ಮೇಕೆದಾಟು ಆಣೆಕಟ್ಟು ನಿರ್ಮಾಣ ಯೋಜನೆ ವಿಚಾರ; ಜುಲೈ 26ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ನವದೆಹಲಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಯ ಕುರಿತು ಸುಪ್ರೀಂಕೋರ್ಟ್ ಜುಲೈ 26ಕ್ಕೆ ವಿಚಾರಣೆ ಮುಂದೂಡಿದೆ. ಮೇಕೆದಾಟು ಆಣೆಕಟ್ಟು ಸಮಗ್ರ ಯೋಜನಾ ವರದಿ (ಡಿಪಿಆರ್) ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಚರ್ಚೆ ನಡೆಸಕೂಡದು, ಈ ಬಗ್ಗೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಅರ್ಜಿಯನ್ನು ಸಲ್ಲಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎ.ಎಂ. ಕಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ, ಜುಲೈ 26ರಂದು ವಿಸ್ತೃತವಾಗಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಅಲ್ಲದೇ, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನೋಟಿಸು ಜಾರಿಗೊಳಿಸಿದೆ.

ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಉಳಿದಿರುವುದರಿಂದ ಜುಲೈ 22ರಂದು ನಿಗದಿಯಾದ ಸಭೆಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಡಿಪಿಆರ್ ಬಗ್ಗೆ ಚರ್ಚಿಸಲ್ಲ, ಚರ್ಚೆ ಮುಂದೂಡಲು ಮನವಿ ಮಾಡುತ್ತೇವೆ ಎಂದು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ಪರ ಹಾಜರಿದ್ದ ವಕೀಲರು ಕೋರ್ಟ್‍ಗೆ ತಿಳಿಸಿದರು. ಇದಕ್ಕೆ ಕೋರ್ಟ್ ಸಮ್ಮತಿ ಸೂಚಿಸಿತು.

ಮೇಕೆದಾಟು ನದಿಗೆ ಆಣೆಕಟ್ಟು ಕಟ್ಟವ ಕರ್ನಾಟಕ ಸರ್ಕಾರದ ಯೋಜಿತ ಯೋಜನೆಯ ಡಿಪಿಆರ್ ಸಲ್ಲಿಸಿದ್ದು, ಈ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಲು ಸಮಿತಿಗೆ ಮನವಿ ಮಾಡಿತ್ತು. ಈ ಬಗ್ಗೆ ಚರ್ಚೆಗೆ ಸಮಿತಿಯೂ ಕೂಡಾ ಒಪ್ಪಿಗೆ ಸೂಚಿಸಿತ್ತು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ತಮಿಳುನಾಡು ಸರ್ಕಾರ, ಮೇಕೆದಾಟು ಆಣೆಕಟ್ಟು ಯೋಜನೆ ವಿರುದ್ಧ ಮೂಲ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ಬಾಕಿ ಇದೆ. ಈ ಹಂತದಲ್ಲಿ ಸಭೆಯಲ್ಲಿ ಡಿಪಿಆರ್ ಬಗ್ಗೆ ಚರ್ಚೆ ಮಾಡಬಾರದು, ಈ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚನೆ ನೀಡುವಂತೆ ಅರ್ಜಿ ಸಲ್ಲಿಸಿತ್ತು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ತಮಿಳುನಾಡು ಮೇಕೆದಾಟು ಯೋಜನೆಗೆ ತಡೆ ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದನ್ನು ಖಂಡಿಸಿದರು. ಕೇಂದ್ರಕ್ಕೆ ಸೂಚನೆ ನೀಡುವಂತೆ ಅರ್ಜಿ ಸಲ್ಲಿಸಿರುವುದು ಸರಿಯಲ್ಲ. ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಕೊಟ್ಟಿತ್ತು. ನೋಟಿಸ್​ಗೆ ನಾವು ಸಮರ್ಥವಾದ ಉತ್ತರ ಕೊಟ್ಟಿದ್ದೇವೆ. ಸುಪ್ರೀಂಕೋರ್ಟ್ ಆದೇಶದ ಅನ್ವಯ ಪ್ರಾಧಿಕಾರ ರಚಿಸಲಾಗಿದೆ. ಕಾವೇರಿ ನದಿ ನೀರು ಹಂಚಿಕೆಗೆ ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದರು.

ಮೇಕೆದಾಟು ಯೋಜನೆ ಸಂಬಂಧ ಈಗಾಗಲೇ 16 ರಿಂದ 17 ಸಭೆಗಳು ನಡೆದಿವೆ.  ಈಗಾಗಲೇ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹಾಗೂ ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭೇಟಿ ಮಾಡಿದ್ದಾರೆ. ಈ ವೇಳೆ ಮುಂದಿನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ವಿಷಯದ ಬಗ್ಗೆ ಚರ್ಚೆ ಮಾಡಿ ಒಪ್ಪಿಗೆ ನೀಡಿ ಎಂದು ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *