ರೇವಣ್ಣ ದುರ್ವರ್ತನೆ ಖಂಡಿಸಿ ಸಿಐಟಿಯು ಪ್ರತಿಭಟನೆ ಬಹಿರಂಗ ಕ್ಷಮೆ ಕೇಳಲು ಒತ್ತಾಯ

ಹಾಸನ: ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಹೊಳೆನರಸೀಪುರದಲ್ಲಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆರ ಮೇಲೆ ದುರ್ವರ್ತನೆ ತೋರಿದ ಹೊಳೆನರಸೀಪುರ ಶಾಸಕ ಎಚ್‍.ಡಿ. ರೇವಣ್ಣ ಅಂಗನವಾಡಿ ಕಾರ್ಯಕರ್ತರ ಬಳಿ ಬಹಿರಂಗ ಕ್ಷಮೆ ಕೇಳಬೇಕು ಎಂದು ಸಿಐಟಿಯು ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಬಾಬಾಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಜುಲೈ 13ರಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ರೇವಣ್ಣ, ಇಲ್ಲಿಯ ತನಕ ನಿಮ್ಮಗಳ ಬಗ್ಗೆ ದೂರುಗಳು ಬಂದರೂ ಕ್ರಮಕ್ಕೆ ಸೂಚಿಸಿರಲಿಲ್ಲ, ಇಂದು ವಿನಾಕಾರಣ ಧರಣಿ ನಡೆಸುತ್ತಿದ್ದೀರಿ, ಧರಣಿ ನಡೆಸಿ, ಏನು ಮಾಡಬೇಕು ಎಂದು ನನಗೆ ಗೊತ್ತಿದೆ. ಇವರಿಗೆಲ್ಲಾ ಗೈರುಹಾಜರಿ ಹಾಕಿ, ಗ್ರಾಮೀಣ ಜನರಿಂದ ದೂರು ಕೊಡಿಸಿ ಕೇಸು ದಾಖಲಿಸಿ, ಕೆಲವರನ್ನು ವಜಾ ಗೊಳಿಸಿದರೆ ಬುದ್ದಿ ಕಲಿಯುತ್ತಾರೆ ಎಂದು ರೇಗಿದ್ದರು.

ಈ ಸಂಬಂಧ ಸೋಮವಾರ ಸಿಐಟಿಯು ಮತ್ತು ಜನಪರ ಸಂಘಟನೆಗಳು ಖಂಡನಾ ಸಭೆ ಆಯೋಜಿಸಿದ್ದವು. ಈ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಅಧ್ಯಕ್ಷ ಧರ್ಮೇಶ್, ಅಂಗನವಾಡಿ ಕಾರ್ಯಕರ್ತೆಯರು ಕಳೆದ ಮೂರು ವರ್ಷಗಳಿಂದ ವಿವಿಧ ಬೇಡಿಕೆಗಳ ಸಂಬಂಧ ಅಧಿಕಾರಿಗಳ ಗಮನ ಸೆಳೆಯುತ್ತಿದ್ದ, ಈ ಬಗ್ಗೆ ಗಮನ ಹರಿಸದ ಪರಿಣಾಮ ಸಿಡಿಪಿಒ ಕಚೇರಿ ಮುಖ್ಯಾಧಿಕಾರಿಗೆ ನೋಟಿಸ್ ಅನ್ನು ನೀಡಿ ಪ್ರತಿಭಟನೆ ಕುಳಿತಿದ್ದಾರೆ. ಈ ವೇಳೆ ಏಕಾಏಕಿ ಆಗಮಿಸಿದ ಹೆಚ್.ಡಿ ರೇವಣ್ಣ ಅವರು ಮಹಿಳೆಯರು ಎಂದು ಸಹ ನೋಡದೆ ಅವಾಚ್ಯ ಪದಗಳಿಂದ ನಿಂಧಿಸಿರುವುದು ಖಂಡನಾರ್ಹವಾಗಿದೆ. ರೇವಣ್ಣ ಅವರು ತಮ್ಮ ಘನತೆಗೆ ತಕ್ಕಂತೆ ನಡೆದು ಕೊಳ್ಳಬೇಕು. ಪ್ರತಿಭಟನಾಕಾರರು ರೇವಣ್ಣ ಅವರ ವಿರುದ್ಧ ಹೋರಾಟ ಮಾಡುತ್ತಿರಲಿಲ್ಲ. ಹಲವು ವರ್ಷಗಳಿಂದ ನೌಕರಿ ಕಾಯಂ ಹಾಗೂ ವಿವಿಧ ಬೇಡಿಕೆಗೆ ಈಡೇರಿಕೆ ಆಗ್ರಹಿಸಿ ಕಾರ್ಯಕರ್ತೆಯರು ಹೋರಾಟ ನಡೆಸುತ್ತಿದ್ದಾರೆ ಇದರ ಮುಂದುವರೆದ ಭಾಗವಾಗಿ ಅಂದು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ರೇವಣ್ಣ ಅವರ ವರ್ತನೆ ಸರಿಯಲ್ಲ. ಕೂಡಲೇ ಬಹಿರಂಗವಾಗಿ ಅಂಗನವಾಡಿ ನೌಕರರಿಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಬಳಿಕ ಮಾತನಾಡಿದ ಹಿರಿಯ ದಲಿತ ಮುಖಂಡ ಎಚ್.ಕೆ.ಸಂದೇಶ್‍, ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ನೌಕರರ ಜೊತೆ ರೇವಣ್ಣ ವರ್ತಿಸಿರುವ ರೀತಿ ಒಬ್ಬ ಜನಪ್ರತಿನಿಧಿಗೆ ತಕ್ಕುದಾದುದಲ್ಲ. ರೇವಣ್ಣ ಅವರ ವರ್ತನೆ ಜಿಲ್ಲೆಯ ಜನಪರ ಚಳವಳಿಗಳಿಗೆ ಮಾಡಿರುವ ಅಪಮಾನ. ದೇವೇಗೌಡ ಮತ್ತು ಅವರ ಕುಟುಂಬದ ರಾಜಕೀಯ ಏಳಿಗೆಯಲ್ಲಿ ಜಿಲ್ಲೆಯ ದಲಿತ ಮತ್ತು ಜನಪರ ಚಳವಳಿಗಳ ಕೊಡುಗೆ ಎಷ್ಟಿದೆ ಎಂದು ಅವರ ತಂದೆ ದೇವೇಗೌಡರ ಬಳಿ ಕೇಳಿ ತಿಳಿದುಕೊಳ್ಳಬೇಕು. ಮಾಜಿ ಪ್ರಧಾನಗಳ ಮಗನಾಗಿ ಹೇಗೆ ಮಾತನಾಡಬೇಕು ಅರಿವು ಇಲ್ಲದಿರುವುದು ವಿಷಾದನೀಯ. ತಮ್ಮ ದುರ್ವರ್ತನೆಗೆ ರೇವಣ್ಣ ಕೂಡಲೇ ಅಂಗನವಾಡಿ ನೌಕರರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ದಸಂಸ ಜಿಲ್ಲಾ ಸಂಯೋಜಕ ರಾಜಶೇಖರ್ ಮಾತನಾಡಿ, ರೇವಣ್ಣ ತಾವು ಐದಾರು ಬಾರಿ ಸಚಿವ, ಶಾಸಕ ಆಗಿದ್ದವರು, ಮಾಜಿ ಪ್ರಧಾನಿಯವರ ಪುತ್ರ, ಸಂಸದ, ಶಾಸಕರೊಬ್ಬರ ತಂದೆ ಎಂಬುದನ್ನು ಮರೆತುಬಿಟ್ಟಿದ್ದಾರೆ. ಇದನ್ನು ಸದಾ ನೆನಪಲ್ಲಿ ಇಟ್ಟುಕೊಳ್ಳಬೇಕು. ಹೋರಾಟಗಾರರ ಬಗ್ಗೆ ಕೀಳಾಗಿ ಮಾತನಾಡಬಾರದು. ಅವರ ತಂದೆ ಅಂಗನವಾಡಿ ನೌಕರಿಗಿಂತ ಕೀಳಾಗಿ ಬದುಕಿದ್ದರು ಎಂದು ಹಿಂತಿರುಗಿ ನೋಡಬೇಕು. ಗುಂಡೂರಾವ್‍ ಸರ್ಕಾರದ ವಿರುದ್ಧ ರಾಜ್ಯದ ರೈತ, ದಲಿತರು ನಡೆಸಿದ ಹೋರಾಟದ ಫಲವಾಗಿ ಇವರ ಕುಟುಂಬ ರಾಜಕೀಯವಾಗಿ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅದೇ ಜನ ತಿರುಗಿಬಿದ್ದರೆ ಏನಾಗಲಿದೆ ಎಂದು ಈಗಾಗಲೇ ಒಂದು ಬಾರಿ ಅನುಭವಿಸಿದ್ದರೂ ಬುದ್ದಿ ಕಲಿತಿಲ್ಲ. ಮಾಡಿರುವ ತಪ್ಪಿಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‍ ಮುಖಂಡರಾದ ಬಾಗೂರು ಮಂಜೇಗೌಡ, ದಸಂಸ ಮುಖಂಡರಾದ ಈರಪ್ಪ, ಅಂಬುಗ ಮಲ್ಲೇಶ್, ಕೃಷ್ಣಕುಮಾರ್, ಆರ್ ಪಿಐ ಸತೀಶ್‍, ಭೀಮವಿಜಯ ಸಂಪಾದಕ ಹೆತ್ತೂರು ನಾಗರಾಜ, ಮಾದಿಗ ದಂಡೋರ ಸಮಿತಿಯ ವಿಜಯ್ ಕುಮಾರ್, ಸಿಐಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ ಮಾತನಾಡಿದರು, ಕಾರ್ಯದರ್ಶಿಗಳಾದ ಅಶೋಕ್ , ಸೌಮ್ಯ ಸಕಲೇಶಪುರ, ಕೆಪಿಆರ್ ಎಸ್ ಜಿಲ್ಲಾ ಅಧ್ಯಕ್ಷ ನವೀನ್ ಕುಮಾರ್, ಕಾರ್ಯದರ್ಶಿ ವಸಂತಕುಮಾರ್, ಡಿಎಚ್ಎಸ್ ಪೃಥ್ವಿ , ರಾಜು ಸಿಗರನಹಳ್ಳಿ, ಎಸ್ಎಫ್ಐನ ರಮೇಶ್‍, ಹೇಮಂತ, ಸಿಐಟಿಯು, ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *