಡುತ್ತಿದ್ದಾಗಲೂ ಆರೆಸ್ಸೆಸ್ ತೆಪ್ಪಗಿತ್ತು. ಅಷ್ಟೇಕೆ ಕಲ್ಲಡ್ಕ ಭಟ್ಟರ ಯವಾರ ಕಂಡು ಬೇಸತ್ತ ಸ್ವತಃ ಅವರ ಭಾವನಾಗಿದ್ದ ಭಾಜಪದ ಅಂತಃಸ್ಸಾಕ್ಷಿಯಂತಿದ್ದ ನಾಯಕ ಉರಿಮಜಲು ರಾಮಭಟ್ಟರು ಭಾಜಪದ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಇದೇ ಬಳ್ಳಾರಿ ಪಡೆಯ ನೂರಾರು ಟಾಟಾ ಸುಮೋ, ಗಾಡಿಗಳು ಪ್ರಚಾರಕ್ಕೆ ಬಂದು ನೀರಿನಂತೆ ಹಣ ಚೆಲ್ಲಿ ರಾಮ ಭಟ್ಟರನ್ನು ಸೋಲಿಸಲಾಗಿತ್ತು. ಸ್ವತಃ ಸದಾನಂದ ಗೌಡ ತಮ್ಮ ರಾಜಕೀಯ ಗುರುವನ್ನುಸೋಲಿಸಲು ಇನ್ನಿಲ್ಲದಂತೆ ದುಡಿದಿದ್ದರು.
ಆರೆಸ್ಸೆಸ್ಸಿಗೆ ನೈತಿಕ ಪ್ರಜ್ಞೆಯ ಮುಳ್ಳು ತಾಗಿರಲಿಲ್ಲ!
ಬಳಿಕ ಒಬ್ಬೊಬ್ಬರೇ ಅಸಹ್ಯ ಪ್ರಕರಣಗಳಲ್ಲಿ ತಲ್ಲೀನರಾದಾಗಲೂ ಆರೆಸ್ಸೆಸ್ ಮಾತಾಡಲಿಲ್ಲ. ಕಂಡಕಂಡಲ್ಲಿ ಆಸ್ತಿ ಮಾಡಿಕೊಂಡ ಪ್ರಕರಣಗಳೆದ್ದಾಗಲೂ ಆರೆಸ್ಸೆಸ್ ಮಾತಾಡಲಿಲ್ಲ.
ಇದೇ ಜನಾರ್ದನ ರೆಡ್ಡಿಯವರ ಅದಿರು ಬಾಚಿದ ಹಣದ ಸುಮಾರು ೧೫ ಲಕ್ಷ ದೇಣಿಗೆಯನ್ನು ಕಲ್ಲಡ್ಕ ಭಟ್ಟರು ಸ್ವೀಕರಿಸುವಾಗಲೂ ಇದು ಜನ್ಮಭೂಮಿಯನ್ನು ಹಿರಿದ ಭ್ರಷ್ಟ ಕಾಸು ಅಂತ ಆರೆಸ್ಸೆಸ್ಸಿಗೆ ಅನ್ನಿಸಲಿಲ್ಲ.
ಭ್ರಷ್ಟಾಚಾರದ ವಿರುದ್ಧ ಲೋಕಪಾಲ್ ಬೇಡಿಕೆ ಬಂದು ಅದರಲ್ಲಿ ಆರೆಸ್ಸೆಸ್ ಪೂರ್ಣ ಭಾಗಿಯಾಗಿತ್ತು. ಆದರೆ ಕಳೆದ ಎಂಟು ವರ್ಷಗಳಲ್ಲಿ ಆರೆಸ್ಸೆಸ್ ಒಮ್ಮೆಯೂ ಇದರ ಬಗ್ಗೆ ಮಾತೆತ್ತಲಿಲ್ಲ.
ಪಾರದರ್ಶಕತೆಯ ಬಗ್ಗೆ ಆರೆಸ್ಸೆಸ್ ಮಾತಾಡುವುದಿಲ್ಲ. ಯಾಕೆಂದರೆ ತನ್ನ ಹಣ ಸಂಗ್ರಹವೇ ಪರಮ ರಹಸ್ಯವಷ್ಟೇ. ಆದ್ದರಿಂದಲೇ ಪಿಎಂ ಕೇರ್ ಫಂಡ್ ಮಾಹಿತಿ ಹಕ್ಕಿನಿಂದಾಚೆ ಎಂದು ಸರಕಾರ ಹೇಳಿದಾಗ ಆರೆಸ್ಸೆಸ್ ತೆಪ್ಪಗಿತ್ತು.
ಕೋವಿಡ್ ಕಾಲದ ಆರೋಗ್ಯ ಸೇವೆಯ ಬ್ರಹ್ಮಾಂಡ ಭ್ರಷ್ಟಾಚಾರವನ್ನು ರಾಜ್ಯ ಕಂಡಾಗಲೂ ಆರೆಸ್ಸೆಸ್ ಮಾತಾಡಲಿಲ್ಲ.
ಈಗ ಶೇ. ೪೦ರ ಕಮಿಷನ್ ಬಗ್ಗೆ ಗುತ್ತಿಗೆದಾರರೇ ರೋಸಿ ಹೋಗಿ ಪ್ರಧಾನಿ ಕಛೇರಿಗೆ ದೂರು ನೀಡಿದಾಗಲೂ ಆರೆಸ್ಸೆಸ್ ಮಿಸುಕಲಿಲ್ಲ. ಬಾಯ್ದೆರೆ ಭರವಸೆಯಲ್ಲಿ ಕೆಲಸ ಮಾಡಿ ದಿಕ್ಕೆಟ್ಟ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಾಗಲೂ ಆರೆಸ್ಸೆಸ್ ಉಸಿರೆತ್ತಲಿಲ್ಲ.
ನೇಮಕಾತಿ ಭ್ರಷ್ಟಾಚಾರ ಕರಾಳ ಕೋರೆಹಲ್ಲು ಕಿಸಿದಾಗಲೂ ಆರೆಸ್ಸೆಸ್ ಮಾತಾಡಲಿಲ್ಲ.
ಈಗ ಜಿಎಸ್‌ಟಿ ಸುಲಿಗೆಯನ್ನು ಹಾಲು-ಮೊಸರಿಗೆ ವಿಸ್ತರಿಸಿದಾಗಲೂ ಆರೆಸ್ಸೆಸ್ ಉಸಿರೆತ್ತಿಲ್ಲ. ಅದೇನೋ ದೂರದ ನೆಂಟ ಸತ್ತರೆ ಅಯ್ಯೋ ಅನ್ನು ತರ ದತ್ತಾತ್ರೇಯ ಹೊಸಬಾಳೆ ಒಂದು ನಿಟ್ಟುಸಿರಿನ ಹೇಳಿಕೆ ಕೊಟ್ಟು ಕೂತಿದ್ದಾರೆ.
ಯಾಕೆಂದರೆ ಈ ಕೆಲಸ ಮಾಡಿದವರು ಯಾರೂ ಮುಸ್ಲಿಮರಲ್ಲ!!! ತಮ್ಮವರು ಮಾಡಿದಾಗ ಆರೆಸ್ಸೆಸ್ಸಿಗೆ ಏನೂ ಅನ್ನಿಸುವುದಿಲ್ಲ. ಶೇ. ೮೫ರಷ್ಟಿರುವ ಬಡ ಹಿಂದೂಗಳನ್ನು ಸುಲಿಗೆ ಮಾಡಿದಾಗಲೂ ಆರೆಸ್ಸೆಸ್ಸಿಗೆ ಏನೂ ಅನ್ನಿಸುವುದಿಲ್ಲ.
ರಾಷ್ಟ್ರೋತ್ಥಾನ ಸಂಸ್ಥೆಗೆ ಹತ್ತಾರು ಎಕರೆ ಭೂಮಿಯನ್ನು ದುಗ್ಗಾಣಿ ಬೆಲೆಗೆ ಪಡೆಯಲೂ ಹೇಸುವುದಿಲ್ಲ. ಅರ್ಥಾತ್ ಆರೆಸ್ಸೆಸ್ ತನ್ನ ನೈತಿಕಪ್ರಜ್ಞೆಯನ್ನು ಎಂದೋ ಹೂತು ಹಾಕಿದೆ.
ಭ್ರಷ್ಟಾಚಾರ ಮುಗಿಲು ಮುಟ್ಟಿದಾಗ ತನ್ನ ಅಜೆಂಡಾ ಸಾಧಿತವಾದರೆ ಸಾಕು ಎಂದು ತೀರ್ಮಾನಿಸಿದೆ. ಆಪರೇಶನ್ ಕಮಲಾದಂಥಾ ಹೇಯ ಅನೈತಿಕ ಕೆಲಸ ಮಾಡುವಾಗ ಆರೆಸ್ಸೆಸ್ ಮೌನಂ ಸಮ್ಮತಿ ಲಕ್ಷಣಂ ಎಂದು ಸುಮ್ಮನಿರುತ್ತದೆ.
ಎಂದೂ ಹಣಕಾಸಿನ ಲೆಕ್ಕ ಒಪ್ಪಿಸದ ಆರೆಸ್ಸೆಸ್ ಸರಕಾರದ ಸಚಿವರು ಮೇಯುವುದಕ್ಕೆ ತಲೆ ಆಡಿಸದೇ ಇನ್ನೇನು ಮಾಡಲು ಸಾಧ್ಯ?
ತನಗೂ ಭಾಜಪಕ್ಕೂ ಸಂಬಂಧವಿಲ್ಲ ಎಂದು ಹೇಳಿದರೂ ಭಾಜಪವನ್ನು ನಿಯಂತ್ರಿಸಲು ತನ್ನ ಪ್ರಚಾರಕನನ್ನು ಅಲ್ಲಿ ಕೂರಿಸುತ್ತದೆ. ಪರೋಕ್ಷವಾಗಿ ಭಾಜಪ ಸರಕಾರದ ಎಲ್ಲಾ ನಡಾವಳಿಗಳ ನಿಯಂತ್ರಣ ಇಟ್ಟುಕೊಳ್ಳುತ್ತದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗಿಯಾಗದ ಆರೆಸ್ಸೆಸ್ ಸ್ವದೇಶೀ ಜಾಗರಣ ಮಂಚ್ ಇತ್ಯಾದಿಯನ್ನು ಹುಟ್ಟುಹಾಕುತ್ತದೆ. ಆದರೆ ಚೀನಾದಿಂದ ಲಕ್ಷಾಂತರ ಕೋಟಿ ಆಮದಿಗೆ ಉಸಿರೆತ್ತುವುದಿಲ್ಲ. ಮೋದಿಗೆ ಧಮಕಿ ಹಾಕುವುದಿಲ್ಲ.
ರೈತರು ಆತ್ಮಹತ್ಯೆಮಾಡಿಕೊಂಡರೆ ಅದಕ್ಕೇನೂ ಅನ್ನಿಸುವುದಿಲ್ಲ.
ಕಾಂಗ್ರೆಸ್ ಸರಕಾರ ಇದ್ದಾಗ ಪ್ರವಾಹ ಬಂದರೆ ಚೆಡ್ಡಿಹಾಕಿಕೊಂಡು ಪರಿಹಾರ ಕೆಲಸ ಫೋಟೋ ಹೊಡೆದು ಕೂರುತ್ತಿದ್ದ ಆರೆಸ್ಸೆಸ್ ರಾಜ್ಯದ ಭೀಕರ ನೆರೆಗೆ ಮನೆ ಮಠ ಕಳಕೊಂಡವರ ಬಗ್ಗೆ ನಿಷ್ಕಾಳಜಿ ತೋರುವ ತನ್ನದೇ ಸರಕಾರದ ಬಗ್ಗೆ ಸಿಟ್ಟಾಗುವುದಿಲ್ಲ.
ಶಾಲೆಯ ಕೊಠಡಿ ನಿರ್ಮಿಸದೇ ಇದ್ದಾಗ ತೆಪ್ಪಗಿರುತ್ತದೆ. ನೂರಾರು ಹಳ್ಳಿಗಳಲ್ಲಿರುವ ಕನ್ನಡ ಶಾಲೆಗಳನ್ನು ಸ್ಥಳಾಂತರದ ನೆಪದಲ್ಲಿ ಮುಚ್ಚುವಾಗ ಮಾತಾಡುವುದಿಲ್ಲ. ಆದರೆ ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಕೈಯಾಡಿಸುತ್ತಾ ಕೂರುತ್ತದೆ.
ಆರೆಸ್ಸೆಸ್ ಎಂಬ ಮಹಾನ್ ಸಂಘಟನೆಗೆ ಹಿಂದೂ ಹೆಸರಿನಲ್ಲಿ ಆಡಳಿತ ಸೂತ್ರ ಹಿಡಿದು ಅದನ್ನು ಖಾಯಂ ಆಗಿ ಉಳಸಿಕೊಳ್ಳುಬೇಕಾದ ಖರ್ಚು ವೆಚ್ಚವನ್ನು ಸಂಗ್ರಹಿಸುವುದಷ್ಟೇ ಮುಖ್ಯ. ಉಳಿದ ರಾಷ್ಟ್ರ ಭಕ್ತಿ, ಸಂಸ್ಕೃತಿ, ಸಂಸ್ಕಾರಗಳೆಲ್ಲಾ ಗೋಡೆಗಂಟಿಸುವ ಪೋಸ್ಟರ್ ಅಷ್ಟೇ.